ಕೋಟಾ(ರಾಜಸ್ಥಾನ): ದೇಶದ 23 ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ)ಗಳ 17,500 ಸೀಟುಗಳ ಪ್ರವೇಶಕ್ಕಾಗಿ ದೇಶ ಮತ್ತು ವಿದೇಶಗಳ 225 ನಗರಗಳಲ್ಲಿ ಮೇ.26 ರಂದು ಜಂಟಿ ಪ್ರವೇಶ ಪರೀಕ್ಷೆ (ಜೆಇಇ ಅಡ್ವಾನ್ಸ್ಡ್ ಪರೀಕ್ಷೆ) ಆಯೋಜಿಸಲಾಗಿದೆ. ಈ ಬಾರಿಯ ಪರೀಕ್ಷೆಯನ್ನು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಮದ್ರಾಸ್ ಆಯೋಜಿಸುತ್ತಿದೆ.
ಈ ಪರೀಕ್ಷೆಯು ಮೇ 26ರ ಬೆಳಗ್ಗೆ 9 ರಿಂದ 12 ಮತ್ತು ಮಧ್ಯಾಹ್ನ 2:30 ರಿಂದ 5:30 ರವರೆಗೆ ಎರಡು ಪಾಳಿಗಳಲ್ಲಿ ನಡೆಯಲಿದೆ. ಕೋಟಾ ನಗರದಲ್ಲಿ ಎರಡು ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಈ ಎರಡು ಕೇಂದ್ರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿನಿಯರು ಪರೀಕ್ಷೆಗೆ ಹಾಜರಾಗಲಿದ್ದಾರೆ.
ತಜ್ಞರ ಸಲಹೆಗಳೇನು?: ಕೋಟಾದ ಖಾಸಗಿ ಕೋಚಿಂಗ್ ಇನ್ಸ್ಟಿಟ್ಯೂಟ್ನ ವೃತ್ತಿ ಕೌನ್ಸೆಲಿಂಗ್ ತಜ್ಞ ಅಮಿತ್ ಅಹುಜಾ ಮಾತನಾಡಿ, ಮೊದಲ ಪತ್ರಿಕೆ ಪರೀಕ್ಷೆಗಾಗಿ ಅಭ್ಯರ್ಥಿಗಳು ಬೆಳಗ್ಗೆ 7 ಗಂಟೆಗೆ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಬೇಕು. ಬೆಳಗ್ಗೆ 8.30ಕ್ಕೆ ಪೇಪರ್-1ರ ಕಂಪ್ಯೂಟರ್ ಮತ್ತು ಪರೀಕ್ಷಾ ಡೆಸ್ಕ್ ನೀಡಲಾಗುತ್ತದೆ. ಪರೀಕ್ಷೆ ಪ್ರಾರಂಭವಾಗುವ 25 ನಿಮಿಷಗಳ ಮೊದಲು, ಅಭ್ಯರ್ಥಿಗಳು ತಮ್ಮ ಜೆಇಇ ಅಡ್ವಾನ್ಸ್ಡ್ ರೋಲ್ ನಂಬರ್, ಜನ್ಮ ದಿನಾಂಕವನ್ನು ನಮೂದಿಸುವ ಮೂಲಕ ಲಾಗ್ ಇನ್ ಆಗಿ ಸೂಚನೆಗಳನ್ನು ಓದಿಕೊಳ್ಳಬೇಕು. ಜೆಇಇ ಅಡ್ವಾನ್ಸ್ಡ್ ಪರೀಕ್ಷೆಯ ಮಾದರಿ ಮತ್ತು ಮಾರ್ಕಿಂಗ್ ಸ್ಕೀಮ್ ಅನ್ನು ಎಂದಿಗೂ ಮುಂಚಿತವಾಗಿ ನಿರ್ಧರಿಸಲಾಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಅಭ್ಯರ್ಥಿಗೆ ನೀಡಿದ ಸೂಚನೆಗಳನ್ನು ಎಚ್ಚರಿಕೆಯಿಂದ ಓದಬೇಕು ಎಂದು ತಿಳಿಸಿದ್ದಾರೆ.
ಮಧ್ಯಾಹ್ನ 12 ಗಂಟೆಗೆ ಪೇಪರ್-1 ಪೂರ್ಣಗೊಳ್ಳಲಿದೆ. ಇದರ ನಂತರ, ಅಭ್ಯರ್ಥಿಗೆ ಪೇಪರ್ -1 ಮತ್ತು ಪೇಪರ್ -2 ರ ನಡುವೆ 2.30 ಗಂಟೆಗಳ ಸಮಯದ ಅಂತರ ಇರುತ್ತದೆ. ಆದರೆ, ವಾಸ್ತವದಲ್ಲಿ ಕೇವಲ ಎರಡು ಗಂಟೆಗಳ ಸಮಯದ ಅಂತರವಿದ್ದು, ಮಧ್ಯಾಹ್ನ 2 ಗಂಟೆಗೆ ಅಭ್ಯರ್ಥಿಗೆ ಪೇಪರ್ -2 ಗಾಗಿ ಡೆಸ್ಕ್ ಮತ್ತು ಕಂಪ್ಯೂಟರ್ ನೀಡಲಾಗುತ್ತದೆ. ಅಭ್ಯರ್ಥಿಗಳು ನೀಡಿದ ಸಮಯವನ್ನು ಸರಿಯಾಗಿ ಬಳಸಿಕೊಳ್ಳಬೇಕು. ಪರೀಕ್ಷಾ ಕೇಂದ್ರ ಮತ್ತು ನಿವಾಸ ದೂರದಲ್ಲಿದ್ದರೆ ಅಭ್ಯರ್ಥಿಯು ಪರೀಕ್ಷಾ ಕೇಂದ್ರದ ಸಮೀಪದಲ್ಲೇ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿಕೊಳ್ಳಬೆಕು ಎಂದು ಮಾಹಿತಿ ನೀಡಿದ್ದಾರೆ.
