ಹೈದರಾಬಾದ್: ಪ್ರಚೋದನಕಾರಿ ಚಟುವಟಿಕೆಗಳಿಂದ ದೂರವಿರುವಂತೆ ಮತ್ತು ಮಾತುಗಳನ್ನು ಹಿಡಿತದಲ್ಲಿ ಇಟ್ಟುಕೊಳ್ಳುವಂತೆ ಎಐಎಂಐಎಂನ ನಾಂಪಲ್ಲಿ ಶಾಸಕ ಮಜೀದ್ ಹುಸೇನ್ ಮತ್ತು ಕಾಂಗ್ರೆಸ್ ಮುಖಂಡ ಫಿರೋಜ್ ಖಾನ್ ಅವರ ಪ್ರತಿಸ್ಪರ್ಧಿ ಬಣಗಳಿಗೆ ಹೈದರಾಬಾದ್ ಪೊಲೀಸ್ ಆಯುಕ್ತ ಸಿ.ವಿ.ಆನಂದ್ ಸೂಚನೆ ನೀಡಿದ್ದಾರೆ.
ಹಿಂದಿನ ಕ್ರಿಮಿನಲ್ ಪ್ರೊಸೀಜರ್ ಕೋಡ್ನ ಸೆಕ್ಷನ್ 107ರ ಅಡಿಯಲ್ಲಿ (ಈಗ ಬಿಎನ್ಎಸ್ಎಸ್ನ ಸೆಕ್ಷನ್ 126, ಹೊಸ ಕ್ರಿಮಿನಲ್ ಪ್ರೊಸೀಜರ್ ಕೋಡ್) ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿ ನ್ಯಾಯಾಲಯದ ಕಲಾಪ ನಡೆಸಿದ ಪೊಲೀಸ್ ಆಯುಕ್ತರು ಗಲಭೆಕೋರ ಗುಂಪುಗಳಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿ ನ್ಯಾಯಾಲಯದ ಕಲಾಪ ನಡೆಸಿರುವ ಬಗ್ಗೆ ಸ್ವತಃ ಆನಂದ್ ಸಾಮಾಜಿಕ ಮಾಧ್ಯಮ 'ಎಕ್ಸ್'ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
Held a court session in my capacity as an addl district magistrate under the erstwhile 107 Crpc ( now 126 BNSS, the new criminal procedure code ) .The two factions led by MLA Majid Hussain of MIM and Feroze Khan of the Congress have been quarelling on a regular basis in the… pic.twitter.com/mttv510vnk
— CV Anand IPS (@CVAnandIPS) October 25, 2024
ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಶಾಸಕ ಮಜೀದ್ ಹುಸೇನ್ ಮತ್ತು ಫಿರೋಜ್ ಖಾನ್ ತಮ್ಮ ಬೆಂಬಲಿಗರೊಂದಿಗೆ ಪೊಲೀಸ್ ಆಯುಕ್ತರ ಮುಂದೆ ಹಾಜರಾಗಿದ್ದರು.
ನಾಂಪಲ್ಲಿ ಕ್ಷೇತ್ರದಲ್ಲಿ ಕಳೆದ ವರ್ಷ ಡಿಸೆಂಬರ್ನಲ್ಲಿ ವಿಧಾನಸಭಾ ಚುನಾವಣೆ ನಡೆದ ನಂತರ ಎರಡೂ ಬಣಗಳು ನಿರಂತರವಾಗಿ ಕಾದಾಡುತ್ತಿದ್ದು, ಅಲ್ಲಿ ಸುವ್ಯವಸ್ಥೆಯನ್ನು ಕಾಪಾಡುವುದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ ಎಂದು ಆನಂದ್ ವಿಚಾರಣೆಯ ವೇಳೆ ಉಲ್ಲೇಖಿಸಿದರು. ಇತ್ತೀಚೆಗೆ, ರಸ್ತೆ ನಿರ್ಮಾಣದ ವಿಷಯದಲ್ಲಿ ಎರಡೂ ಬಣಗಳು ಬೀದಿಗಳಿದು ಹೋರಾಡಿದ್ದವು. ಈ ಜಗಳ ಬಿಡಿಸಲು ಪೊಲೀಸರು ಹೆಣಗಾಡಬೇಕಾಯಿತು.
