ಶ್ರೀನಗರ: ಸಂವಿಧಾನದ 311ನೇ ವಿಧಿಯ ಅಡಿಯಲ್ಲಿ ದೇಶ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಜಮ್ಮು ಮತ್ತು ಕಾಶ್ಮೀರ ಸರ್ಕಾರ ಶಿಕ್ಷಕನನ್ನು ವಜಾಗೊಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಂಜೂರ್ ಅಹ್ಮದ್ ಲಾವೆ ಎಂಬುವರು ಶಿಕ್ಷಣ ಇಲಾಖೆಯಲ್ಲಿ ಶಿಕ್ಷಕರಾಗಿದ್ದರು. ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಡಿಹೆಚ್ ಪೋರಾ ಪೊಲೀಸ್ ಠಾಣೆ ವ್ಯಾಪ್ತಿಯ ಮಂಜ್ಗಾಮ್ ನಿವಾಸಿಯಾಗಿದ್ದಾರೆ.
ಉದ್ಯೋಗಿಯ ದೇಶ ವಿರೋಧಿ ಚಟುವಟಿಕೆಗಳು ಕಾನೂನು ಜಾರಿ ಮತ್ತು ಗುಪ್ತಚರ ಸಂಸ್ಥೆಗಳ ಗಮನಕ್ಕೆ ಬಂದಿವೆ. ಆತ ಭಯೋತ್ಪಾದನೆ ಸಂಬಂಧಿತ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದು ಏಜೆನ್ಸಿಗಳು ಪತ್ತೆ ಹಚ್ಚಿವೆ. ಕುಲ್ಗಾಮ್‌ನ ಡಿಎಚ್ ಪೋರಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎರಡು ಎಫ್‌ಐಆರ್‌ಗಳಲ್ಲಿ ಲಾವೆ ಹೆಸರಿದೆ. ಮೊದಲ ಪ್ರಕರಣವು ಜುಲೈ 9, 2016ರ ಹಿಂದಿನದು, ಲಾವೆ ಮತ್ತು ಅವರ ಸಹಚರರು ಸರ್ಕಾರಿ ಆಸ್ತಿಗೆ ಹಾನಿ ಮತ್ತು ನಾಶವನ್ನು ಉಂಟುಮಾಡುವ ಗುಂಪನ್ನು ಪ್ರಚೋದಿಸಿದ್ದರು. ಜನಸಮೂಹವು ಡಿಎಚ್ ಪೋರಾ ಪೊಲೀಸ್ ಠಾಣೆ ಕಡೆಗೆ ಮೆರವಣಿಗೆ ನಡೆಸಿತ್ತು. ಮತ್ತು ಪೊಲೀಸ್ ಠಾಣೆಗೆ ಬೆಂಕಿ ಹಚ್ಚುವ ಮೊದಲು ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಇತರ ಸೊತ್ತನ್ನು ದೋಚಲಾಗಿತ್ತು.
ಸೆಪ್ಟೆಂಬರ್ 10, 2016 ರಂದು ನಡೆದ ಎರಡನೇ ಪ್ರಕರಣದಲ್ಲಿ, ಆರೋಪಿ ಲಾವೆ ಮತ್ತು ಅವರ ಸಹಚರರು ಅಶಿಸ್ತಿನ ಗುಂಪನ್ನು ಮುನ್ನಡೆಸಿದ್ದರು. ಈ ಗುಂಪು ಪೊಲೀಸ್ ಮತ್ತು ಭದ್ರತಾ ಪಡೆಗಳ ಜಂಟಿ ತಂಡದ ಮೇಲೆ ಕಲ್ಲು ತೂರಾಟ ಮತ್ತು ಮನಬಂದಂತೆ ಗುಂಡು ಹಾರಿಸಿತ್ತು. ಸರ್ಕಾರಿ ಸೇವೆಯಲ್ಲಿ ಲಾಭ ಪಡೆಯುವ ಉದ್ದೇಶದಿಂದ ದೇಶ ವಿರೋಧಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು. ಇದಕ್ಕೂ ಮೊದಲು, ಸಂವಿಧಾನದ 311 ನೇ ವಿಧಿಯಡಿಯಲ್ಲಿ 56 ಸರ್ಕಾರಿ ಅಧಿಕಾರಿಗಳನ್ನು ವಜಾಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ದೆಹಲಿ ಮದ್ಯ ಹಗರಣ: ಬಿಆರ್‌ಎಸ್ ನಾಯಕಿ ಕವಿತಾ ಬಂಧಿಸಿ ದೆಹಲಿಗೆ ಕರೆತಂದ ಇ.ಡಿ