ನವದೆಹಲಿ: ಜಾರಿಗೆ ಬಂದಿರುವ ಹೊಸ ಕಾನೂನಿನಲ್ಲಿ ಕೆಲ ಅಪರಾಧಗಳಿಗೆ ಶಿಕ್ಷೆಯ ಪ್ರಮಾಣವನ್ನು ಹೆಚ್ಚಳ ಮಾಡಿದ್ದು, ಸರ್ಕಾರ ಮತ್ತು ಸಂಬಂಧಿತ ಕ್ಷೇತ್ರದ ಮಧ್ಯೆ ತಿಕ್ಕಾಟಕ್ಕೆ ಕಾರಣವಾಗಿದೆ. ಭಾರತೀಯ ವೈದ್ಯಕೀಯ ಸಂಘವು (ಐಎಂಎ) ವೈದ್ಯರ ನಿರ್ಲಕ್ಷ್ಯದ ಸಾವಿಗೆ ವಿಧಿಸಲಾಗಿರುವ ಶಿಕ್ಷೆಯನ್ನು ಕಡಿಮೆ ಮಾಡಬೇಕು, ಇಲ್ಲವೇ ಕಾನೂನನ್ನೇ ಕೈಬಿಡಬೇಕು ಎಂದು ಆಗ್ರಹಿಸಿದೆ. ಈ ಮನವಿಯನ್ನು ಕೇಂದ್ರ ಸರ್ಕಾರ ನಿರಾಕರಿಸಿದೆ.
ಶಿಕ್ಷೆಯ ಪ್ರಮಾಣದ ವಿರುದ್ಧ ಭಾರತೀಯ ವೈದ್ಯಕೀಯ ಸಂಘವು 'ಜಸ್ಟೀಸ್ ಫಾರ್ ಡಾಕ್ಟರ್ಸ್' ಎಂಬ ಅಭಿಯಾನ ಆರಂಭಿಸಲು ಮುಂದಾಗಿದೆ. ಜುಲೈ- ಆಗಸ್ಟ್ನಲ್ಲಿ ಈ ಅಭಿಯಾನ ನಡೆಸಲು ಕರೆ ನೀಡಿದೆ. ಆದರೆ, ನಿರ್ಲಕ್ಷ್ಯದಿಂದ ಆಗುವ ಸಾವಿಗೆ ಹೊಸ ಕ್ರಿಮಿನಲ್ ಕಾನೂನಿನಡಿ ಆಗುವ ಶಿಕ್ಷೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಕೇಂದ್ರವು ಮಂಗಳವಾರ ಪುನರುಚ್ಚರಿಸಿದೆ.
ವೈದ್ಯಕೀಯ ಸಂಘದ ಆಕ್ಷೇಪವೇನು?: ಭಾರತೀಯ ವೈದ್ಯಕೀಯ ಸಂಘವು ಹೊಸ ಕ್ರಿಮಿನಲ್ ಕಾನೂನಿನ ಸೆಕ್ಷನ್ 106 (1) ರ ಬಗ್ಗೆ ಆಕ್ಷೇಪ ಹೊಂದಿದೆ. ಭಾರತೀಯ ನ್ಯಾಯ ಸಂಹಿತಾ (ಬಿಎನ್ಎಸ್) ಕಾನೂನಿನಲ್ಲಿ ವೈದ್ಯಕೀಯ ಕೆಲಸದ ವೇಳೆ ನೋಂದಾಯಿತ ವೈದ್ಯರಿಂದ ಉಂಟಾದ ನಿರ್ಲಕ್ಷ್ಯದ ಸಾವಿಗೆ ಗರಿಷ್ಠ ಶಿಕ್ಷೆಯನ್ನು ವಿಧಿಸಲಾಗಿದೆ. ಅಂದರೆ, ಅಪರಾಧಿ ವೈದ್ಯರಿಗೆ 5 ವರ್ಷ ಜೈಲು ಶಿಕ್ಷೆ ಮತ್ತು ದಂಡವನ್ನು ವಿಧಿಸಲು ಸೂಚಿಸಲಾಗಿದೆ. ಹಿಂದಿನ ಐಪಿಸಿ ಕಾನೂನಿನ ಪ್ರಕಾರ ಈ ಅಪರಾಧಕ್ಕೆ 2 ವರ್ಷ ಜೈಲು ಶಿಕ್ಷೆ ಇತ್ತು. ಶಿಕ್ಷೆಯ ಪ್ರಮಾಣ ಹೆಚ್ಚಿಸಿದ್ದಕ್ಕೆ ವೈದ್ಯರ ಸಂಘವು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ರೋಗಿಯ ಸಾವಾದಲ್ಲಿ ವೈದ್ಯನ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಲು ಹೊಸ ಕಾನೂನಿನಲ್ಲಿ ಅವಕಾಶವಿದೆ. ಇದು ವೈದ್ಯ ವೃತ್ತಿಯ ಮೇಲೆ ಪರಿಣಾಮ ಬೀರುತ್ತದೆ. ವೈದ್ಯರಿಗೆ ಕಿರುಕುಳ ನೀಡಲು ಈ ಕಾನೂನು ರೂಪಿಸಲಾಗಿದೆ ಎಂದು ಎಎಂಐ ಆರೋಪಿಸಿದೆ. ಕ್ರಿಮಿನಲ್ ಮೊಕದ್ದಮೆಯ ಭಯವಿಲ್ಲದೇ ವೈದ್ಯರು ತಮ್ಮ ವೃತ್ತಿಯನ್ನು ಅಭ್ಯಾಸ ಮಾಡಲು ಸುರಕ್ಷಿತ ಮತ್ತು ಸೌಹಾರ್ದಯುತ ವಾತಾವರಣವನ್ನು ಒದಗಿಸುವುದು ಸರ್ಕಾರದ ಜವಾಬ್ದಾರಿ. ವೈದ್ಯಕೀಯ ನಿರ್ಲಕ್ಷ್ಯಕ್ಕೆ ಕ್ರಿಮಿನಲ್ ಕೇಸ್ ಹಾಕುವುದು ಸರಿಯಲ್ಲ ಎಂಬುದು ಸಂಸ್ಥೆ ವಾದ.
ಸರ್ಕಾರದ ಸ್ಪಷ್ಟನೆಯೇನು?: ಯಾವುದೇ ವ್ಯಕ್ತಿಯಿಂದ (ವೈದ್ಯರು ಸೇರಿದಂತೆ) ನಿರ್ಲಕ್ಷ್ಯದಿಂದ ವ್ಯಕ್ತಿಯೊಬ್ಬರ ಸಾವಾದರೆ, ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 304A ಅಡಿಯಲ್ಲಿ 2 ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ದಂಡವನ್ನು ವಿಧಿಸುವ ಅವಕಾಶವಿದೆ. ಈಗ ಆ ಪ್ರಮಾಣವನ್ನು 5 ವರ್ಷ ಮತ್ತು ದಂಡಕ್ಕೆ ಹೆಚ್ಚಿಸಲಾಗಿದೆ. ವೃತ್ತಿಪರ ವೈದ್ಯರಿಂದ ಈ ಬಗ್ಗೆ ಸಲಹೆಗಳನ್ನು ಪಡೆಯಲಾಗಿದೆ. ಬಿಎನ್ಎಸ್ ಸೆಕ್ಷನ್ 106 (1) ಅನ್ನು ತಿದ್ದುಪಡಿ ಮಾಡಲಾಗಿದೆ. ನಿರ್ಲಕ್ಷ್ಯದ ತಪ್ಪಿಗೆ ಶಿಕ್ಷೆ ಹೆಚ್ಚಿಸಲಾಗಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಇದನ್ನೂ ಓದಿ: ಜುಲೈ 1 ರಿಂದ ಹೊಸ ಅಪರಾಧ ಕಾನೂನುಗಳು ಜಾರಿ: 40 ಲಕ್ಷ ಜನರಿಂದ ತರಬೇತಿ - new criminal laws