ಚೆನ್ನೈ(ತಮಿಳುನಾಡು): ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನಟ ಕಮಲ್ಹಾಸನ್ ಅವರ ಪಕ್ಷ ಮಕ್ಕಳ್ ನೀಧಿ ಮೈಯಂ ಜೊತೆ ಡಿಎಂಕೆ ಒಪ್ಪಂದ ಮಾಡಿಕೊಂಡಿದೆ. ಕಮಲ್ ಹಾಸನ್ ಮಾರ್ಚ್ 9 ರಂದು ಚೆನ್ನೈನಲ್ಲಿ ಮೈತ್ರಿ ಘೋಷಣೆ ಮಾಡಿದ್ದಾರೆ. ಮೈತ್ರಿ ಘೋಷಣೆ ಮಾಡಿ ಮಾತನಾಡಿದ ಅವರು, "ನಾನು ಮತ್ತು ನನ್ನ ಪಕ್ಷ ಈ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಆದರೆ, ಈ ಮೈತ್ರಿಗೆ ನಾವು ಎಲ್ಲ ಸಹಕಾರ ನೀಡುತ್ತೇವೆ. ಇದು ಕೇವಲ ಸ್ಥಾನಕ್ಕಾಗಿ ಅಲ್ಲ ರಾಷ್ಟ್ರಕ್ಕಾಗಿ ಕೈಜೋಡಿಸಿದ್ದೇವೆ‘‘ ಎಂದು ಹೇಳಿದರು.
ಕಮಲ್ ಹಾಸನ್ ಅವರು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಮತ್ತು ರಾಜ್ಯ ಸಚಿವ ಉದಯನಿಧಿ ಸ್ಟಾಲಿನ್ ಅವರನ್ನು ಚೆನ್ನೈನಲ್ಲಿರುವ ಡಿಎಂಕೆ ಕಚೇರಿಯಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು. ಮಕ್ಕಳ ನೀಧಿ ಮೈಯಂ ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ, ಪಕ್ಷವು ಡಿಎಂಕೆ ಹಾಗೂ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತದೆ ಮತ್ತು ಪ್ರಚಾರ ಮಾಡುತ್ತದೆ. ರಾಜ್ಯಸಭೆಯಲ್ಲಿ ಎಂಎನ್‌ಎಂಗೆ 2025ರಲ್ಲಿ ಒಂದು ಸ್ಥಾನ ನೀಡಲಾಗುತ್ತದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಅರುಣಾಚಲಂ ಹೇಳಿದ್ದಾರೆ.
ಡಿಎಂಕೆ ಇಂಡಿಯಾ ಮೈತ್ರಿಕೂಟದ ಕಾಂಗ್ರೆಸ್ ಪಕ್ಷದೊಂದಿಗೆ ಸೀಟು ಹಂಚಿಕೆ ಮಾಡಿಕೊಂಡಿದೆ. ಈಗಾಗಲೇ ತಮಿಳುನಾಡು ಸರ್ಕಾರದಲ್ಲಿ ಎರಡೂ ಪಕ್ಷಗಳು ಪಾಲುದಾರರಾಗಿರುವುದು ಗೊತ್ತೇ ಇದೆ. ಹಾಸನ್ ಅವರು ಹಲವು ತಿಂಗಳ ಹಿಂದೆ ತಮಿಳುನಾಡಿನಲ್ಲಿ ಡಿಎಂಕೆ ನೇತೃತ್ವದ ಕಾಂಗ್ರೆಸ್ ಒಳಗೊಳ್ಳುವ ಮೈತ್ರಿಕೂಟದತ್ತ ಹೆಚ್ಚಿನ ಒಲವು ತೋರಿದ್ದರು.
ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಡಿಎಂಕೆ ನಾಯಕ ಮತ್ತು ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್, ಸಂಸತ್ ಚುನಾವಣೆಗೆ ಮುಂಚಿತವಾಗಿ ಹಾಸನದ ಎಂಎನ್‌ಎಂ ಜೊತೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಸುಳಿವು ನೀಡಿದ್ದರು. ತಮಿಳುನಾಡಿನಲ್ಲಿ ಒಟ್ಟಾರೆ 39 ಲೋಕಸಭಾ ಸ್ಥಾನಗಳನ್ನು ಹೊಂದಿದೆ. ಕಾಂಗ್ರೆಸ್, ಸಿಪಿಐ, ಸಿಪಿಐ (ಎಂ), ವಿದುತಲೈ ಚಿರುತೈಕಲ್ (ವಿಸಿಕೆ) ಮತ್ತು ಸಣ್ಣ ಪಕ್ಷಗಳನ್ನು ಒಳಗೊಂಡಿರುವ ಡಿಎಂಕೆ ನೇತೃತ್ವದ ಮೈತ್ರಿಕೂಟವು 2019 ರ ಚುನಾವಣೆಯಲ್ಲಿ ಒಟ್ಟು 39 ಸ್ಥಾನಗಳಲ್ಲಿ 38 ಕ್ಷೇತ್ರಗಳಲ್ಲಿ ಜಯ ಸಾಧಿಸಿತ್ತು. 2019ರಲ್ಲಿ ಎನ್ಡಿಎ ಮೈತ್ರಿಕೂಟ ಅತ್ಯಂತ ಕಳಪೆ ಸಾಧನೆ ಮಾಡಿದ ರಾಜ್ಯಗಳಲ್ಲಿ ತಮಿಳುನಾಡು ಮೊದಲ ಸ್ಥಾನದಲ್ಲಿದೆ.
2019 ರಲ್ಲಿ ದೇಶಾದ್ಯಂತ ಏಪ್ರಿಲ್ 11 ರಿಂದ ಮೇ 19ರವರೆಗೂ ಒಟ್ಟು ಏಳು ಹಂತಗಳಲ್ಲಿ ಚುನಾವಣೆ ನಡೆದಿತ್ತು. ಮೇ 23 ರಂದು ಫಲಿತಾಂಶ ಪ್ರಕಟಗೊಂಡಿತ್ತು. ಒಟ್ಟು 543 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 303 ಸ್ಥಾನಗಳಲ್ಲಿ ಜಯ ಸಾಧಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಎರಡನೇ ಬಾರಿಗೆ ಪ್ರಧಾನಿಯಾಗಿ ಆಯ್ಕೆ ಆಗಿದ್ದರು.
ಇದನ್ನು ಓದಿ: ಕಾಜಿರಂಗ್ನಲ್ಲಿ ಆನೆ-ಜೀಪ್ ಸಫಾರಿ ಮಾಡಿದ ಪ್ರಧಾನಿ ಮೋದಿ