ನವದೆಹಲಿ: ಕಾವೇರಿ ನದಿ ನೀರು ವಿವಾದದಲ್ಲಿ ಕರ್ನಾಟಕದ ಪರ ಸುಪ್ರೀಂಕೋರ್ಟ್ನಲ್ಲಿ ದೀರ್ಘವಾಗಿ ವಾದ ಮಂಡಿಸಿದ್ದ ಖ್ಯಾತ ಹಿರಿಯ ವಕೀಲ, ಮಾಜಿ ಸಾಲಿಸಿಟರ್ ಜನರಲ್ ಪಾಲಿ ಎಸ್ ನಾರಿಮನ್ ಅವರು ಬುಧವಾರ ನಿಧನರಾದರು. ಸುಪ್ರೀಂಕೋರ್ಟ್ನ ಖ್ಯಾತ ವಕೀಲರು, ನ್ಯಾಯಶಾಸ್ತ್ರಜ್ಞರೂ ಆಗಿದ್ದ 95 ವರ್ಷ ವಯಸ್ಸಿನ ಪಾಲಿ ನಾರಿಮನ್ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ನವದೆಹಲಿಯಲ್ಲಿ ಇಂದು ಮಧ್ಯರಾತ್ರಿ 1 ಗಂಟೆಗೆ ಅವರು ದೈವಾಧೀನರಾದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ನಾರಿಮನ್ ಅವರು ಜನವರಿ 10, 1929ರಂದು ಮ್ಯಾನ್ಮಾರ್‌ನಲ್ಲಿ ಪಾರ್ಸಿ ಕುಟುಂಬದಲ್ಲಿ ಜನಿಸಿದ್ದರು. ಬಳಿಕ ಅವರ ಕುಟುಂಬ ಭಾರತಕ್ಕೆ ಬಂದಿತ್ತು. ಬಾಂಬೆ ಹೈಕೋರ್ಟ್‌ನಲ್ಲಿ ಮೊದಲು ವಕೀಲರಾಗಿ ಅಭ್ಯಾಸವನ್ನು ಪ್ರಾರಂಭಿಸಿದ್ದ ಅವರು, ನಂತರ ದೆಹಲಿಗೆ ತೆರಳಿದ್ದರು. ನ್ಯಾಯಶಾಸ್ತ್ರದಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದ ನಾರಿಮನ್, 1972ರಲ್ಲಿ ಭಾರತದ ಸಾಲಿಸಿಟರ್ ಜನರಲ್ ಆಗಿಯೂ ನೇಮಕಗೊಂಡಿದ್ದರು.
ಇಂದಿರಾ ವಿರುದ್ಧ ಸಿಡಿದಿದ್ದ ಲಾಯರ್: ಸುಪ್ರೀಂಕೋರ್ಟ್ನಲ್ಲಿ ವಕೀಲಿಕೆ ಮಾಡುತ್ತಿದ್ದ ನಾರಿಮನ್ರ ಖ್ಯಾತಿ ಆಗಸದಷ್ಟಿತ್ತು. ಪ್ರಖರ ವಾದದಿಂದಾಗಿಯೇ ಗಮನ ಸೆಳೆಯುತ್ತಿದ್ದರು. 1975ರಲ್ಲಿ ಆಗಿನ ಪ್ರಧಾನಿ ಇಂದಿರಾ ಗಾಂಧಿಯವರು ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸುವ ನಿರ್ಧಾರವನ್ನು ವಿರೋಧಿಸಿದವರಲ್ಲಿ ನಾರಿಮನ್ ಕೂಡ ಒಬ್ಬರಾಗಿದ್ದರು. ಇಂದಿರಾ ಅವರ ನಿರ್ಧಾರವನ್ನು ಧಿಕ್ಕರಿಸಿ ಸಾಲಿಸಿಟರ್ ಜನರಲ್ ಹುದ್ದೆಗೆ ರಾಜೀನಾಮೆ ನೀಡಿದ್ದರು.
ಖ್ಯಾತ ನ್ಯಾಯಶಾಸ್ತ್ರಜ್ಞರಿಗೆ 1991ರಲ್ಲಿ ಪದ್ಮಭೂಷಣ ಮತ್ತು 2007ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಅವರ ಪುತ್ರ ರೋಹಿಂಟನ್ ನಾರಿಮನ್ ಕೂಡ ಹಿರಿಯ ವಕೀಲರಾಗಿದ್ದು, ಈಗ ಸುಪ್ರೀಂಕೋರ್ಟ್ನ ನ್ಯಾಯಮೂರ್ತಿಯಾಗಿದ್ದಾರೆ.
ಕರ್ನಾಟಕ ಪರ ಕಾವೇರಿ ವಾದ: ತಮಿಳುನಾಡು ಮತ್ತು ಕರ್ನಾಟಕದ ನಡುವಿನ ಕಾವೇರಿ ಜಲವಿವಾದಗಳಲ್ಲಿ ಕರ್ನಾಟಕದ ಪರವಾಗಿ ಸಮರ್ಥ ವಾದ ಮಂಡಿಸಿ ಹಲವು ವ್ಯಾಜ್ಯಗಳಲ್ಲಿ ಜಯ ತಂದು ಕೊಟ್ಟ ಖ್ಯಾತಿ ನಾರಿಮನ್ ಅವರದ್ದು. ಹಲವು ವರ್ಷಗಳ ಕಾಲ ರಾಜ್ಯದ ಪರವಾಗಿ ಸುಪ್ರೀಂಕೋರ್ಟ್ ವಾದ ಮಂಡಿಸಿದ್ದರು.
ಹಿರಿಯ ವಕೀಲ ಮತ್ತು ಕಾಂಗ್ರೆಸ್ ನಾಯಕ ಅಭಿಷೇಕ್ ಮನು ಸಿಂಘ್ವಿ ಅವರು ಫಾಲಿ ನಾರಿಮನ್ ಅವರ ನಿಧನದ ಬಗ್ಗೆ ಎಕ್ಸ್ ಖಾತೆಯಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದು, ದುಃಖವನ್ನು ವ್ಯಕ್ತಪಡಿಸಿದ್ದಾರೆ. ಫಾಲಿ ನಾರಿಮನ್ ನಿಧನವು ಯುಗವೊಂದರ ಅಂತ್ಯ. ಕಾನೂನು ಮತ್ತು ಸಾರ್ವಜನಿಕ ಜೀವನದಲ್ಲಿ ಶಾಶ್ವತವಾಗಿ ಹೃದಯ ಮತ್ತು ಮನಸ್ಸಿನಲ್ಲಿ ಉಳಿಯುವ ಜೀವಂತ ದಂತಕಥೆ. ಅಮೋಘ ಸಾಧಕನನ್ನು ಈ ಕಾಲ ಕಳೆದುಕೊಂಡಿದೆ. ಅವರ ನಿಷ್ಠುರ ಗುಣವನ್ನು ಅವರ ಮೇಧಾವಿ ಮಗ ರೋಹಿಂಟನ್ ನಾರಿಮನ್ ಹೊಂದಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಸೋನಿಯಾ ಗಾಂಧಿ, ನಡ್ಡಾ, ವೈಷ್ಣವ್ ಸೇರಿ 41 ಮಂದಿ ರಾಜ್ಯಸಭೆಗೆ ಅವಿರೋಧ ಆಯ್ಕೆ