ಪಾಟ್ನಾ(ಬಿಹಾರ): ಹುಲಿಗಳ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಜುಲೈ 29 ರಂದು ' ಅಂತಾರಾಷ್ಟೀಯ ಹುಲಿ ದಿನ'ವನ್ನಾಗಿ ಆಚರಿಸಲಾಗುತ್ತದೆ. ಹುಲಿ ನಮ್ಮ ದೇಶದ ರಾಷ್ಟ್ರೀಯ ಪ್ರಾಣಿ ಆಗಿದೆ. ಹುಲಿಯನ್ನು ಅತ್ಯಂತ ಅಪಾಯಕಾರಿ ಮತ್ತು ಶಕ್ತಿಶಾಲಿ ಪ್ರಾಣಿ ಎಂದು ಪರಿಗಣಿಸಲಾಗಿದೆ. ಹುಲಿ ಕೇವಲ 30 ಸೆಕೆಂಡುಗಳಲ್ಲಿ ಬೇಟೆಯಾಡುವ ಸಾಮರ್ಥ್ಯ ಹೊಂದಿದೆ. ಹೀಗೆ ಹುಲಿ ಹಲವು ಗುಣಲಕ್ಷಣಗಳನ್ನು ಹೊಂದಿದೆ. ಅವುಗಳೇನು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಬಿಹಾರ ರಾಜ್ಯ ವಾಲ್ಮೀಕಿ ಹುಲಿ ಸಂರಕ್ಷಿತ ಪ್ರದೇಶವನ್ನು ಹೊಂದಿದೆ. ಬಿಹಾರದಲ್ಲಿ 1978 ರಲ್ಲಿ ಅಭಯಾರಣ್ಯವಾಗಿ ಸ್ಥಾಪಿಸಲಾಯಿತು. 1990ರಲ್ಲಿ ರಲ್ಲಿ ಇದನ್ನು ಹುಲಿ ಸಂರಕ್ಷಿತ ಪ್ರದೇಶವನ್ನಾಗಿ ಮಾಡಲಾಯಿತು. ವರದಿ ಪ್ರಕಾರ ಇಲ್ಲಿ, 2006 ರಲ್ಲಿ 10 ಹುಲಿಗಳು ಇದ್ದವು, 2022 ರ ವೇಳೆಗೆ ಹುಲಿಗಳ ಸಂಖ್ಯೆ 54ಕ್ಕೆ ಏರಿತು. ಈಗ ಹುಲಿಗಳ ಸಂಖ್ಯೆ 60 ದಾಟಿದೆ ಎಂದು ಅಂದಾಜಿಸಲಾಗಿದೆ.
ಈಟಿವಿ ಭಾರತ್ ಜೊತೆಗೆ ವನ್ಯಜೀವಿ ಟ್ರಸ್ಟ್ ಆಫ್ ಇಂಡಿಯಾ ಜಂಟಿ ನಿರ್ದೇಶಕ ಡಾ. ಸಮೀರ್ ಕುಮಾರ್ ಸಿನ್ಹಾ ಮಾತನಾಡಿ, ವಾಲ್ಮೀಕಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಇತ್ತೀಚಿಗೆ ಹುಲಿಗಳ ಸಂಖ್ಯೆ ಹೆಚ್ಚಿದೆ. 980 ಚದರ ಕಿ.ಮೀ ಗಳಷ್ಟು ಹರಡಿರುವ ಈ ಅರಣ್ಯವು ಹುಲಿಗಳ ವಾಸಕ್ಕೆ ಯೋಗ್ಯವಾಗಿದೆ ಎಂದು ಸಾಬೀತಾಗಿದೆ. ಹುಲಿಗಳ ಸಂಖ್ಯೆ ಹೆಚ್ಚಿಸಲು, ಅವುಗಳ ಬೇಟೆಗೆ ಸರಿಯಾದ ವ್ಯವಸ್ಥೆ ಮಾಡಬೇಕು. ವಿಟಿಆರ್ ಅರಣ್ಯದ ವ್ಯಾಪ್ತಿ ಪ್ರಕಾರ, ಕನಿಷ್ಠ 20 ವಯಸ್ಕ ಹುಲಿಗಳನ್ನು ಹೊಂದಿರುವುದು ಅವಶ್ಯಕ ಎಂದು ತಿಳಿಸಿದರು.
