ನವದೆಹಲಿ: ಕೃಷಿ, ಗ್ರಾಮೀಣಾಭಿವೃದ್ಧಿ, ಆಹಾರ ಭದ್ರತೆ, ಬಡತನ ನಿರ್ಮೂಲನೆ ಮಾಡುವಲ್ಲಿ ಗ್ರಾಮೀಣ ಮಹಿಳೆಯರು ವಹಿಸುವ ನಿರ್ಣಾಯಕ ಪಾತ್ರವನ್ನು ಸ್ಮರಿಸುವ ಸಲುವಾಗಿ ವಿಶ್ವಸಂಸ್ಥೆಯು 2007 ರ ಅಕ್ಟೋಬರ್ 15 ರಂದು ಗ್ರಾಮೀಣ ಮಹಿಳೆಯರ ಅಂತಾರಾಷ್ಟ್ರೀಯ ದಿನ ಮತ್ತು ರಾಷ್ಟ್ರೀಯ ಮಹಿಳಾ ರೈತರ ದಿನವನ್ನು ಘೋಷಿಸಿತು. ಅಂದಿನಿಂದ ರೈತ ಮಹಿಳೆಯರ ದಿನ ಆಚರಿಸುತ್ತಾ ಬರಲಾಗುತ್ತಿದೆ.
ಭಾರತ ಸರ್ಕಾರವೂ ಕೂಡ ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳಲ್ಲಿ ಮಹಿಳೆಯರ ಸಾಧನೆಯನ್ನು ಗುರುತಿಸುವ ಸಲುವಾಗಿ 'ರಾಷ್ಟ್ರೀಯ ಮಹಿಳಾ ಕಿಸಾನ್ ದಿವಸ್' ಅನ್ನು 2016 ರಲ್ಲಿ ಘೋಷಿಸಿತು. ಎರಡೂ ದಿನಗಳು ಮಹಿಳೆಯರು ಎದುರಿಸುತ್ತಿರುವ ಸವಾಲುಗಳು ಮತ್ತು ಸುಸ್ಥಿರ ಅಭಿವೃದ್ಧಿಗೆ ಅವರ ಶ್ರಮ ಮತ್ತು ಕೊಡುಗೆಗಳನ್ನು ಪ್ರತಿಪಾದಿಸುತ್ತದೆ.
ಗ್ರಾಮೀಣ ಮಹಿಳೆಯರ ಅಂತಾರಾಷ್ಟ್ರೀಯ ದಿನದ ಇತಿಹಾಸ
2007 ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಗ್ರಾಮೀಣ ಮಹಿಳೆಯರ ಅಂತಾರಾಷ್ಟ್ರೀಯ ದಿನವನ್ನು ಘೋಷಿಸಿತು. ಗ್ರಾಮೀಣ ಮಹಿಳೆಯರು ಕುಟುಂಬ, ಸಮುದಾಯ ಮತ್ತು ಆರ್ಥಿಕತೆಗೆ ನೀಡಿದ ಗಮನಾರ್ಹ ಕೊಡುಗೆಯನ್ನು ಗುರುತಿಸಲು, ಲಿಂಗ ಸಮಾನತೆಯನ್ನು ಉತ್ತೇಜಿಸಲು ಮತ್ತು ಮಹಿಳಾ ಸಬಲೀಕರಣಕ್ಕಾಗಿ ಈ ದಿನವನ್ನು ಮೀಸಲಿಟ್ಟಿತು.
1995 ರ ಬೀಜಿಂಗ್ ಘೋಷಣೆ ಮತ್ತು ಪ್ಲಾಟ್‌ಫಾರ್ಮ್ ಫಾರ್ ಆ್ಯಕ್ಷನ್ ಪ್ರಕಾರ, ಗ್ರಾಮೀಣ ಮಹಿಳೆಯರ ಮೇಲೆ ಪರಿಣಾಮ ಬೀರುವ ಸಮಸ್ಯೆಗಳನ್ನು ಪರಿಹರಿಸುವ ಪ್ರಯತ್ನವಾಗಿ ಈ ದಿನವನ್ನು ಸ್ಥಾಪಿಸಲಾಯಿತು. ಶಿಕ್ಷಣ, ಆರೋಗ್ಯ ಮತ್ತು ಸಂಪನ್ಮೂಲ, ಹಕ್ಕುಗಳು ಮತ್ತು ಅಭಿವೃದ್ಧಿಯಲ್ಲಿ ಗ್ರಾಮೀಣ ಮಹಿಳೆಯರು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಈ ದಿನವು ಮಹತ್ವದ್ದಾಗಿದೆ.
