ಹೈದರಾಬಾದ್: ಪ್ರಾಚೀನ ವಸ್ತುಗಳ ಮೌಲ್ಯವನ್ನು ಕಾಪಾಡುವ ವಸ್ತು ಸಂಗ್ರಹಾಲಯಗಳ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಮೇ 18 ಅನ್ನು ಅಂತಾರಾಷ್ಟ್ರೀಯ ವಸ್ತುಸಂಗ್ರಹಾಲಯದ ದಿನವಾಗಿ ಆಚರಿಸಲಾಗುವುದು. ಈ ವಸ್ತುಸಂಗ್ರಹಾಲಯವು ಪ್ರಾಚೀನ ಕಲಾಕೃತಿಗಳು, ಶಿಲ್ಪಗಳು, ಕಲಾತ್ಮಕ ಕೆಲಸ, ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕ ಅಮೂಲ್ಯ ವಸ್ತುಗಳನ್ನು ರಕ್ಷಣೆ ಮಾಡುತ್ತದೆ. ಜೊತೆಗೆ ನಮ್ಮ ಗತಕಾಲದ ಶ್ರೀಮಂತ ಮತ್ತು ಪರಂಪರೆಯ ಕುರಿತು ತಿಳಿಯಲು ಸಹಾಯ ಮಾಡುತ್ತದೆ.
ಈ ವರ್ಷ ಅಂತಾರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನದ ಘೋಷವಾಕ್ಯ, 'ಶಿಕ್ಷಣ ಮತ್ತು ಸಂಶೋಧನೆಗಾಗಿ ವಸ್ತು ಸಂಗ್ರಹಾಲಯ'ವಾಗಿದೆ. ಈ ದಿನದಂದು ಜನರು ತಮ್ಮ ರಾಜ್ಯ ಅಥವಾ ಪ್ರದೇಶದಲ್ಲಿ ನೆಲೆಗೊಂಡಿರುವ ವಸ್ತುಸಂಗ್ರಹಾಲಯಗಳಿಗೆ ಭೇಟಿ ನೀಡಿ, ಅಲ್ಲಿನ ಶ್ರೀಮಂತ ಪರಂಪರೆ ಮತ್ತು ಸಂಪ್ರದಾಯದ ಕುರಿತ ಜ್ಞಾನ ಪಡೆಯಲು ವಿವಿಧ ಸಂಸ್ಥೆಗಳು ಆಯೋಜಿಸುತ್ತವೆ.
ಈ ದಿನದ ಅಂಗವಾಗಿ ಸಂಸ್ಕೃತಿ ಸಚಿವಾಲಯವು ಇಂಟರ್ನ್ಯಾಷನಲ್ ಮ್ಯೂಸಿಯಂ ಎಕ್ಸ್ಪೋ 2024 ರ ಎರಡನೇ ಆವೃತ್ತಿಯನ್ನು ಆಯೋಜಿಸುವುದಾಗಿ ತಿಳಿಸಿದೆ.
ಅಂತಾರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನದ ಇತಿಹಾಸ: 1977ರಲ್ಲಿ ಅಂತಾರಾಷ್ಟ್ರೀಯ ವಸ್ತು ಸಂಗ್ರಹಾಲಯ ಮಂಡಳಿ ಈ ದಿನದ ಆಚರಣೆಗೆ ಮುಂದಾಯಿತು. ಇದರ ಮುಖ್ಯ ಉದ್ದೇಶ, ದೇಶದ ಸಾಂಸ್ಕೃತಿಕ ಶ್ರೀಮಂತ ಪರಂಪರೆಯನ್ನು ಉತ್ತೇಜಿಸುವುದಾಗಿದೆ.
