ನವದೆಹಲಿ: ದೆಹಲಿ ಮುಖ್ಯಮಂತ್ರಿ ಸ್ಥಾನಕ್ಕೆ ಇನ್ನೆರಡು ದಿನಗಳಲ್ಲಿ ರಾಜೀನಾಮೆ ನೀಡುವುದಾಗಿ ಆಮ್ ಆದ್ಮಿ ಪಾರ್ಟಿ (ಎಎಪಿ) ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಘೋಷಣೆ ಮಾಡಿದ್ದಾರೆ. ಈ ಬೆನ್ನಲ್ಲೇ ಮುಂದಿನ ಸಿಎಂ ಯಾರು ಎಂಬ ಪ್ರಶ್ನೆ ಉದ್ಭವಿಸಿದೆ. ಈ ಕುರಿತು ಚರ್ಚಿಸಲು ಪಕ್ಷದ ಹಿರಿಯ ನಾಯಕ ಮನೀಶ್ ಸಿಸೋಡಿಯಾ ಅವರೊಂದಿಗೆ ಇಂದು ಅರವಿಂದ್ ಕೇಜ್ರಿವಾಲ್ ಚರ್ಚೆಗೆ ಮುಂದಾಗಿದ್ದಾರೆ. ಮುಖ್ಯಮಂತ್ರಿಗಳ ಸಿವಿಲ್ ಲೈನ್ಸ್ ಪ್ರದೇಶದಲ್ಲಿರುವ ನಿವಾಸದಲ್ಲಿ ಸಭೆ ನಡೆಯಲಿದೆ.
ಅಬಕಾರಿ ನೀತಿ ಹಗರಣದಲ್ಲಿ ಆರು ತಿಂಗಳ ಕಾಲ ತಿಹಾರ್ ಜೈಲಿನಲ್ಲಿದ್ದ ಕೇಜ್ರಿವಾಲ್‌ಗೆ ಶುಕ್ರವಾರ ಸುಪ್ರೀಂ ಕೋರ್ಟ್ ಜಾಮೀನು ನೀಡಿತ್ತು. ಇದೇ ವೇಳೆ ಕೋರ್ಟ್, ಮುಖ್ಯಮಂತ್ರಿ ಕಚೇರಿಯಲ್ಲಿ ಕೇಜ್ರಿವಾಲ್ ಕರ್ತವ್ಯ ನಿರ್ವಹಿಸುವಂತಿಲ್ಲ ಹಾಗು ಯಾವುದೇ ಕಡತಗಳಿಗೂ ಸಹಿ ಹಾಕುವಂತಿಲ್ಲ ಎಂಬ ಷರತ್ತು ವಿಧಿಸಿದೆ.
ಮುಖ್ಯಮಂತ್ರಿ ರೇಸ್‌ನಲ್ಲಿ ಯಾರಿದ್ದಾರೆ?: ಇದಾದ ಬಳಿಕ ನಿನ್ನೆ (ಭಾನುವಾರ) ಕೇಜ್ರಿವಾಲ್ ತಾವು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಅನೀರಿಕ್ಷಿತ ಬೆಳವಣಿಗೆಯ ಬೆನ್ನಲ್ಲೇ ಮುಂದಿನ ಸಿಎಂ ಯಾರು ಎಂಬ ಪ್ರಶ್ನೆ ಉದ್ಘವಿಸಿದೆ. ಕೇಜ್ರಿವಾಲ್ ಪತ್ನಿ ಸುನೀತಾ, ಸಚಿವೆ ಅತಿಶಿ ಮತ್ತು ಗೋಪಾಲ್ ರೈ ಹೆಸರುಗಳು ಮುಂಚೂಣಿಯಲ್ಲಿವೆ.
ಭಾನುವಾರ ಪಕ್ಷದ ಕಾರ್ಯಕರ್ತರೊಂದಿಗಿನ ಸಭೆಯಲ್ಲಿ ಮಾತನಾಡಿದ್ದ ಕೇಜ್ರಿವಾಲ್, ಜೈಲಿನಿಂದ ಹೊರಬಂದ ಮೇಲೆ ಮೇಲೆ ನಾನು ಅಗ್ನಿಪರೀಕ್ಷೆ ಒಳಗಾಗಲಿದ್ದೇನೆ. ಜನರು ಪ್ರಾಮಾಣಿಕತೆಯ ಪ್ರಮಾಣಪತ್ರ ನೀಡುವವರೆಗೂ ನಾನು ಮುಖ್ಯಮಂತ್ರಿ ಕುರ್ಚಿ ಮೇಲೆ ಕೂರಲ್ಲ. 2025ರ ಫೆಬ್ರವರಿ ವೇಳೆಗೆ ದೆಹಲಿ ಚುನಾವಣೆ ಇದೆ. 2024ರ ನವೆಂಬರ್ನಲ್ಲಿಯೇ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯೊಂದಿಗೆ ದೆಹಲಿಗೂ ಚುನಾವಣೆ ನಡೆಸುವಂತೆ ನಾವು ಬೇಡಿಕೆ ಇಡುತ್ತೇನೆ. ಜನರು ನಮ್ಮನ್ನು ಪ್ರಾಮಾಣಿಕರೆಂದು ಹೇಳಿದ ಬಳಿಕವೇ ನಾನು ಸಿಎಂ ಮತ್ತು ಸಿಸೋಡಿಯಾ ಡಿಸಿಎಂ ಆಗುತ್ತೇವೆ ಎಂದಿದ್ದರು.
ಇದನ್ನೂ ಓದಿ: ಇನ್ನೆರಡು ದಿನಗಳಲ್ಲಿ ದೆಹಲಿ ಸಿಎಂ ಸ್ಥಾನಕ್ಕೆ ರಾಜೀನಾಮೆ: ಅರವಿಂದ್ ಕೇಜ್ರಿವಾಲ್ ಘೋಷಣೆ