ನವದೆಹಲಿ: ಉದ್ಯೋಗದ ಹೆಸರಲ್ಲಿ ರಷ್ಯಾಗೆ ತೆರಳಿದ್ದ ಭಾರತದ ಯುವಕನೊಬ್ಬ ಉಕ್ರೇನ್‌ನೊಂದಿಗಿನ ಯುದ್ಧದಲ್ಲಿ ಮೃತಪಟ್ಟಿದ್ದಾನೆ. ರಷ್ಯಾದ ಮುಂಚೂಣಿ ಸೇನೆಯಲ್ಲಿ ಈ ಯುವಕನನ್ನು ನಿಯೋಜಿಸಲಾಗಿತ್ತು ಎಂದು ರಷ್ಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ಬುಧವಾರ ಖಚಿತಪಡಿಸಿದೆ.
ಹೈದರಾಬಾದ್ ನಿವಾಸಿ ಮೊಹಮ್ಮದ್ ಅಸ್ಫಾನ್ ಎಂಬಾತನ ಮೃತನು ಗುರುತಿಸಲಾಗಿದೆ. ರಷ್ಯಾದ ಸರ್ಕಾರಿ ಕಚೇರಿಗಳಲ್ಲಿ ಸಹಾಯಕ ಹುದ್ದೆ ಕೊಡಿಸುವುದಾಗಿ ಈತನಿಗೆ ನಂಬಿಸಲಾಗಿತ್ತು. ಆದರೆ, ಕೊನೆಗೆ ಉಕ್ರೇನ್ ಜೊತೆಗೆ ನಡೆಯುತ್ತಿರುವ ಯುದ್ಧಕ್ಕೆ ತಳ್ಳಲಾಗಿತ್ತು ಎಂದು ವರದಿಯಾಗಿದೆ.
ಭಾರತೀಯ ಪ್ರಜೆ ಮೊಹಮ್ಮದ್ ಅಸ್ಫಾನ್ನ ದುರಂತ ಸಾವಿನ ಬಗ್ಗೆ ನಾವು ತಿಳಿದುಕೊಂಡಿದ್ದೇವೆ. ನಾವು ಕುಟುಂಬ ಮತ್ತು ರಷ್ಯಾದ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇವೆ. ಅವರ ಪಾರ್ಥಿವ ಶರೀರವನ್ನು ಭಾರತಕ್ಕೆ ರವಾನಿಸಲು ಪ್ರಯತ್ನಗಳನ್ನು ನಡೆದಿವೆ ಎಂದು ರಷ್ಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದೆ.
ಈ ಹಿಂದೆ ಕೆಲವು ಭಾರತೀಯ ಪ್ರಜೆಗಳು ರಷ್ಯಾದ ಸೇನೆದೊಂದಿಗೆ ಬೆಂಬಲ ಉದ್ಯೋಗಗಳಿಗೆ ಸಹಿ ಹಾಕಿದ್ದಾರೆ ಎಂಬ ಮಾಹಿತಿ ಇದೆ. ಇವರನ್ನು ಸೇನೆಯಿಂದ ಬಿಡುಗಡೆ ಶೀಘ್ರವೇ ಮಾಡುವಂತೆ ರಷ್ಯಾದ ಅಧಿಕಾರಿಗಳಿಗೆ ಕೋರಲಾಗಿದೆ ಎಂದು ವಿದೇಶಾಂಗ ಸಚಿವಾಲಯದ ಅಧಿಕೃತ ವಕ್ತಾರ ರಣಧೀರ್ ಜೈಶ್ವಾಲ್ ಹೇಳಿದ್ದರು. ಅಲ್ಲದೇ, ನಾವು ಎಲ್ಲ ಭಾರತೀಯ ಪ್ರಜೆಗಳಿಗೆ ಸರಿಯಾದ ಎಚ್ಚರಿಕೆಯನ್ನು ವಹಿಸಲು ಮತ್ತು ಈ ಸಂಘರ್ಷದಿಂದ ದೂರವಿರಲು ನಾವು ಒತ್ತಾಯಿಸುತ್ತೇವೆ ಎಂದೂ ಅವರು ತಿಳಿಸಿದ್ದರು.
ಇದನ್ನೂ ಓದಿ: ರಷ್ಯಾ ಸೇನೆಯಲ್ಲಿ ಭಾರತೀಯರು: ಖರ್ಗೆ ಮನವಿಗೆ ಸ್ಪಂದಿಸಿದ ಕೇಂದ್ರ ಸಚಿವ ಜೈಶಂಕರ್
ಹೈದರಾಬಾದ್ನ ಮತ್ತೋರ್ವ ಮೊಹಮ್ಮದ್ ಸೂಫಿಯಾನ್ ಎಂಬಾತ ಸಹ ರಷ್ಯಾದ ಸೇನೆಯಲ್ಲಿ ಸಿಲುಕಿರುವ ಮಾಹಿತಿ ಲಭ್ಯವಾಗಿದೆ. ರಷ್ಯಾದಲ್ಲಿ ಸಿಲುಕಿರುವ ಈತನನ್ನು ಸುರಕ್ಷಿತವಾಗಿ ಸ್ಥಳಾಂತರಿಸಬೇಕು. ಉದ್ಯೋಗದ ಹೆಸರಲ್ಲಿ ಈ ಯುವಕರನ್ನು ವಂಚಿಸಿದ ಏಜೆಂಟ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸುಫಿಯಾನ್ ಕುಟುಂಬ ಕೇಂದ್ರ ಸರ್ಕಾರ ಮತ್ತು ವಿದೇಶಾಂಗ ಸಚಿವಾಲಯಕ್ಕೆ ಮನವಿ ಮಾಡಿದೆ.
