ಚೆನ್ನೈ (ತಮಿಳುನಾಡು): ತಮಿಳುನಾಡಿನ ಕಲ್ಪಕಂ ಅಣುಸ್ಥಾವರದ ಭದ್ರತಾ ಸಿಬ್ಬಂದಿಯಾಗಿದ್ದ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ (ಸಿಎಎಸ್ಎಫ್) ಯೋಧರೊಬ್ಬರು ಅಚಾನಕ್ಕಾಗಿ ಸರ್ವೀಸ್ ಬಂದೂಕಿನಿಂದ ಹಾರಿಬಂದ ಗುಂಡು ತಗುಲಿ ಸಾವನ್ನಪ್ಪಿದ ಘಟನೆ ಶನಿವಾರ ನಡೆದಿದೆ.
ಕರ್ನಾಟಕದ ಬೆಂಗಳೂರಿನ ರವಿಕಿರಣ್ (37) ಮೃತ ಯೋಧ. ಇವರು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ ಯೋಧರಾಗಿದ್ದರು. ಕಳೆದ ಒಂದು ವರ್ಷದಿಂದ ಅವರು ತಮಿಳುನಾಡಿನ ಕಲ್ಪಕಂ ಅಣುಸ್ಥಾವರದ ಭದ್ರತಾ ಪಡೆಯಲ್ಲಿದ್ದರು. ಮೇ 18 ರಂದು ಕೆಲಸ ಮುಗಿಸಿ ಸಿಬ್ಬಂದಿ ಜೊತೆಗೆ ವಾಪಸ್ ಆಗುತ್ತಿದ್ದರು. ಈ ವೇಳೆ ರಸ್ತೆ ನಡುವಿನ ಸ್ಪೀಡ್ ಬ್ರೇಕರ್ನಿಂದ ವಾಹನ ದಿಢೀರ್ ಬ್ರೇಕ್ ಹಾಕಿದಾಗ, ರವಿಕಿರಣ್ ಅವರ ಕೈಯಲ್ಲಿದ್ದ ಬಂದೂಕು ಸಿಡಿದಿದೆ.
ತುಪಾಕಿಯಿಂದ ಗುಂಡು ಹಾರಿ ರವಿಕಿರಣ್ ಅವರ ಕುತ್ತಿಗೆಗೆ ತಗುಲಿದೆ. ಇದರಿಂದ ಅವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಅಚಾನಕ್ಕಾಗಿ ಸಂಭವಿಸಿದ ಘಟನೆಯಿಂದ ಜೊತೆಗಿದ್ದ ಇತರ ಸಿಬ್ಬಂದಿ ಈ ಮಾಹಿತಿಯನ್ನು ಮೇಲಾಧಿಕಾರಿಗಳಿಗೆ ತಿಳಿಸಿದ್ದಾರೆ.
ಮಾಹಿತಿ ಪಡೆದ ಸತುರಂಗಪಟ್ಟಣಂ ಪೊಲೀಸರು ಸ್ಥಳಕ್ಕೆ ಬಂದು ರವಿಕಿರಣ್ ಮೃತದೇಹವನ್ನು ವಶಕ್ಕೆ ಪಡೆದು, ಮರಣೋತ್ತರ ಪರೀಕ್ಷೆಗಾಗಿ ಕಲ್ಪಕ್ಕಂ ಅಣುವಿದ್ಯುತ್ ಕೇಂದ್ರದ ನಿಯಂತ್ರಿತ ಆಸ್ಪತ್ರೆಗೆ ಕಳುಹಿಸಿದ್ದಾರೆ. ನಂತರ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಇದು ಅನಿರೀಕ್ಷಿತವಾಗಿ ನಡೆದಿದೆಯೋ ಅಥವಾ ಆತ್ಮಹತ್ಯೆಯೇ ಎಂಬುದನ್ನು ಪತ್ತೆ ಮಾಡಲು ಪೊಲೀಸರು ವಿವಿಧ ಕೋನಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.