ರಾಷ್ಟ್ರೀಯ ಮಹಿಳಾ ಕಿಸಾನ್ ದಿನದ ಇತಿಹಾಸ
ಬಿತ್ತನೆ, ನಾಟಿ, ಗೊಬ್ಬರ, ಸಸ್ಯ ಸಂರಕ್ಷಣೆ, ಕಟಾವು, ಕಳೆ ಕೀಳುವುದು ಮತ್ತು ಸಂಗ್ರಹಣೆ ಸೇರಿದಂತೆ ಕೃಷಿಯ ವಿವಿಧ ವಿಭಾಗದಲ್ಲಿ ಮಹಿಳೆಯರ ಕೊಡುಗೆಯನ್ನು ಬಣ್ಣಿಸುವ ಸಲುವಾಗಿ ಭಾರತ ಸರ್ಕಾರವು 2016 ರ ಅಕ್ಟೋಬರ್ 15 ರಂದು ರಾಷ್ಟ್ರೀಯ ಮಹಿಳಾ ಕಿಸಾನ್ ದಿವಸ್ ಅನ್ನು ಪ್ರತಿವರ್ಷ ಆಚರಿಸಲು ನಿರ್ಧರಿಸಿತು.
ಕೃಷಿಯಲ್ಲಿ ಮಹಿಳೆಯರ ಪಾತ್ರ
- ಅಭಿವೃದ್ಧಿ ಮತ್ತು ಬಡತನದಲ್ಲಿ ಕೃಷಿಯು ಪ್ರಮುಖ ಪಾತ್ರ ವಹಿಸುತ್ತದೆ. ಮಹಿಳೆಯರ ಸಹಭಾಗಿತ್ವದ ಕೊರತೆಯಿಂದ ವಿವಿಧ ರಾಷ್ಟ್ರಗಳಲ್ಲಿ ಕೃಷಿ ಕ್ಷೇತ್ರವು ಹಿನ್ನಡೆ ಅನುಭವಿಸುತ್ತಿದೆ. ಕೃಷಿ ಕ್ಷೇತ್ರದಲ್ಲಿ ಮಹಿಳೆಯರ ಪಾತ್ರ ಅಗಣಿತವಾಗಿದೆ. ಉತ್ಪಾದನೆಯಲ್ಲಿ ಅವರ ಪಾಲ್ಗೊಳ್ಳುವಿಕೆ ಅಗತ್ಯವಾಗಿದೆ.
- ಜಾಗತಿಕವಾಗಿ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಮಹಿಳಾ ಕೃಷಿ ಕಾರ್ಮಿಕರು ಸುಮಾರು ಶೇಕಡಾ 43 ರಷ್ಟು ಇದ್ದಾರೆ ಎಂದು ದಾಖಲೆ ಹೇಳುತ್ತದೆ. ಆದರೆ, ಈ ಅಂಕಿ - ಅಂಶವು ವಯಸ್ಸು ಮತ್ತು ಸಾಮಾಜಿಕ ವರ್ಗದ ಪ್ರಕಾರ ಪ್ರದೇಶವಾರು ಮತ್ತು ದೇಶಗಳಲ್ಲಿ ಗಣನೀಯ ವ್ಯತ್ಯಾಸ ಹೊಂದಿದೆ.
- ಕೃಷಿ ಬೆಳೆ ಉತ್ಪಾದನೆ, ಕಳೆ ಕೀಳುವುದು, ಕೊಯ್ಲುನಂತಹ ಪ್ರಮುಖ ಸಂದರ್ಭಗಳಲ್ಲಿ ಸ್ತ್ರೀಯರ ಪಾತ್ರ ದೊಡ್ಡದಾಗಿರುತ್ತದೆ.
- ಗ್ರಾಮೀಣ ಮಹಿಳೆಯರ ದುಡಿಮೆಯು ಪುರುಷರಿಗಿಂತ ಹೆಚ್ಚಿರುತ್ತದೆ. ಕೃಷಿ ಮತ್ತು ಆಹಾರ ಉತ್ಪಾದನೆಯಲ್ಲಿ ಮಹಿಳೆಯರ ಕೊಡುಗೆ ಗಮನಾರ್ಹವಾಗಿದೆ.
- ಗ್ರಾಮೀಣ ಕಾರ್ಮಿಕ ಮಾರುಕಟ್ಟೆಗಳಲ್ಲಿ ಮಹಿಳೆಯರ ಭಾಗವಹಿಸುವಿಕೆಯು ಪ್ರದೇಶವಾರು ಬದಲಾಗುತ್ತದೆ. ಆದರೆ, ಅರೆಕಾಲಿಕ ಕೆಲಸಗಳಲ್ಲಿ ಅವರ ಪ್ರತಿನಿಧಿತ್ವ ಹೆಚ್ಚು.
ಕೃಷಿಯಲ್ಲಿ ಮಹಿಳಾ ಕಾರ್ಮಿಕರ ಪಾಲೆಷ್ಟು?
ಕೃಷಿ ಕ್ಷೇತ್ರದಲ್ಲಿ ಮಹಿಳೆಯರ ಪಾಲು ಗ್ರಾಮೀಣ ಪ್ರದೇಶದಲ್ಲಿ 76.2 ಪ್ರತಿಶತದಷ್ಟಿದ್ದರೆ, ನಗರ ಪ್ರದೇಶಗಳಲ್ಲಿ 11.7 ಪ್ರತಿಶತದಷ್ಟಿದೆ.
