ನವದೆಹಲಿ: ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನುನ್ ಹತ್ಯೆಯ ಸಂಚಿನ ಆರೋಪಿ ಭಾರತೀಯ ಪ್ರಜೆ ನಿಖಿಲ್ ಗುಪ್ತಾ ಅವರನ್ನು ಜೆಕ್ ಗಣರಾಜ್ಯವು ಅಮೆರಿಕಕ್ಕೆ ಹಸ್ತಾಂತರ ಮಾಡುವ ಸಾಧ್ಯತೆ ಹೆಚ್ಚಿದೆ. ಈಚೆಗಿನ ವಿದ್ಯಮಾನದಲ್ಲಿ ಗುಪ್ತಾ ಸಲ್ಲಿಸಿದ ಹಸ್ತಾಂತರ ವಿರುದ್ಧದ ಆಕ್ಷೇಪಣಾ ಅರ್ಜಿಯನ್ನು ಜೆಕ್ ಕೋರ್ಟ್ ವಜಾ ಮಾಡಿದೆ.
ಈ ಬಗ್ಗೆ ಮಾಹಿತಿ ನೀಡಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ಜೆಕ್ ಗಣರಾಜ್ಯದಲ್ಲಿ ಬಂಧಿತರಾಗಿರುವ ನಿಖಿಲ್ ಗುಪ್ತಾ ಅವರ ಅರ್ಜಿಯನ್ನು ಜೆಕ್ ಗಣರಾಜ್ಯದ ಕೋರ್ಟ್ ನಿರಾಕರಿಸಿದೆ. ತಮ್ಮನ್ನು ಅಮೆರಿಕಕ್ಕೆ ಹಸ್ತಾಂತರ ಮಾಡಬಾರದು ಎಂದು ಗುಪ್ತಾ ಅವರು ಕೋರ್ಟ್ಗೆ ಮನವಿ ಮಾಡಿದ್ದರು. ಈ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ. ಅಮೆರಿಕದ ಭದ್ರತಾ ಪಡೆಗಳು ನಿಖಿಲ್ ಗುಪ್ತಾರನ್ನು ತಮಗೆ ಹಸ್ತಾಂತರ ಮಾಡಬೇಕು ಎಂದು ಜೆಕ್ ಸರ್ಕಾರವನ್ನು ಕೋರಿದ್ದವು. ಇದನ್ನು ಅಲ್ಲಿನ ಕೋರ್ಟ್ ಮಾನ್ಯ ಮಾಡಿದೆ ಎಂದರು.
ನಿಖಿಲ್ ಗುಪ್ತಾ ಮೇಲಿನ ಆರೋಪವೇನು?: ಭಾರತೀಯ ಉದ್ಯಮಿಯಾದ ನಿಖಿಲ್ ಗುಪ್ತಾ ಅವರು ಖಲಿಸ್ತಾನಿ ಉಗ್ರ ಮತ್ತು ಸಿಖ್ಸ್ ಫಾರ್ ಜಸ್ಟಿಸ್ (SFJ) ನ ಸಂಸ್ಥಾಪಕ ಗುರುಪತ್ವಂತ್ ಸಿಂಗ್ ಪನ್ನುನ್ ಹತ್ಯೆಯ ಸಂಚಿನಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಎಸ್ಎಫ್ಜೆ ಸಿಖ್ ಸಂಘಟನೆಯನ್ನು ಭಾರತದಲ್ಲಿ ನಿಷೇಧಿಸಲಾಗಿದೆ. ಸರ್ಕಾರ ಇದನ್ನು ಭಯೋತ್ಪಾದಕ ಸಂಘಟನೆ ಎಂದು ಪರಿಗಣಿಸಿದೆ. 2020 ರಲ್ಲಿ ಪನ್ನುನ್ ಭಯೋತ್ಪಾದಕ ಎಂದು ಘೋಷಿಸಲಾಗಿದೆ. ಈತನ ಮೇಲೆ ಮೂರು ದೇಶದ್ರೋಹ ಸೇರಿದಂತೆ 22 ಕ್ರಿಮಿನಲ್ ಪ್ರಕರಣಗಳಿವೆ.
ಕಳೆದ ವರ್ಷ ಗುರುಪತ್ವಂತ್ ಸಿಂಗ್ ಪನ್ನುನ್ ಹತ್ಯೆಗೆ ಸಂಚು ನಡೆದಿತ್ತು. ಇದರಲ್ಲಿ ನಿಖಿಲ್ ಗುಪ್ತಾ ಭಾಗಿಯಾಗಿದ್ದಾನೆ ಎಂದು ಅಮೆರಿಕದ ಭದ್ರತಾ ಸಂಸ್ಥೆಗಳು ಆರೋಪಿಸಿವೆ. ಗುಪ್ತಾರನ್ನು ಜೂನ್ 30, 2023 ರಂದು ಜೆಕ್ ಗಣರಾಜ್ಯದಲ್ಲಿ ಬಂಧಿಸಲಾಗಿದೆ. ಈತ ಭಾರತೀಯ ಸರ್ಕಾರಿ ಅಧಿಕಾರಿಯೊಬ್ಬರ ಸೂಚನೆಯ ಮೇರೆಗೆ ಹತ್ಯೆ ಸಂಚು ರೂಪಿಸಿದ್ದಾನ ಎಂದೂ ಅಮೆರಿಕ ದೂರಿದೆ.
ಪ್ರಕರಣದ ಸಂಬಂಧ ಈ ವರ್ಷದ ಜನವರಿಯಲ್ಲಿ, ಪ್ರೇಗ್‌ನ ಜೆಕ್ ಉಚ್ಚ ನ್ಯಾಯಾಲಯವು ಗುಪ್ತಾ ಅವರ ಮನವಿಯನ್ನು ವಜಾಗೊಳಿಸಿ, ಅಮೆರಿಕಕ್ಕೆ ಹಸ್ತಾಂತರಿಸುವಂತೆ ಆದೇಶಿಸಿತು. ಇದರ ವಿರುದ್ಧ ಗುಪ್ತಾ ಅವರು ರಕ್ಷಣೆ ಕೋರಿ ಸಾಂವಿಧಾನಿಕ ನ್ಯಾಯಾಲಯದ ಮೊರೆ ಹೋಗಿದ್ದರು. ಈ ನ್ಯಾಯಾಲಯದಲ್ಲೂ ಹಿನ್ನಡೆ ಉಂಟಾಗಿದೆ.
ಇದನ್ನೂ ಓದಿ: ಸಿಖ್ ನಾಯಕ ಪನ್ನುನ್ ಹತ್ಯೆಗೆ ಸಂಚು ರೂಪಿಸಿದವರನ್ನು ಶಿಕ್ಷೆಗೆ ಗುರಿಯಾಗಿಸಬೇಕು: ಭಾರತಕ್ಕೆ ಶ್ವೇತಭವನ ಒತ್ತಾಯ