ಹೈದರಾಬಾದ್ (ತೆಲಂಗಾಣ): ಇಂದು ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಎಲ್ಲೆಡೆ ಸಂತಸದಿಂದ ಆಚರಿಸಲಾಗುತ್ತಿದೆ. ಜಗತ್ತಿನ ಅತಿದೊಡ್ಡ ಚಿತ್ರನಗರಿ ಎಂಬ ಖ್ಯಾತಿಯ ಹೈದರಾಬಾದ್ನ ರಾಮೋಜಿ ಫಿಲ್ಮ್ ಸಿಟಿಯಲ್ಲೂ ಮಹಿಳಾ ದಿನಾಚರಣೆಯ ಸಂಭ್ರಮ ಮನೆ ಮಾಡಿದೆ. 'ಇನ್‌ಸ್ಪೈರ್ ಇನ್‌ಕ್ಲೂಷನ್' ಎಂಬ ಥೀಮ್‌ನೊಂದಿಗೆ ನಡೆದ ಸಂಭ್ರಮಾಚರಣೆಯಲ್ಲಿ ಫಿಲ್ಮ್ ಸಿಟಿಯ ವಿವಿಧ ವಿಭಾಗಗಳ ಮಹಿಳಾ ಉದ್ಯೋಗಿಗಳು ಉತ್ಸಾಹದಿಂದ ಭಾಗವಹಿಸಿದರು.
ರಾಮೋಜಿ ಫಿಲ್ಮ್ ಸಿಟಿಯಲ್ಲಿ ಆಯೋಜಿಸಿದ್ದ ಈ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ತೆಲಂಗಾಣದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸೀತಕ್ಕ ಮುಖ್ಯ ಅತಿಥಿಯಾಗಿ ಪಾಲ್ಗೊಂಡರು. ಫಿಲ್ಮ್ ಸಿಟಿ ವ್ಯವಸ್ಥಾಪಕ ನಿರ್ದೇಶಕಿ ಸಿ.ಎಚ್.ವಿಜಯೇಶ್ವರಿ, ಉಷೋದಯ ಎಂಟರ್‌ಪ್ರೈಸಸ್ ನಿರ್ದೇಶಕಿ ಸಹಾರಿ, ಫಿಲ್ಮ್‌ಸಿಟಿ ನಿರ್ದೇಶಕಿ ಕೀರ್ತಿ ಸೋಹಾನಾ ಜ್ಯೋತಿ ಬೆಳಗಿಸುವ ಮೂಲಕ ಸಮಾರಂಭಕ್ಕೆ ಚಾಲನೆ ನೀಡಿದರು.
ಮಹಿಳಾ ದಿನಾಚರಣೆ ನಿಮಿತ್ತ ಸಚಿವೆ ಸೀತಕ್ಕ, ಎಂಡಿ ವಿಜಯೇಶ್ವರಿ, ಕೀರ್ತಿ ಸೋಹಾನಾ, ಸಹಾರಿ ಅವರು ಸೇರಿಕೊಂಡು ಕೇಕ್ ಕತ್ತರಿಸಿದರು. ನಂತರ ಸೀತಕ್ಕ ಅವರನ್ನು ಎಂಡಿ ವಿಜಯೇಶ್ವರಿ ಸನ್ಮಾನಿಸಿದರು. ಅಲ್ಲದೇ, ಫಿಲ್ಮ್ ಸಿಟಿಯ ವಿವಿಧ ವಿಭಾಗಗಳ ಮಹಿಳಾ ಉದ್ಯೋಗಿಗಳಿಗಾಗಿ ಆಯೋಜಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಅಭಿನಂದಿಸಿದರು.
ಇದನ್ನೂ ಓದಿ: 80ನೇ ವಯಸ್ಸಿನಲ್ಲೂ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡುವ ಸರ್ಕಾರಿ ನಿವೃತ್ತ ವೈದ್ಯೆ ವೀಣಾ!
ಈ ಸಮಾರಂಭ ಉದ್ದೇಶಿಸಿ ಮಾತನಾಡಿದ ಸಚಿವೆ ಸೀತಕ್ಕ, ಈ ಸಮಾಜದಲ್ಲಿ ಮಹಿಳೆಯರಿಲ್ಲದೆ ಸೃಷ್ಟಿಯೇ ಇಲ್ಲ. ಮಹಿಳೆಯರನ್ನು ಎರಡನೇ ದರ್ಜೆಯ ಪ್ರಜೆಗಳೆಂದು ಪರಿಗಣಿಸುವ ಸಮಾಜ ಸರಿಯಲ್ಲ. ಒಂದು ಕಾಲದಲ್ಲಿ ಮಾತೃಪ್ರಧಾನ ಸಮಾಜವಾಗಿದ್ದ ಪರಿಸ್ಥಿತಿಯು ನಿಧಾನವಾಗಿ ಪುರುಷ ಪ್ರಧಾನ ಸಮಾಜಕ್ಕೆ ಬದಲಾಗಿದೆ ಎಂದರು.