ಹುಲಿ ಒಂದೇ ಬಾರಿಗೆ ಎಷ್ಟು ಮಾಂಸ ತಿನ್ನುತ್ತದೆ?: ಹುಲಿ ತನ್ನದೇ ವ್ಯಾಪ್ತಿಯ ಪ್ರದೇಶದಲ್ಲಿ ವಾಸಿಸುತ್ತದೆ. ಇನ್ನೊಂದು ಹುಲಿ ತನ್ನ ಸೀಮೆಗೆ ನುಗ್ಗಿದರೆ ಎರಡರ ನಡುವೆ ಪರಸ್ಪರ ಕಾಳಗ ನಡೆಯುತ್ತದೆ. ಇದರಲ್ಲಿ ಒಂದು ಹುಲಿ ಸಾಯಬೇಕು ಅಥವಾ ಆ ಪ್ರದೇಶದಿಂದ ಓಡಿಹೋಗಿ ತನ್ನದೇ ಆದ ಇನ್ನೊಂದು ಸೀಮೆ ಮಾಡಿಕೊಳ್ಳಬೇಕು. ಇಷ್ಟೇ ಅಲ್ಲ, ಹುಲಿಯ ಇನ್ನೊಂದು ವಿಶೇಷತೆ ಏನೆಂದರೆ ಬೇಟೆಯಾಡಿದ ಪ್ರಾಣಿಯನ್ನು ಹುಲಿ ನಾಲ್ಕೈದು ದಿನಗಳ ವರೆಗೆ ತಿನ್ನುತ್ತದೆ. ಒಂದು ಬಾರಿಗೆ ಹುಲಿ 40 ರಿಂದ 45 ಕೆಜಿ ಮಾಂಸವನ್ನು ಸೇವಿಸುತ್ತದೆ ಎಂದು ಮಾಹಿತಿ ನೀಡಿದರು.
ಬಿದಿರು ಕಾಡುಗಳು ಹುಲಿಗಳಿಗೆ ಇಷ್ಟ: ವನ್ಯಜೀವಿ ತಜ್ಞ ವಿ.ಡಿ.ಸಂಜು ಮಾತನಾಡಿ, 1973ರಲ್ಲಿ ಹುಲಿಗೆ ರಾಷ್ಟ್ರೀಯ ಪ್ರಾಣಿ ಸ್ಥಾನಮಾನ ನೀಡಲಾಯಿತು. ಈ ಹುಲಿಗಳು ಹೆಚ್ಚಾಗಿ ಬಿದಿರಿನ ಕಾಡುಗಳಲ್ಲಿ ವಾಸಿಸುತ್ತವೆ. ಏಕೆಂದರೆ, ಬಿದಿರಿನ ಪೊದೆಗಳಲ್ಲಿ ಅಡಗಿಕೊಳ್ಳುಲು ಸುಲಭ ಮತ್ತು ಬಿದಿರು ತಂಪಾಗಿರುತ್ತವೆ. ಜಗತ್ತಿನಲ್ಲಿ 8 ಜಾತಿಯ ಹುಲಿಗಳಿವೆ, ಅವುಗಳಲ್ಲಿ ಮೂರು ವಿಟಿಆರ್ ಹುಲಿಗಳು ತಮ್ಮ ಉಗುರುಗಳಿಂದ ಮರಗಳನ್ನು ಕೆರೆಯುವ (ಸ್ಕ್ರಾಚಿಂಗ್) ಮಾಡುವ ಮೂಲಕ ತಮ್ಮ ಗಡಿಯನ್ನು ಗುರುತಿಸುತ್ತವೆ. ಮತ್ತೊಂದು ಜಾತಿಯ ಹುಲಿ ತನ್ನ ಮಲ ಮತ್ತು ಮೂತ್ರದಿಂದ ತನ್ನ ಸೀಮೆಯನ್ನು ಗುರುತು ಮಾಡುತ್ತದೆ. ಇದಿರಂದ ತನ್ನ ಪ್ರದೇಶವನ್ನು ಬೇರೆ ಹುಲಿಗಳು ಪ್ರವೇಶಿಸಲು ಧೈರ್ಯ ಮಾಡುವುದಿಲ್ಲ. ಅಕಸ್ಮಾತ್ ಹುಲಿಯ ಸೀಮೆಗೆ ಬೇರೊಂದಿ ಹುಲಿ ನುಗ್ಗಿದರೇ ಎರಡರ ಮಧ್ಯೆ ಕಾಳಗ ನಡೆಯುತ್ತದೆ ಎಂದು ವಿವರಿಸಿದರು.