2024ರ ಧ್ಯೇಯ: ಶಿಕ್ಷಣ ಮತ್ತು ಸಂಶೋಧನೆಗೆ ವಸ್ತು ಸಂಗ್ರಹಾಲಯ ಎಂಬ ಉದ್ದೇಶದಿಂದ ಈ ವರ್ಷ ಈ ದಿನವನ್ನು ಆಚರಿಸಲಾಗುತ್ತಿದೆ. ಶೈಕ್ಷಣಿಕ ದೃಷ್ಟಿಯಲ್ಲಿ ಸಾಂಸ್ಕೃತಿಕ ಸಂಸ್ಥೆಗಳ ವಸ್ತುಸಂಗ್ರಹಾಲಯಗಳ ಪ್ರಮುಖ ಪಾತ್ರವನ್ನು ಪ್ರದರ್ಶಿಸುತ್ತದೆ. ಕಳೆದ ವರ್ಷದ ವಸ್ತುಸಂಗ್ರಹಾಲಯಗಳು, ಸುಸ್ಥಿರತೆ ಮತ್ತು ಯೋಗಕ್ಷೇಮ ಎಂಬ ಧ್ಯೇಯದೊಂದಿಗೆ ಈ ದಿನ ಆಚರಿಸಲಾಗಿತ್ತು.
ಮಹತ್ವ: ವಸ್ತುಸಂಗ್ರಹಾಲಯಗಳ ನಿರ್ಣಾಯಕ ಪಾತ್ರದ ಬಗ್ಗೆ ಸಾರ್ವಜನಿಕ ಜಾಗೃತಿ ಮೂಡಿಸಲು ಅದ್ಬುತ ಅವಕಾಶ ಲಭ್ಯವಾಗುತ್ತದೆ. ಈ ಕಾರ್ಯಕ್ರಮಗಳ ಮೂಲಕ ಜನರು ಮ್ಯೂಸಿಯಂ ವೃತ್ತಿಪರರು ಪರಸ್ಪರ ಭೇಟಿಯಾಗಲು ಮತ್ತು ಸಂವಹನ ನಡೆಸಲು ಅವಕಾಶ ಗಳಿಸುತ್ತಾರೆ.
ನಿರ್ಣಾಯಕ ಪಾತ್ರ: ವಸ್ತು ಸಂಗ್ರಹಾಲಯದ ಮೂಲಕ ಭೂತಕಾಲದ ಸ್ಥಳ, ಸತ್ಯ ಮತ್ತು ಸಾಕ್ಷ್ಯಾಧಾರಿತ ವಾಸ್ತವತೆಯನ್ನು ತಿಳಿಯಲು ಸಹಾಯವಾಗುತ್ತದೆ. ಜೊತೆಗೆ ಗತಿಸಿದ ಕಾಲದ ಕುರಿತು ವಿವರವಾದ ಜ್ಞಾನ ಮತ್ತು ಭವಿಷ್ಯದ ಬೆಳವಣಿಗೆಯ ದೃಷ್ಟಿಕೋನ ಪಡೆಯಲು ಸಹಾಯ ಮಾಡುತ್ತದೆ.
ನ್ಯಾಷನಲ್ ಮ್ಯೂಸಿಯಂ: ನವದೆಹಲಿಯ ರಾಷ್ಟ್ರೀಯ ವಸ್ತುಸಂಗ್ರಹಾಲಯವನ್ನು 1949 ರಲ್ಲಿ ಜನಪಥ್ ಮತ್ತು ಮೌಲಾನಾ ಆಜಾದ್ ಸ್ಟ್ರೀಟ್‌ನಲ್ಲಿ ಸ್ಥಾಪಿಸಲಾಯಿತು. ಇದು ಭಾರತದ ಅತಿದೊಡ್ಡ ಗ್ಯಾಲರಿಗಳಲ್ಲಿ ಒಂದಾಗಿದೆ.