ಗ್ರಾಮೀಣ ಮಹಿಳೆಯರ ಅಂತಾರಾಷ್ಟ್ರೀಯ ದಿನದ ವಿಶೇಷ
ಗ್ರಾಮೀಣ ಮಹಿಳೆಯರ ಅಂತಾರಾಷ್ಟ್ರೀಯ ದಿನದ ಮಹತ್ವವು ಹಲವಾರು ಪ್ರಮುಖ ಕ್ಷೇತ್ರಗಳಲ್ಲಿದೆ. ಕೃಷಿ, ಆಹಾರ ಭದ್ರತೆ ಮತ್ತು ಸಮುದಾಯದ ಅಭಿವೃದ್ಧಿಯಲ್ಲಿ ಗ್ರಾಮೀಣ ಮಹಿಳೆಯರು ವಹಿಸುವ ಪ್ರಮುಖ ಪಾತ್ರವನ್ನು ಇದು ತೋರಿಸುತ್ತದೆ. ಲಿಂಗ ಸಮಾನತೆ ಉತ್ತೇಜಿಸುವ ಮತ್ತು ಗ್ರಾಮೀಣ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ, ಭೂ ಮಾಲೀಕತ್ವ ಮತ್ತು ಸಂಪನ್ಮೂಲಗಳ ಪ್ರವೇಶದಂತಹ ಸಮಸ್ಯೆಗಳನ್ನು ಪರಿಹರಿಸುವ ನೀತಿಗಳ ಅಗತ್ಯವನ್ನು ಈ ದಿನವು ಸಾರುತ್ತದೆ.
ಮಹಿಳಾ ರೈತರು ಎದುರಿಸುತ್ತಿರುವ ಸವಾಲುಗಳು
- ಭೂಮಿಯ ಮಾಲೀಕತ್ವದ ಕೊರತೆ
- ಸಾಲ, ಹಣಕಾಸಿನ ಕೊರತೆ
- ಸಂಪನ್ಮೂಲಗಳು, ಆಧುನಿಕ ಯಂತ್ರಗಳ ಬಳಕೆ ಕೊರತೆ (ಹೆಚ್ಚಿನ ಕೃಷಿ ಯಂತ್ರೋಪಕರಣಗಳು ಮಹಿಳೆಯರಿಗೆ ಕಾರ್ಯನಿರ್ವಹಿಸಲು ಕಷ್ಟ)
- ಕಡಿಮೆ ಸಂಬಳದಲ್ಲಿ ಹೆಚ್ಚಿದ ಕೆಲಸದ ಹೊರೆ
ಮಹಿಳಾ ರೈತರಿಗಾಗಿ ಇರುವ ಯೋಜನೆಗಳಿವು
- ಕೃಷಿ ಮತ್ತು ಸಹಕಾರ ಮತ್ತು ರೈತರ ಕಲ್ಯಾಣ ಇಲಾಖೆ (DAC&FW), ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ವಿವಿಧ ಫಲಾನುಭವಿ ಆಧಾರಿತ ಯೋಜನೆಗಳ ಮಾರ್ಗಸೂಚಿಗಳು ರಾಜ್ಯಗಳು ಮತ್ತು ಇತರ ಅನುಷ್ಠಾನ ಸಂಸ್ಥೆಗಳು ಮಹಿಳಾ ರೈತರ ಮೇಲೆ ಕನಿಷ್ಠ 30 ಪ್ರತಿಶತ ವೆಚ್ಚವನ್ನು ಭರಿಸುವಂತೆ ಒದಗಿಸುತ್ತವೆ.
- ರಾಷ್ಟ್ರೀಯ ಆಹಾರ ಭದ್ರತಾ ಯೋಜನೆ
- ಎಣ್ಣೆಬೀಜ ಮತ್ತು ಎಣ್ಣೆ ಪಾಮ್ ರಾಷ್ಟ್ರೀಯ ಯೋಜನೆ
- ಸುಸ್ಥಿರ ಕೃಷಿಯ ರಾಷ್ಟ್ರೀಯ ಯೋಜನೆ
- ಕೃಷಿ ಯಾಂತ್ರೀಕರಣ ಮತ್ತು ತೋಟಗಾರಿಕೆಯ ಸಮಗ್ರ ಅಭಿವೃದ್ಧಿಯೋಜನೆ
- ಮಹಿಳಾ ಕಿಸಾನ್ ಸಶಕ್ತೀಕರಣ ಪರಿಯೋಜನಾ (MKSP)
- ದೀನದಯಾಳ್ ಅಂತ್ಯೋದಯ ಯೋಜನೆ — ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಯೋಜನೆ
ಇದನ್ನೂ ಓದಿ: ಮಣಿಪುರ ಸಂಘರ್ಷ ಮುಕ್ತಿಗೆ ದೆಹಲಿಯಲ್ಲಿ ಮೈಥೇಯಿ, ಕುಕಿ, ನಾಗಾ ಸಮುದಾಯದ ಶಾಸಕರ ಸಭೆ