ನವದೆಹಲಿ: ಆದಾಯ ತೆರಿಗೆ ಇಲಾಖೆಯು ವಿವಿಧ ಬ್ಯಾಂಕ್‌ಗಳಲ್ಲಿನ ಕಾಂಗ್ರೆಸ್ ಖಾತೆಗಳಿಂದ 65 ಕೋಟಿ ರೂಪಾಯಿಗಳನ್ನು ವಿತ್ಡ್ರಾ ಮಾಡಿದೆ ಎಂದು ಕಾಂಗ್ರೆಸ್ ಪಕ್ಷ ಗಂಭೀರ ಆರೋಪ ಮಾಡಿದೆ. ಹಿಂದಿನ ವರ್ಷಗಳಲ್ಲಿ ರಿಟರ್ನ್ಗೆ ಸಂಬಂಧಿಸಿದ ಪ್ರಕರಣವು ಉಪನ್ಯಾಯಾಲಯದಲ್ಲಿ ಇದ್ದಾಗಲೂ ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿ ಈ ಹಣವನ್ನು ವಿತ್ಡ್ರಾ ಮಾಡಲಾಗಿದೆ ಎಂದು ಪಕ್ಷವು ದೂರಿದೆ.
ಫೆಬ್ರವರಿ 16ರಂದು ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿದೆ ಎಂದು ಪಕ್ಷ ಆರೋಪಿಸಿತ್ತು. ಇದಾದ ಕೆಲವೇ ಹೊತ್ತಿನಲ್ಲಿ ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿಯು ಬ್ಯಾಂಕ್ ಖಾತೆಗಳನ್ನು ಸಕ್ರಿಯಗೊಳಿಸಿತ್ತು. ಇದೀಗ ಕಾಂಗ್ರೆಸ್‌ನ ವಿವಿಧ ಬ್ಯಾಂಕ್ ಖಾತೆಗಳಿಂದ 65 ಕೋಟಿ ರೂಪಾಯಿಗಳನ್ನು ಆದಾಯ ತೆರಿಗೆ ಇಲಾಖೆಯು ವಿತ್ಡ್ರಾ ಮಾಡಲು ಬ್ಯಾಂಕ್‌ಗಳಿಗೆ ಸೂಚಿಸಿದೆ ಎಂದು ಪಕ್ಷದ ಖಜಾಂಚಿ ಅಜಯ್ ಮಾಕೇನ್ ಹೇಳಿದ್ದಾರೆ.
ಕಾಂಗ್ರೆಸ್‌ನ ವಿವಿಧ ಬ್ಯಾಂಕ್ ಖಾತೆಗಳಿಂದ 65 ಕೋಟಿ ರೂಪಾಯಿ ಹಿಂಪಡೆಯುವಂತೆ ಆದಾಯ ತೆರಿಗೆ ಇಲಾಖೆ ವಿವಿಧ ಬ್ಯಾಂಕ್‌ಗಳಿಗೆ ಪತ್ರ ಬರೆದಿದೆ. ಆಗ ಯುವ ಕಾಂಗ್ರೆಸ್ ಆದಾಯ ತೆರಿಗೆ ಅಧಿಕಾರಿಗಳು ಎತ್ತಿದ್ದ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು, ಮೇಲ್ಮನವಿ ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಿದ್ದಾರೆ. ಈ ಮೇಲ್ಮನವಿ ಅಧಿಕಾರಿಗಳು ಪ್ರಕರಣವನ್ನು ಆಲಿಸುತ್ತಿದ್ದರೂ ಹಣ ವಿತ್ಡ್ರಾಗೆ ಪತ್ರ ಬರೆಯಲಾಗಿದೆ ಎಂದು ಅಜಯ್ ಮಾಕೇನ್ ತಿಳಿಸಿದ್ದಾರೆ.