ಇಂಡಿಯನ್ ಮ್ಯೂಸಿಯಂ: ಗುರಾಣಿಗಳು, ಅಸ್ಥಿಪಂಜರಗಳು, ಮೊಘಲ್ ಚಿತ್ರ ಮತ್ತು ಅಲಂಕಾರದಂತಹ ವಿಶಿಷ್ಟ ಸಂಗ್ರಹದ ಮ್ಯೂಸಿಯಂ ಇದಾಗಿದೆ. ಭಾರತದ ಅತಿದೊಡ್ಡ ಮತ್ತು ಹಳೆಯ ವಸ್ತುಸಂಗ್ರಹಾಲಯವಾಗಿರುವ ಇದನ್ನು 1814 ರಲ್ಲಿ ಕೋಲ್ಕತ್ತಾದಲ್ಲಿ ಬಂಗಾಳದ ಏಷ್ಯಾಟಿಕ್ ಸೊಸೈಟಿ ಸ್ಥಾಪಿಸಿತು.
ಪ್ರಿನ್ಸೆಸ್ ಆಫ್ ವೇಲ್ಸ್ ಮ್ಯೂಸಿಯಂ: ಪ್ರಿನ್ಸೆಸ್ ಆಫ್ ವೇಲ್ಸ್ ಮ್ಯೂಸಿಯಂ ಮುಂಬೈನಲ್ಲಿ ಇಂಡಿಯಾಗೇಟ್ ಸಮೀಪದಲ್ಲಿದೆ. ಈ ಐತಿಹಾಸಿಕ ಕೇಂದ್ರ 20ನೇ ಶತಮಾನದಲ್ಲಿ ಪ್ರಾರಂಭವಾಯಿತು.
ಸಲಾರ್ ಜಂಗ್ ಮ್ಯೂಸಿಯಂ: ಹೈದರಾಬಾದ್‌ನ ಸಲಾರ್ ಜಂಗ್ ಮ್ಯೂಸಿಯಂ ಅನ್ನು ಕಾಣಬಹುದಾಗಿದೆ. ಇದು ಚೀನಾ, ಉತ್ತರ ಅಮೆರಿಕ, ಈಜಿಪ್ಟ್, ನೇಪಾಳ, ಯುರೋಪ್, ಬರ್ಮಾ ಮತ್ತು ಭಾರತಕ್ಕೆ ಹೋಲುವ ವಿವಿಧ ರಾಷ್ಟ್ರಗಳ ಚಿತ್ರಣಗಳು, ವಸ್ತುಗಳು, ಲೋಹದ ಅವಶೇಷಗಳು, ಗಡಿಯಾರಗಳು ಮತ್ತು ಕೆತ್ತನೆಗಳ ಸಂಗ್ರಹವನ್ನು ಹೊಂದಿದೆ.
ಶಂಕರ್ ಅಂತಾರಾಷ್ಟ್ರೀಯ ಗೊಂಬೆಗಳ ವಸ್ತು ಸಂಗ್ರಹಾಲಯ: ಗೊಂಬೆಗಳ ದೊಡ್ಡ ಸಂಗ್ರಹವನ್ನೇ ಇಲ್ಲಿ ಕಾಣಬಹುದಾಗಿದೆ. ಕೆ. ಶಂಕರ್ ಪಿಳ್ಳೈ ಅವರು ದೆಹಲಿಯಲ್ಲಿ ಅತಿ ದೊಡ್ಡ ಗೊಂಬೆಗಳ ಸಂಗ್ರಹದ ಅಂತಾರಾಷ್ಟ್ರೀಯ ವಸ್ತುಸಂಗ್ರಹಾಲಯವನ್ನು ಸ್ಥಾಪಿಸಿದರು.
ಇದನ್ನೂ ಓದಿ: ಮನೆಯನ್ನು ಮ್ಯೂಸಿಯಂ ಆಗಿ ಪರಿವರ್ತಿಸಿದ ವ್ಯಕ್ತಿ : 900 ಪುರಾತನ ವಸ್ತುಗಳ ಸಂಗ್ರಹ