ಎಲ್ಲೆಲ್ಲಿ ಹೆಣ್ಣನ್ನು ಪೂಜಿಸುತ್ತಾರೋ ಅಲ್ಲೆಲ್ಲ ದೇವರಿರುತ್ತಾರೆ ಎಂದು ಹೇಳಲಾಗುತ್ತದೆ. ಪುರುಷರ ವಿಚಾರಧಾರೆ ಬದಲಾಗಬೇಕು. ಮಹಿಳೆಯರು ಸಮಸ್ಯೆಗಳ ಬಂದಾಗ ಓಡಿಹೋಗದೇ ಅವುಗಳನ್ನು ಎದುರಿಸಬೇಕು. ಮಹಿಳೆಯರು ಸಮಸ್ಯೆಗಳಿಗೆ ಹೆದರಬೇಡಿ, ಅಡೆತಡೆಗಳು ಎದುರಾದರೂ ಮುಂದೆ ನಿಲ್ಲಬೇಕು. ಆಗ ಮಾತ್ರ ನಮಗೆ ಗೆಲುವು ಸಿಗುತ್ತದೆ. ನಾವು ಇತಿಹಾಸದಲ್ಲಿ ನಿಲ್ಲಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು.
ನಾನು ಸಹ ವಿದ್ಯಾರ್ಥಿ ದೆಸೆಯಿಂದಲೂ ಸಮಸ್ಯೆಗಳನ್ನು ಮೆಟ್ಟಿ ನಿಂತು ಇಂದು ನಿಮ್ಮ ಮುಂದೆ ನಿಂತಿದ್ದೇನೆ. ನಕ್ಸಲ್ ಆಗಿ ಕಾಡಿಗೆ ಹೋಗಿ ಮತ್ತೆ ಹೊಸ ಜೀವನಕ್ಕೆ ಮರಳಿ, ನಂತರ ಕಕ್ಷಿದಾರೆರಾಗಿ ನ್ಯಾಯಾಲಯಕ್ಕೆ ಹಾಜರಾಗಿ, ಅದೇ ನ್ಯಾಯಾಲಯದಲ್ಲಿ ವಕೀಲೆಯಾಗಿ, ವಿಧಾನಸೌಧದಲ್ಲಿ ಕುಳಿತಿದ್ದೇನೆ. ಸೇವೆಯೇ ನಮ್ಮ ನಿಜವಾದ ಗುರಿಯಾಗಿದ್ದರೆ, ಆರ್ಥಿಕವಾಗಿ ಸದೃಢರಾಗಬೇಕಿಲ್ಲ. ಸಮಾನ್ಯ ಮಹಿಳೆಯರು ಸಾಮಾಜಿಕ, ರಾಜಕೀಯ ಕ್ಷೇತ್ರಗಳಲ್ಲಿ ಉನ್ನತ ಸ್ಥಾನಕ್ಕೇರಲು ಅವಕಾಶಗಳಿವೆ ಎಂದು ಸೀತಕ್ಕ ವಿವರಿಸಿದರು. ನಂತರದಲ್ಲಿ ಆಕರ್ಷಕ ನೃತ್ಯ ಪ್ರದರ್ಶನ ಕಾರ್ಯಕ್ರಮ ನಡೆಯಿತು. ಎಲ್ಲ ಮಹಿಳೆಯರು ಸಂಭ್ರಮ, ಉಲ್ಲಾಸದಿಂದ ಪಾಲ್ಗೊಂಡು ಹರ್ಷ ವ್ಯಕ್ತಪಡಿಸಿದರು.
ಇದನ್ನೂ ಓದಿ: ನಕ್ಸಲಿಸಂ ಬಿಟ್ಟು, ವಕೀಲೆಯಾಗಿ ವಾದಿಸಿ, ಶಾಸಕಿಯಾಗಿ ಆಯ್ಕೆಯಾಗಿ, ಪಿಹೆಚ್‌ಡಿ ಪಡೆದು ಈಗ ತೆಲಂಗಾಣ ಸರ್ಕಾರದಲ್ಲಿ ಸಚಿವೆ!