ಜಬಲ್ಪುರ (ಮಧ್ಯಪ್ರದೇಶ) : ಇಲ್ಲಿನ ಖಮಾರಿಯಾದ ಆರ್ಡನೆನ್ಸ್ (ಶಸ್ತ್ರಾಸ್ತ್ರ) ಫ್ಯಾಕ್ಟರಿಯಲ್ಲಿ ಭಾರಿ ಸ್ಫೋಟ ಸಂಭವಿಸಿದೆ. ಇದರಿಂದಾಗಿ ಸ್ಥಳದಲ್ಲಿದ್ದ 13 ಮಂದಿ ನೌಕರರು ತೀವ್ರವಾಗಿ ಗಾಯಗೊಂಡಿದ್ದಾರೆ. ಈ ಎಲ್ಲ ಉದ್ಯೋಗಿಗಳನ್ನು ಚಿಕಿತ್ಸೆಗಾಗಿ ಜಬಲ್‌ಪುರದ ಖಾಸಗಿ ಆಸ್ಪತ್ರೆಗೆ ಕರೆತರಲಾಗಿದೆ. ಇವರಲ್ಲಿ ಇಬ್ಬರು ನೌಕರರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.
ಜಬಲ್ಪುರದಲ್ಲಿ ಭಾರತ ಸರ್ಕಾರದ ರಕ್ಷಣಾ ಸಚಿವಾಲಯದ ದೊಡ್ಡ ಕಾರ್ಖಾನೆಯಿದೆ. ಇದನ್ನು ಆರ್ಡನೆನ್ಸ್ ಫ್ಯಾಕ್ಟರಿ ಎಂದು ಕರೆಯಲಾಗುತ್ತದೆ. ಸೇನೆ ಬಳಸುವ ಹಲವು ಆಯುಧಗಳನ್ನು ಈ ಕಾರ್ಖಾನೆಯಲ್ಲಿಯೇ ತಯಾರಿಸಲಾಗುತ್ತದೆ.
ಇಲ್ಲಿ ಯುದ್ಧ ವಿಮಾನಗಳು ಮತ್ತು ಯುದ್ಧ ಟ್ಯಾಂಕರ್ಗಳಿಗೆ ಬಾಂಬ್‌ಗಳನ್ನು ತಯಾರಿಸಲಾಗುತ್ತದೆ. ಈ ಬಾಂಬ್‌ಗಳನ್ನು ತಯಾರಿಸಲು, ಬಾಂಬ್‌ನ ಖಾಲಿ ಸೆಲ್‌ನಲ್ಲಿ ಗನ್‌ಪೌಡರ್ ಅನ್ನು ತುಂಬಬೇಕಾಗುತ್ತದೆ. ಈ ಗನ್‌ಪೌಡರ್ ಸಣ್ಣದೊಂದು ಘರ್ಷಣೆ ಏರ್ಪಟ್ಟರೂ ಸ್ಫೋಟಗೊಳ್ಳುತ್ತದೆ. ಜಬಲ್ಪುರದ ಆರ್ಡನೆನ್ಸ್ ಫ್ಯಾಕ್ಟರಿಯಲ್ಲಿ ಇಂತಹ ಘಟನೆಗಳು ಪ್ರತಿದಿನ ನಡೆಯುತ್ತಲೇ ಇರುತ್ತವೆ.
ಸ್ಫೋಟದಿಂದಾಗಿ ಈ ಘಟಕದ ಕಟ್ಟಡಕ್ಕೆ ಸಂಪೂರ್ಣ ಹಾನಿಯಾಗಿದೆ ಎಂದು ಸ್ಥಳದಲ್ಲಿದ್ದವರು ಹೇಳಿದ್ದಾರೆ. ಸ್ಫೋಟ ಸಂಭವಿಸಿದ ಸ್ಥಳವು ಕಾರ್ಖಾನೆಯ ಸುರಕ್ಷಿತ ಪ್ರದೇಶವಾಗಿದ್ದು, ಹೊರಗಿನವರು ಇಲ್ಲಿಗೆ ಬರಲು ಅವಕಾಶವಿಲ್ಲ. ಹೀಗಾಗಿ, ಕಾರ್ಖಾನೆಯಿಂದ ಅಧಿಕೃತ ಮಾಹಿತಿ ಬಂದ ನಂತರವೇ ಹಾನಿಯ ಪ್ರಮಾಣ ತಿಳಿಯಲಿದೆ. ಸದ್ಯಕ್ಕೆ ಸ್ಫೋಟ ಏಕೆ ಸಂಭವಿಸಿತು? ಎಂಬುದರ ಬಗ್ಗೆ ನಿಖರ ಮಾಹಿತಿ ತಿಳಿದುಬಂದಿಲ್ಲ.
ಇದನ್ನೂ ಓದಿ : ಪಶ್ಚಿಮ ಬಂಗಾಳದ ಕಲ್ಲಿದ್ದಲು ಗಣಿಯಲ್ಲಿ ಸ್ಫೋಟ: 7 ಕಾರ್ಮಿಕರು ಸಾವು, ಹಲವರಿಗೆ ಗಾಯ - Coal Mine Blast