ಹಿಂದಿನ ತೆರಿಗೆ ರಿಟರ್ನ್ಸ್‌ನಲ್ಲಿನ ವ್ಯತ್ಯಾಸಕ್ಕಾಗಿ ಆದಾಯ ತೆರಿಗೆ ಇಲಾಖೆಯು 210 ಕೋಟಿ ರೂ.ಗಳ ವಸೂಲಾತಿ ಮುಂದಾಗಿತ್ತು. ಇದನ್ನು ವಿರೋಧಿಸಿ ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿ, ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿಯು ಈ ಪ್ರಕ್ರಿಯೆಗೆ ತಡೆ ನೀಡಿದೆ. ಆದರೆ, ತೆರಿಗೆ ಅಧಿಕಾರಿಗಳು ನಮ್ಮ ಖಾತೆಗಳಿಂದ ಮೊತ್ತವನ್ನು ತೆಗೆದುಕೊಳ್ಳುವ ಮೂಲಕ ಪ್ರಜಾಪ್ರಭುತ್ವ ವಿರೋಧಿ ಕ್ರಮವನ್ನು ಆಶ್ರಯಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಪ್ರಕರಣವು ಉಪನ್ಯಾಯಾಲಯದಲ್ಲಿದ್ದು, ಮೇಲ್ಮನವಿ ನ್ಯಾಯಮಂಡಳಿಯಲ್ಲಿ ಇನ್ನೂ ವಿಚಾರಣೆ ನಡೆಯುತ್ತಿದೆ. ಆದ್ದರಿಂದ ಯಾವುದೇ ಮೊತ್ತವನ್ನು ಹಿಂಪಡೆಯದಂತೆ ಪಕ್ಷದಿಂದ ತನ್ನ ಬ್ಯಾಂಕ್‌ಗಳಿಗೆ ಪತ್ರ ಬರೆಯಲಾಗಿದೆ ಎಂದೂ ಮಾಹಿತಿ ನೀಡಿದ್ದಾರೆ.
ಅಲ್ಲದೇ, ಈ ಬಗ್ಗೆ ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿರುವ ಮಾಕೇನ್, ''ಆತಂಕಕಾರಿ ಅಪ್‌ಡೇಟ್: ಕೇಂದ್ರ ಸರ್ಕಾರದ ಏಜೆನ್ಸಿಗಳ ಕ್ರಮಗಳ ಬಗ್ಗೆ ಕಳವಳ ಹೆಚ್ಚುತ್ತಿದೆ. ಇದು ಭಾರತದಲ್ಲಿ ಬಹುಪಕ್ಷ ವ್ಯವಸ್ಥೆಗೆ ಸಂಭಾವ್ಯ ಅಪಾಯವನ್ನುಂಟುಮಾಡುತ್ತದೆ. ಪರಿಶೀಲಿಸದಿದ್ದರೆ, ಭಾರತದಲ್ಲಿ ಪ್ರಜಾಪ್ರಭುತ್ವವು ಕೊನೆಗೊಳ್ಳುತ್ತದೆ. ನ್ಯಾಯಾಂಗದ ಮಧ್ಯಸ್ಥಿಕೆ ಇಲ್ಲದೆ, ನಮ್ಮ ಪ್ರಜಾಪ್ರಭುತ್ವದ ತತ್ವಗಳು ಅಪಾಯಕ್ಕೆ ಒಳಗಾಗುತ್ತವೆ'' ಎಂದು ಬರೆದುಕೊಂಡಿದ್ದಾರೆ.
ಈ ಹಿಂದೆ ಆದಾಯ ತೆರಿಗೆ ಅಧಿಕಾರಿಗಳು ಪಕ್ಷದ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿದ ಕ್ರಮದ ಬಗ್ಗೆ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಸೇರಿದಂತೆ ಪಕ್ಷದ ಹಲವು ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದರು. ಸರ್ಕಾರದ ಈ ಕ್ರಮವು ಪ್ರಜಾಪ್ರಭುತ್ವದ ಮೇಲಿನ ದಾಳಿಯಾಗಿದೆ ಎಂದು ಆರೋಪಿಸಿದ್ದರು.
ಇದನ್ನೂ ಓದಿ: ಸ್ಥಗಿತಗೊಳಿಸಲಾಗಿದ್ದ ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆಗಳು ಪುನಃ ಸಕ್ರಿಯ: ಮುಖಂಡ ವಿವೇಕ್ ತಂಖಾ