"ಈ ಬಣಗಳನ್ನು ನಿಯಂತ್ರಣದಲ್ಲಿಡಲು ಮತ್ತು ಹೈದರಾಬಾದ್ ಪೊಲೀಸ್ ಕಮಿಶನರ್ ಮುಂದೆ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು 126 ಬಿಎನ್ಎಸ್ಎಸ್ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಯಿತು, ವಾರಂಟ್ಗಳನ್ನು ಹೊರಡಿಸಲಾಯಿತು ಮತ್ತು ಅವರನ್ನು ನನ್ನ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಎರಡೂ ಗುಂಪುಗಳಿಗೆ ಅವರ ಇತ್ತೀಚಿನ ಗಲಾಟೆಯ ವೀಡಿಯೊಗಳನ್ನು ತೋರಿಸಲಾಯಿತು. ನಮ್ಮ ಪ್ರಜಾಪ್ರಭುತ್ವದಲ್ಲಿ ಪರಸ್ಪರ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶವಿದೆ ಮತ್ತು ಆಡಳಿತ ಮತ್ತು ವಿರೋಧ ಕಡ್ಡಾಯ ಅಂಶವಾಗಿದೆ ಎಂದು ಅವರಿಗೆ ತಿಳಿಸಲಾಯಿತು. ಅವರು ತಮ್ಮ ಸಮಸ್ಯೆಗಳನ್ನು ಮತ್ತು ಇನ್ನೊಬ್ಬರು ತಮ್ಮ ಕಾರ್ಯಕ್ರಮಗಳಿಗೆ ಹೇಗೆ ಅಡ್ಡಿಪಡಿಸುತ್ತಿದ್ದಾರೆ ಎಂಬುದನ್ನು ಹೇಳಿಕೊಂಡರು" ಎಂದು ಪೊಲೀಸ್ ಆಯುಕ್ತರು 'ಎಕ್ಸ್'ನಲ್ಲಿ ಬರೆದಿದ್ದಾರೆ.
ಭವಿಷ್ಯದಲ್ಲಿ ಅನುಸರಿಸಬೇಕಾದ ಪ್ರೋಟೋಕಾಲ್ಗಳು, ಎರಡೂ ಕಡೆಗಳ ನಡುವಿನ ಘರ್ಷಣೆಯನ್ನು ತಪ್ಪಿಸಲು ಅಗತ್ಯವಿರುವ ಕ್ರಮಗಳು ಮತ್ತು ಅವರ ಚಟುವಟಿಕೆಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುವ ಬಗ್ಗೆ ಎರಡೂ ಬಣಗಳು ಸಹಮತಿಗೆ ಬಂದಿವೆ ಎಂದು ಅವರು ಹೇಳಿದರು. "ಗಲಾಟೆಗೆ ಕಾರಣವಾಗುವ ರೀತಿಯಲ್ಲಿ ಮಾತನಾಡದಂತೆ ಅವರಿಗೆ ಸಲಹೆ ನೀಡಲಾಯಿತು ಮತ್ತು ಹೆಚ್ಚಿನ ವಿಚಾರಣೆಗಾಗಿ ಪ್ರಕರಣವನ್ನು ಎರಡು ತಿಂಗಳ ನಂತರ ಮುಂದೂಡಲಾಯಿತು" ಎಂದು ಆಯುಕ್ತರು ಹೇಳಿದರು.
ಅಕ್ಟೋಬರ್ 7 ರಂದು ಹುಮಾಯೂನ್ ನಗರದ ಫಿರೋಜ್ ಗಾಂಧಿ ನಗರದಲ್ಲಿ ನಡೆಯುತ್ತಿರುವ ರಸ್ತೆ ದುರಸ್ತಿ ಕಾಮಗಾರಿಗಳ ಪರಿಶೀಲನೆಯ ಸಂದರ್ಭದಲ್ಲಿ ಈ ಬಣಗಳ ನಾಯಕರು ಮತ್ತು ಅವರ ಬೆಂಬಲಿಗರು ಘರ್ಷಣೆ ನಡೆಸಿದ್ದರು. ಎರಡೂ ಗುಂಪುಗಳು ಪರಸ್ಪರ ಹೊಡೆದಾಡಿಕೊಂ ಡು, ಕಲ್ಲು ತೂರಾಟ ಕೂಡ ನಡೆಸಿದ್ದವು. ಇದರ ಪರಿಣಾಮವಾಗಿ ಎರಡೂ ಗುಂಪುಗಳ ಕೆಲವರಿಗೆ ಗಾಯಗಳಾಗಿದ್ದವು. ಈ ಘಟನೆಯಿಂದ ಸಾರ್ವಜನಿಕರಲ್ಲಿ ಆತಂಕ ಉಂಟಾಗಿತ್ತು.
ಇದನ್ನೂ ಓದಿ: 80 ದಾಟಿದ ಕೇಂದ್ರದ ಪೆನ್ಷನ್ದಾರರಿಗೆ ಹೆಚ್ಚುವರಿ ಅನುಕಂಪದ ಪಿಂಚಣಿ ಜಾರಿ