ಪರೀಕ್ಷಾ ಕೇಂದ್ರ ಮತ್ತು ನಿವಾಸವು ಹತ್ತಿರದಲ್ಲಿದ್ದರೆ, ಅಭ್ಯರ್ಥಿಯು ನಿವಾಸಕ್ಕೆ ಹೋಗಿ ಮಧ್ಯಾಹ್ನ 1.45 ರೊಳಗೆ ಪರೀಕ್ಷಾ ಕೇಂದ್ರವನ್ನು ತಲುಪಬೇಕು. ಪೇಪರ್-1 ಮುಗಿದ ನಂತರ, ಅಭ್ಯರ್ಥಿಯು ಅನಗತ್ಯವಾಗಿ ಚರ್ಚೆ ಮಾಡಬಾರದು. ಬಿಸಿಲನ್ನು ಗಮನದಲ್ಲಿಟ್ಟುಕೊಂಡು ಲಘು ಉಪಹಾರ ಮಾತ್ರ ತೆಗೆದುಕೊಳ್ಳಬೇಕು. ವಿದ್ಯಾರ್ಥಿಗಳು ಬೆಳಗ್ಗೆ 8 ರಿಂದ ಸಂಜೆ 5:30 ರವರೆಗೆ ಸದೃಢವಾಗಿರಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದ್ದಾರೆ.
ಈ ವಿಷಯಗಳನ್ನು ತಪ್ಪದೇ ಪಾಲಿಸಿ:
- ಅಭ್ಯರ್ಥಿಯು ಯಾವುದೇ ಹೆಚ್ಚುವರಿ ಛಾಯಾಚಿತ್ರವನ್ನು ಕೊಂಡೊಯ್ಯುವ ಅಗತ್ಯವಿಲ್ಲ.
- ಅಭ್ಯರ್ಥಿಗಳು ಪ್ರವೇಶ ಪತ್ರದ ಜೊತೆಗೆ ಆಧಾರ್ ಕಾರ್ಡ್, ಸ್ಕೂಲ್ ಐಡಿ, ಡ್ರೈವಿಂಗ್ ಲೈಸೆನ್ಸ್, ವೋಟರ್ ಐಡಿ, ಪಾಸ್‌ಪೋರ್ಟ್ ಮತ್ತು ಪ್ಯಾನ್ ಕಾರ್ಡ್‌ನಂತಹ ಮೂಲ ಗುರುತಿನ ಪುರಾವೆಗಳನ್ನು ಹೊಂದಿರಬೇಕು.
- ಅಭ್ಯರ್ಥಿಗಳು ತಮ್ಮೊಂದಿಗೆ ಪಾರದರ್ಶಕ ಕುಡಿಯುವ ನೀರಿನ ಬಾಟಲಿ ತೆಗೆದುಕೊಂಡು ಹೋಗಬೇಕು.
- ರಫ್ ವರ್ಕ್ಗಾಗಿ ಅಭ್ಯರ್ಥಿಗಳಿಗೆ ಪ್ರತಿ ಪತ್ರಿಕೆಯಲ್ಲಿ ಸ್ಕ್ರಾಂಬಲ್ ಪ್ಯಾಡ್‌ಗಳನ್ನು ನೀಡಲಾಗುತ್ತದೆ. ಅದರಲ್ಲಿ ನೀವು ಮುಂಗಡ ಅರ್ಜಿ ಸಂಖ್ಯೆ ಮತ್ತು ನಿಮ್ಮ ಹೆಸರನ್ನು ಬರೆಯಬೇಕಾಗುತ್ತದೆ. ಪರೀಕ್ಷೆ ಮುಗಿದ ನಂತರ ವಿದ್ಯಾರ್ಥಿಯು ಸ್ಕ್ರಾಂಬಲ್ ಪ್ಯಾಡ್ ಅನ್ನು ತನ್ನೊಂದಿಗೆ ತೆಗೆದುಕೊಂಡು ಹೋಗಬಹುದು. ಹೆಚ್ಚುವರಿ ಸ್ಕ್ರಾಂಬಲ್ ಪ್ಯಾಡ್ ಅನ್ನು ಒದಗಿಸಲಾಗುವುದಿಲ್ಲ.
- ಪರೀಕ್ಷೆಯ ಸಮಯದಲ್ಲಿ ಯಾವುದೇ ರೀತಿಯ ಎಲೆಕ್ಟ್ರಾನಿಕ್ ಸಾಧನವನ್ನು ಅನುಮತಿಸಲಾಗುವುದಿಲ್ಲ. ಅಲ್ಲದೇ, ಉಂಗುರ, ಬಳೆ, ಕಿವಿಯೋಲೆ, ಮೂಗುತಿ, ತಾಯತ ಇತ್ಯಾದಿಗಳನ್ನು ಧರಿಸದಂತೆ ಸೂಚಿಸಲಾಗಿದೆ.
- ದೊಡ್ಡ ಜೋಬುಗಳನ್ನು ಹೊಂದಿರುವ ಬಟ್ಟೆಗಳನ್ನು ಧರಿಸದಂತೆಯೂ ಸೂಚಿಸಲಾಗಿದೆ. ಇದಲ್ಲದೇ, ಜನರು ಶೂಗಳ ಬದಲಿಗೆ ಚಪ್ಪಲಿ ಧರಿಸಿ ಬರುವಂತೆ ತಿಳಿಸಲಾಗಿದೆ. ಸರಳ ಗಡಿಯಾರವನ್ನು ಧರಿಸಲು ಅನುಮತಿಸಲಾಗಿದೆ.