ಹುಲಿಗಳು ನಾಲ್ಕೈದು ದಿನಗಳ ಕಾಲ ನಿರಂತರವಾಗಿ ಮಿಲನ ನಡೆಸುತ್ತವೆ. ವಿಶೇಷತೆ ಏನೆಂದರೆ ಅವು ಕೇವಲ 15 ರಿಂದ 20 ಸೆಕೆಂಡ್ಗಳ ಕಾಲ ಮಾತ್ರ ಲೈಂಗಿಕ ಕ್ರಿಯೆಯಲ್ಲಿ ತೊಡಗುತ್ತವೆ. ಹೆಣ್ಣು ಹುಲಿ ಗರ್ಭಧರಿಸಿದ ಮೂರು ತಿಂಗಳ ನಂತರ ಮರಿಗೆ ಜನ್ಮ ನೀಡುತ್ತದೆ. ಹೆರಿಗೆಯ ಸಮಯದಲ್ಲಿ, ಹೆಣ್ಣು ಹುಲಿ ನಿರ್ಜನ ಪ್ರದೇಶವನ್ನು ಹುಡುಕುತ್ತವೆ. ಹೀಗಾಗಿ ಅವು ಕಾಡಿನ ಹೊರ ಬರುತ್ತವೆ ಎಂದು ತಿಳಿಸಿದರು.
ವಾಲ್ಮೀಕಿ ಹುಲಿ ಸಂರಕ್ಷಿತ ಅರಣ್ಯ ವಿಭಾಗ 2ರ ಡಿಎಫ್‌ಒ ಅತೀಶ್ ಕುಮಾರ್ ಮಾತನಾಡಿ, ವಾಲ್ಮೀಕಿ ಹುಲಿ ಸಂರಕ್ಷಿತ ಅರಣ್ಯದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಿಸಲು, ಹುಲ್ಲುಗಾವಲು ಸೇರಿದಂತೆ ಸಸ್ಯಾಹಾರಿ ಪ್ರಾಣಿಗಳ ಸಂಖ್ಯೆಯನ್ನು ಹೆಚ್ಚಿಸುವ ಬಗ್ಗೆಯೂ ಗಮನ ಹರಿಸಲಾಗುತ್ತಿದೆ. ಇಲ್ಲಿನ ಹುಲಿಗಳು ಇತರೆ ಕಾಡುಗಳಲ್ಲಿರುವ ಹುಲಿಗಳಿಗಿಂತ ಹೆಚ್ಚು ಚುರುಕಾಗಿರುತ್ತವೆ. ಅವು ಕೇವಲ 30 ರಿಂದ 35 ಸೆಕೆಂಡುಗಳಲ್ಲೇ ಬೇಟೆಯಾಡುತ್ತವೆ. ಪ್ರಸ್ತುತ ಹುಲಿಗಳನ್ನು ಉಳಿಸುವುದು ಮುಖ್ಯವಾಗಿದೆ. ಏಕೆಂದರೆ ಅವು ಪರಿಸರ ವ್ಯವಸ್ಥೆಯನ್ನು ಬಲಪಡಿಸುತ್ತವೆ. ಒಂದು ಹುಲಿಗೆ ಸುಮಾರು 25 ರಿಂದ 30 ಚದರ ಕಿ.ಮೀ ಜಾಗ ಬೇಕು. ಹೀಗೆ ಪ್ರತಿ ಹುಲಿ ಇಷ್ಟು ಜಾಗವನ್ನು ಗುರುತು ಮಾಡಿಕೊಳ್ಳುವುದರಿಂದ ಅನೇಕ ಪ್ರಾಣಿಗಳು ಸಂರಕ್ಷಿತ ಅರಣ್ಯಕ್ಕೆ ಬರುತ್ತವೆ ಎಂದು ಮಾಹಿತಿ ನೀಡಿದರು.