ನಾಗೌರ್ (ರಾಜಸ್ಥಾನ): ಜಿಲ್ಲೆಯ ಪಂಚೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪತಿಯೊಬ್ಬ ತನ್ನ ಪತ್ನಿಯನ್ನು ಬೈಕ್‌ನ ಹಿಂಬದಿಯಲ್ಲಿ ಹಗ್ಗ ಕಟ್ಟಿ ಎಳೆದೊಯ್ದ ಆಘಾತಕಾರಿ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಘಟನೆ ಒಂದು ತಿಂಗಳಾಗಿದ್ದು, ಅದರ ವಿಡಿಯೋ ಈಗ ವೈರಲ್ ಆಗಿದೆ. ಇದಾದ ಬಳಿಕ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಮಾಹಿತಿ ಪ್ರಕಾರ, ಮಹಿಳೆ ತನ್ನ ಪತಿ ಮತ್ತು ಅತ್ತೆಯನ್ನು ನಿಂದಿಸಿದಾಗ, ಪತಿ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಕುಡಿತದ ಅಮಲಿನಲ್ಲಿ ಪತ್ನಿಗೆ ಮೊದಲು ಥಳಿಸಿ ನಂತರ ಬೈಕ್‌ನ ಹಿಂದೆ ಹಗ್ಗದಿಂದ ಕಟ್ಟಿ ಎಳೆದೊಯ್ದಿದ್ದಾನೆ.
ಪತ್ನಿ ನರಳಾಟ ಲೆಕ್ಕಿಸದೆ ಪತಿ ಕ್ರೌರ್ಯ: ಆರೋಪಿ ಪ್ರೇಮರಾಮ್ ಮೇಘವಾಲ್ ತನ್ನ ಸ್ವಂತ ಪತ್ನಿಯನ್ನೇ ಬೈಕ್ ಹಿಂದೆ ಕಟ್ಟಿ ಎಳೆದುಕೊಂಡು ಹೋದಾಗ ಆಕೆ ಜೋರಾಗಿ ಕಿರುಚುತ್ತಿದ್ದರೂ ಕ್ರೂರ ಪತಿ ಆಕೆಯ ಕಿರುಚಾಟ ಕೇಳಿಸಲಿಲ್ಲ. ಪಕ್ಕದಲ್ಲಿದ್ದವರು ಮಹಿಳೆಯನ್ನು ಪತಿಯ ಹಿಡಿತದಿಂದ ರಕ್ಷಿಸಲು ಮುಂದಾದ್ರೂ ಸಹ ಆತ ಆಕೆಯನ್ನು ರಸ್ತೆಯಲ್ಲಿ ಎಳೆದುಕೊಂಡು ಹೋಗುತ್ತಿದ್ದ. ಈ ಎಲ್ಲ ದೃಶ್ಯವೂ ಮೊಬೈಲ್ವೊಂದರಲ್ಲಿ ಸೆರೆಯಾಗಿದೆ.
ತಿಂಗಳ ನಂತರ ವಿಡಿಯೋ ವೈರಲ್: ಪಂಚೋಡಿ ಪೊಲೀಸ್ ಠಾಣಾ ಅಧಿಕಾರಿ ತಂಢಿಕರಿ ಖೇತಾರಾಮ್ ಅವರು ಒಂದು ತಿಂಗಳ ಹಿಂದಿನ ವಿಡಿಯೋ ಎಂದು ಹೇಳಿದರು. ಮಹಿಳೆ, ತನ್ನ ಪತಿ ಮತ್ತು ಅತ್ತೆಯೊಂದಿಗೆ ಯಾವುದೋ ವಿಚಾರಕ್ಕೆ ಜಗಳ ಮಾಡಿಕೊಂಡಿದ್ದರು. ಈ ವೇಳೆ ಆಕೆಯ ಗಂಡ ಮತ್ತು ಅತ್ತೆಗೆ ಗದರಿಸಿದ್ದರು. ಇದಾದ ಬಳಿಕ ಕೋಪಗೊಂಡ ಪ್ರೇಮಾರಾಮ್ ಮದ್ಯ ಸೇವಿಸಿ ಮೊದಲು ಪತ್ನಿಗೆ ಥಳಿಸಿ ಬೈಕ್ ಹಿಂಬದಿ ಕಟ್ಟಿ ಎಳೆದೊಯ್ದಿದ್ದ. ಆದರೆ, ವಿಡಿಯೋ ಕಾಣಿಸಿಕೊಂಡ ತಕ್ಷಣ ನಾವು ವಿಷಯ ತಿಳಿದು ಆ ವ್ಯಕ್ತಿಯನ್ನು ಬಂಧಿಸಿದ್ದೇವೆ. ಸದ್ಯ ಮಹಿಳೆಯ ಪರವಾಗಿ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದಿದ್ದಾರೆ.
ಘಟನೆ ಕುರಿತು ಎಸ್ಪಿ ನಾರಾಯಣ ತೋಗಸ್ ಮಾತನಾಡಿ, ಪಂಚೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವುದು ಗಮನಕ್ಕೆ ಬಂದಿತ್ತು. ವೈರಲ್ ಆದ ವಿಡಿಯೋ ಆಧರಿಸಿ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಮಹಿಳೆ ತನ್ನ ಸಹೋದರಿಯನ್ನು ಭೇಟಿಯಾಗಲು ಜೈಸಲ್ಮೇರ್‌ಗೆ ಹೋಗುತ್ತಿದ್ದಳು. ಆದರೆ ಆಕೆಯ ಪತಿ ನಿರಾಕರಿಸಿದರು. ಆದರೂ ಅವಳು ಒಪ್ಪಲಿಲ್ಲ. ಈ ವೇಳೆ ಪತಿ ಆಕೆಯನ್ನು ತನ್ನ ಮೋಟಾರ್ ಸೈಕಲ್‌ನ ಹಿಂಬದಿಯಲ್ಲಿ ಕಟ್ಟಿ ಎಳೆದೊಯ್ದಿದ್ದ ಎಂದು ತಿಳಿಸಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪ್ರಕರಣ ದಾಖಲಿಸಿಕೊಳ್ಳುವಂತೆ ಎಸ್ ಹೆಚ್‌ಒಗೆ ತಿಳಿಸಿದ್ದು, ಕೇಸ್ ದಾಖಲಾಗಿದೆ. ಆರೋಪಿ ಪ್ರೇಮರಾಮ್ನನ್ನು ಕೂಡ ಬಂಧಿಸಲಾಗಿದೆ. ಸದ್ಯ ಸಂತ್ರಸ್ತೆ ಬಾರ್ಮರ್‌ನಲ್ಲಿರುವ ತನ್ನ ಸಹೋದರಿಯ ಮನೆಯಲ್ಲಿದ್ದಾರೆ. ಈಗ ಅವರನ್ನು ಕರೆಸಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.