ತಿರುವನಂತಪುರಂ: ರಾಮೋಜಿ ಸಮೂಹ ಸಂಸ್ಥೆಗಳ ಅಧ್ಯಕ್ಷ ರಾಮೋಜಿ ರಾವ್ ಅವರ ನಿಧನಕ್ಕೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಂತಾಪ ವ್ಯಕ್ತಪಡಿಸಿದ್ದಾರೆ. ಇದೇ ಸಂದರ್ಭದಲ್ಲಿ, ಕೇರಳದ ಪ್ರವಾಹ ಸಂಕಷ್ಟದ ಸಂದರ್ಭದಲ್ಲಿ ರಾಮೋಜಿ ರಾವ್ ಅವರು ಪುನರ್ನಿರ್ಮಾಣ ಕಾರ್ಯಗಳಿಗೆ ಕೊಡುಗೆ ನೀಡಿದ್ದರು ಎಂದು ಸ್ಮರಿಸಿದ್ದಾರೆ.
''ಚಲನಚಿತ್ರ ಮತ್ತು ಮಾಧ್ಯಮ ಲೋಕದ ದಾರ್ಶನಿಕರಾಗಿದ್ದ ರಾಮೋಜಿ ರಾವ್ ನಿಧನಕ್ಕೆ ನನ್ನ ಸಂತಾಪಗಳು. ಅವರ ದೂರದೃಷ್ಟಿ ಮತ್ತು ದೃಢಸಂಕಲ್ಪ ಅವರು ತೊಡಗಿದ್ದ ಪ್ರತೀ ಕ್ಷೇತ್ರದಲ್ಲೂ ಅಳಿಸಲಾಗದ ಛಾಪು ಮೂಡಿಸಿದೆ. ಎಲ್ಲರಿಗೂ ಮಾದರಿ ಮತ್ತು ಸ್ಫೂರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದರು'' ಎಂದು ತಿಳಿಸಿದ್ದಾರೆ.
2018ರಲ್ಲಿ ಕೇರಳದಲ್ಲಿ ಭೀಕರ ಪ್ರವಾಹ ಉಂಟಾಗಿತ್ತು. ಜನತೆ ಮನೆಗಳನ್ನು ಕಳೆದುಕೊಂಡು ತೀವ್ರ ಸಂಕಷ್ಟದಲ್ಲಿದ್ದರು. ಆ ಸಂದರ್ಭದಲ್ಲಿ ರಾಮೋಜಿ ಸಮೂಹ ಸಂಸ್ಥೆಗಳ ಪರವಾಗಿ ರಾಮೋಜಿ ರಾವ್ ಅವರು ಪ್ರವಾಹ ಸಂತ್ರಸ್ತರಿಗಾಗಿ 3 ಕೋಟಿ ರೂಪಾಯಿಗಳ 'ಈನಾಡು' ಪರಿಹಾರ ನಿಧಿ ಸ್ಥಾಪಿಸಿದ್ದರು. ಅಷ್ಟೇ ಅಲ್ಲದೇ ಜನತೆ, ವಿದ್ಯಾರ್ಥಿಗಳು, ಕೈಗಾರಿಕೋದ್ಯಮಿಗಳು, ಅನಿವಾಸಿ ಭಾರತೀಯರು ಸೇರಿದಂತೆ ಅನೇಕರು ತಮ್ಮ ಕೈಲಾದಷ್ಟು ದೇಣಿಗೆ ನೀಡಿದ್ದರು. ಅಂತಿಮವಾಗಿ, 7.77 ಕೋಟಿ ರೂ. ಸಂಗ್ರಹವಾಗಿತ್ತು. ಆ ಹಣದಲ್ಲಿ 121 ಕುಟುಂಬಗಳಿಗೆ ಎರಡು ಬೆಡ್ ರೂಂಗಳ ಮನೆಗಳನ್ನು ನಿರ್ಮಿಸಿಕೊಡಲಾಗಿತ್ತು.
ಇದನ್ನೂ ಓದಿ: ಅವಕಾಶ ದೊರೆತಾಗೆಲ್ಲ, ಕನ್ನಡದ ಡಿಂಡಿಮ ಬಾರಿಸಿದ್ದೇವೆ - ರಾಮೋಜಿ ರಾವ್ 'ಕನ್ನಡ' ಮಾತು; ಒಂದು ನೆನಪು