ತಿರುಮಲ (ತಿರುಪತಿ): ತಿರುಮಲ ತಿರುಪತಿ ದೇವಸ್ಥಾನದ (ಟಿಟಿಡಿ) ನೂತನ ಕಾರ್ಯನಿರ್ವಾಹಕ ಅಧಿಕಾರಿ (ಇಒ) ಆಗಿ ಐಎಎಸ್ ಅಧಿಕಾರಿ ಶ್ಯಾಮಲಾ ರಾವ್ ಅವರನ್ನು ನೇಮಕ ಮಾಡಿ ಶುಕ್ರವಾರ ಸರ್ಕಾರ ಆದೇಶ ಮಾಡಿದೆ.
ಪ್ರಭಾರಿ ಇಒ ಆಗಿ ಮುಂದುವರೆದು ಹಲವು ಆರೋಪಗಳನ್ನು ಎದುರಿಸುತ್ತಿದ್ದ ಧರ್ಮಾ ರೆಡ್ಡಿ ಅವರನ್ನು ಆ ಸ್ಥಾನದಿಂದ ತೆಗೆದುಹಾಕಿ, ಜೆ.ಶ್ಯಾಮಲಾ ರಾವ್ ಅವರನ್ನು ಪೂರ್ಣಾವಧಿ ಇಒ ಆಗಿ ನೇಮಕ ಮಾಡಲಾಗಿದೆ. ಶ್ಯಾಮಲಾ ರಾವ್ ಅವರು ತಮ್ಮ ನೇರ ನುಡಿ ಮತ್ತು ಕರ್ತವ್ಯ ಬದ್ಧತೆಗೆ ಹೆಸರು ವಾಸಿಯಾಗಿದ್ದಾರೆ. ಪ್ರಸ್ತುತ ಉನ್ನತ ಶಿಕ್ಷಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರನ್ನು ಟಿಟಿಡಿಗೆ ವರ್ಗಾವಣೆ ಮಾಡಿ ಸರ್ಕಾರದ ಮುಖ್ಯ ಕಾರ್ಯದರ್ಶಿ ನಿರಭ್ ಕುಮಾರ್ ಪ್ರಸಾದ್ ಆದೇಶ ಹೊರಡಿಸಿದ್ದಾರೆ.
ಜಿಎಸ್ಟಿ ಜಾರಿಯಾದಾಗ ರಾಜ್ಯ ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತರಾಗಿದ್ದ ಶ್ಯಾಮಲಾ ರಾವ್ ಅವರು ತಾಂತ್ರಿಕ ಸಮಸ್ಯೆಗಳು ಉದ್ಭವಿಸದಂತೆ ಗುರುತಿಸಿ ರಾಜ್ಯದ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಶ್ರಮಿಸಿದ್ದರು. ಇಂತಹ ಪ್ರಾಮಾಣಿಕ ಅಧಿಕಾರಿ ತಿರುಮಲದಲ್ಲಿ ಇದ್ದರೆ ಒಳ್ಳೆಯದು ಎಂಬ ಕಾರಣಕ್ಕೆ ಸರ್ಕಾರ ಅವರನ್ನು ಇಒ ಆಗಿ ನೇಮಿಸಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಪ್ರಭಾರಿ ಇಒ ಆಗಿದ್ದ ಧರ್ಮರೆಡ್ಡಿ: 2022ರ ಮೇ ತಿಂಗಳಿನಲ್ಲಿ ಅಂದಿನ ಟಿಟಿಡಿ ಇಒ ಆಗಿದ್ದ ಜವಾಹರರೆಡ್ಡಿ ಅವರ ವರ್ಗಾವಣೆಯಿಂದಾಗಿ ಅವರ ಸ್ಥಾನಕ್ಕೆ ಧರ್ಮಾರೆಡ್ಡಿ ಅವರನ್ನು ಪ್ರಭಾರಿ ಇಒ ಆಗಿ ವೈಎಸ್ಆರ್ಪಿ ಸರ್ಕಾರ ನೇಮಿಸಿತ್ತು. ಅಲ್ಲಿಂದ ಇಲ್ಲಿಯವರೆಗೂ ಧರ್ಮಾರೆಡ್ಡಿ ಮುಂದುವರಿದಿದ್ದರು. ಇದೀಗ ಟಿಡಿಪಿ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಇದೇ ತಿಂಗಳ 11ನೇ ತಾರೀಖಿನಂದು ರಜೆ ಮೇಲೆ ಅವರನ್ನು ಕಳುಹಿಸಲಾಗಿತ್ತು. ಶುಕ್ರವಾರ ರಿಲೀಫ್ ನೀಡಲಾಗಿದೆ.
ಇದಕ್ಕೂ ಮುನ್ನ, ಆಂಧ್ರಪ್ರದೇಶದ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೆ ಗುರುವಾರ ಚಂದ್ರಬಾಬು ನಾಯ್ಡು ಅವರು ಕುಟುಂಬ ಸಮೇತವಾಗಿ ತಿರುಪತಿಗೆ ಭೇಟಿ ನೀಡಿ ಶ್ರೀವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದು ಪೂಜೆ ಸಲ್ಲಿಸಿದ್ದರು. ಈ ವೇಳೆ, ಮಾಧ್ಯಮಗಳೊಂದಿಗೆ ಮಾತನಾಡಿದ್ದ ಅವರು, ರಾಜ್ಯದಲ್ಲಿ ಸಾರ್ವಜನಿಕ ಆಡಳಿತ ಆರಂಭವಾಗಿದ್ದು, ತಿರುಮಲ ತಿರುಪತಿ ದೇವಸ್ಥಾನದಿಂದಲೇ ಶುದ್ಧೀಕರಣ ಆರಂಭಿಸುವುದಾಗಿ ಘೋಷಣೆ ಮಾಡಿದ್ದರು. ಇದರ ಬೆನ್ನಲ್ಲೆ ಟಿಟಿಡಿ ಇಒ ಬದಲಾವಣೆ ಗೊಂಡಿದ್ದಾರೆ.
ಇದನ್ನೂ ಓದಿ: ಸಿದ್ಧವಾಗುತ್ತಿದೆ 7.5 ಅಡಿ ಎತ್ತರದ ರಾಮೋಜಿ ರಾವ್ ಪ್ರತಿಮೆ - Ramoji Rao Statue