ಎಐಎಂಐಎಂ ಸಂಸದ ಅಸಾದುದ್ದೀನ್ ಓವೈಸಿ ಪ್ರಕಾರ, ರಷ್ಯಾದಲ್ಲಿ 12 ಯುವಕರನ್ನು ಸಿಲುಕಿದ್ದಾರೆ. ಇದೇ ವಿಷಯವಾಗಿ ಕೇಂದ್ರ ಸರ್ಕಾರದ ಗಮನ ಸೆಳೆದಿರುವ ಅವರು, ನರೇಂದ್ರ ಮೋದಿ ಸರ್ಕಾರವು ರಷ್ಯಾ ಸರ್ಕಾರದ ಜೊತೆ ಮಾತುಕತೆ ನಡೆಸಿ ರಷ್ಯಾ - ಉಕ್ರೇನ್ ಯುದ್ಧದಲ್ಲಿ ಸಿಲುಕಿರುವ 12 ಯುವಕರನ್ನು ಮರಳಿ ಕರೆತರಬೇಕು ಎಂದು 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
ಸುಫಿಯಾನ್ ಕುಟುಂಬ ಹೇಳಿದ್ದೇನು?: ಈ ಬಗ್ಗೆ ಸುಫಿಯಾನ್ ಸಹೋದರ ಇಮ್ರಾನ್ ಮಾಧ್ಯಮಗಳೊಂದಿಗೆ ಮಾತನಾಡಿ, ನನ್ನ ಸಹೋದರನನ್ನು ದುಬೈ, ದೆಹಲಿ ಮತ್ತು ಮುಂಬೈನಲ್ಲಿ ಕಚೇರಿಗಳನ್ನು ಹೊಂದಿರುವ ಬಾಬಾ ಬ್ಲಾಕ್ಸ್ ಕಂಪನಿ ಕರೆದೊಯ್ದಿದೆ. ಮೊದಲ ಬ್ಯಾಚ್ನಲ್ಲಿ 2023ರ ನವೆಂಬರ್ 12ರಂದು ಒಟ್ಟು 21 ಯುವಕರನ್ನು ಕಳುಹಿಸಲಾಗಿದೆ. ಪ್ರತಿಯೊಬ್ಬರಿಂದ 3 ಲಕ್ಷ ರೂ. ಪಡೆಯಲಾಗಿದ್ದು, ನವೆಂಬರ್ 13ರಂದು ರಷ್ಯಾದಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಏಜೆಂಟರು ಯುವಕರಿಗೆ ಸೇನಾ ಸಹಾಯಕರಾಗಿ ಕೆಲಸ ಕೊಡಿಸುವುದಾಗಿ ಹೇಳಿದ್ದರು. ಆದರೆ, ಅಂತಿಮವಾಗಿ ಅವರನ್ನು ಸೇನೆಗೆ ಸೇರಿಸಿ, ಉಕ್ರೇನ್ ಗಡಿಗೆ ನಿಯೋಜಿಸಲಾಗಿದೆ. ಈ ಬಗ್ಗೆ ನಾವು ರಾಯಭಾರ ಕಚೇರಿಯಲ್ಲಿ ಮನವಿ ಸಲ್ಲಿಸಿದ್ದೇವೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೂ ಹಲವು ಪತ್ರಗಳನ್ನು ಬರೆದಿದ್ದೇವೆ. ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಆದರೆ, ನಮಗೆ 'MADAD' ಪೋರ್ಟಲ್‌ನಿಂದ ಪ್ರತಿಕ್ರಿಯೆ ಬಂದಿದೆ. ದಾಖಲೆಗಳನ್ನು ರಷ್ಯಾದ ಅಧಿಕಾರಿಗಳಿಗೆ ಕಳುಹಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಮುಂದಿನ ಕ್ರಮವನ್ನು ನಿರೀಕ್ಷಿಸಲಾಗುತ್ತಿದೆ ಎಂದು ಇಮ್ರಾನ್ ವಿವರಿಸಿದ್ದಾರೆ.
ಇದನ್ನೂ ಓದಿ: ರಷ್ಯಾದಲ್ಲಿ ಸಿಲುಕಿರುವ 20 ಭಾರತೀಯರ ಬಿಡುಗಡೆಗೆ ತೀವ್ರ ಪ್ರಯತ್ನ: ವಿದೇಶಾಂಗ ಸಚಿವಾಲಯ