ನವದೆಹಲಿ: ಭಾರತೀಯ ನೌಕಾಪಡೆಯ ರಿಮೋಟ್ ಪೈಲಟ್ ಏರ್‌ಕ್ರಾಫ್ಟ್ (ಆರ್‌ಪಿಎ) ತರಬೇತಿ ವೇಳೆ ಕೊಚ್ಚಿಯಲ್ಲಿ ಸೋಮವಾರ ಪತನಗೊಂಡಿದೆ. ಐಎನ್‌ಎಸ್ ಗರುಡಾ ಬೇಸ್‌ನಲ್ಲಿ ಸಂಜೆ ಘಟನೆ ನಡೆದಿದ್ದು, ಯಾರಿಗೂ ಗಾಯಗಳಾಗಿಲ್ಲ ಎಂದು ನೌಕಾಪಡೆ ಮಾಹಿತಿ ನೀಡಿದೆ.
"ಸಂಜೆ 5 ಗಂಟೆಗೆ ಕೊಚ್ಚಿಯ ಐಎನ್‌ಎಸ್ ಗರುಡಾದಲ್ಲಿ ತರಬೇತಿ ಸಮಯದಲ್ಲಿ ರಿಮೋಟ್ಲಿ ಪೈಲಟೆಡ್ ಏರ್‌ಕ್ರಾಫ್ಟ್ (ಆರ್‌ಪಿಎ) ರನ್‌ವೇಯಿಂದ ಸುಮಾರು ಒಂದು ಮೈಲಿ ದೂರದಲ್ಲಿ ಅಪಘಾತಕ್ಕೀಡಾಯಿತು. ಯಾರಿಗೂ ಯಾವುದೇ ಗಾಯ ಹಾಗೂ ಪ್ರಾಣ ಹಾನಿಯಾಗಿಲ್ಲ. ಶೀಘ್ರವಾಗಿ ಪ್ರತಿಕ್ರಿಯಿಸಿ, ಅಪಘಾತಕ್ಕೀಡಾದ ಆರ್‌ಪಿಎ ಸುರಕ್ಷಿತವಾಗಿರುವುದನ್ನು ಖಚಿತಪಡಿಸಿಕೊಳ್ಳಲು ತಜ್ಞರ ತಂಡವನ್ನು ಸ್ಥಳಕ್ಕೆ ಕಳುಹಿಸಲಾಯಿತು. ಘಟನೆಯ ಕುರಿತು ತನಿಖೆಗೆ ಆದೇಶಿಸಲಾಗಿದೆ" ಎಂದು ನೌಕಾಪಡೆ ಹೇಳಿದೆ.
ಇತ್ತೀಚಿನ ಪ್ರಕರಣ-ಸೇನಾ ಸರಕು ಸಾಗಣೆ ವಿಮಾನ ಪತನ: ರಷ್ಯಾ ರಾಜಧಾನಿ ಮಾಸ್ಕೋದ ಈಶಾನ್ಯ ಇವಾನೊವೊ ಪ್ರದೇಶದ ಬಳಿ 15 ಜನರಿದ್ದ ರಷ್ಯಾದ ಮಿಲಿಟರಿ ಸರಕು ವಿಮಾನವೊಂದು ಇತ್ತೀಚೆಗೆ ಪತನಗೊಂಡಿತ್ತು. ವಿಮಾನದಲ್ಲಿದ್ದ ಎಲ್ಲರೂ ಸಾವನ್ನಪ್ಪಿದ್ದರು. Il-76 ವಿಮಾನ ಟೇಕ್ ಆಫ್ ಆದ ಕೆಲ ಹೊತ್ತಿನಲ್ಲೇ ಇಂಜಿನ್ನಲ್ಲಿ ಬೆಂಕಿ ಹೊತ್ತಿಕೊಂಡು ಧರೆಗಪ್ಪಳಿಸಿತ್ತು ಎಂದು ರಕ್ಷಣಾ ಸಚಿವಾಲಯ ತಿಳಿಸಿತ್ತು.
ಇವಾನೊವೊ ಗವರ್ನರ್ ಸ್ಟಾನಿಸ್ಲಾವ್ ವೊಸ್ಕ್ರೆಸೆನ್ಸ್ಕಿ ಅವರು ಮೃತರ ಕುಟುಂಬಗಳಿಗೆ ಸಾಂತ್ವನ ತಿಳಿಸಿದ್ದರು. ಟೇಕಾಫ್ ವೇಳೆ ಎಂಜಿನ್‌ನಲ್ಲಿ ಬೆಂಕಿ ಹೊತ್ತಿಕೊಂಡಿದ್ದರಿಂದ ಅಪಘಾತ ಸಂಭವಿಸಿದೆ ಎಂದು ರಕ್ಷಣಾ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ಕಣ್ಮರೆಯಾಗುತ್ತಿರುವ ವಸಂತ ಕಾಲ, ಭಾರತದಲ್ಲಿ ಚಳಿಗಾಲದಲ್ಲೂ ತಾಪಮಾನ ಏರಿಕೆ: ಅಮೆರಿಕ ವಿಜ್ಞಾನಿಗಳ ಎಚ್ಚರಿಕೆ