ಹೈದರಾಬಾದ್: ತೆಲಂಗಾಣದ ಮಣ್ಣಿನ ಮಗ, ಭಾರತದ ಮಾಜಿ ಪ್ರಧಾನಿ ಪಿವಿ ನರಸಿಂಹರಾವ್ ಅವರಿಗೆ ದೇಶದ ಅತ್ಯುನ್ನತ ಪ್ರಶಸ್ತಿ ಭಾರತ ರತ್ನ ಒಲಿದು ಬಂದಿದೆ. ಪ್ರಧಾನಿ ಟ್ವೀಟ್ ಮೂಲಕ ಈ ವಿಷಯ ಘೋಷಿಸುತ್ತಿದ್ದಂತೆ ತೆಲಂಗಾಣದಲ್ಲಿ ಸಂಭ್ರಮ ಮನೆ ಮಾಡಿತ್ತು. ಮಾಜಿ ಪ್ರಧಾನಿ ಪಿ.ವಿ.ನರಸಿಂಹರಾವ್ ಅವರಿಗೆ ಭಾರತ ರತ್ನ ಘೋಷಿಸಿದ್ದಕ್ಕೆ ಮುಖ್ಯಮಂತ್ರಿ ರೇವಂತ್ ರೆಡ್ಡಿ ಸಂತಸ ವ್ಯಕ್ತಪಡಿಸಿದ್ದಾರೆ. ಸದನದಲ್ಲಿ ಈ ವಿಚಾರ ಘೋಷಣೆ ಮಾಡಿ ಹರ್ಷ ವ್ಯಕ್ತಪಡಿಸಿದ್ದಾರೆ. ಪಿವಿಎನ್ಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ಲಭಿಸಿರುವುದು ನಾಡಿನ ಸಮಸ್ತ ಜನತೆಗೆ ಹೆಮ್ಮೆಯ ವಿಚಾರ ಎಂದು ಗುಣಗಾನ ಮಾಡಿದರು.
ಬಹುಮುಖ ಪ್ರತಿಭೆ ಪಿ.ವಿ.ನರಸಿಂಹರಾವ್ ಅವರಿಗೆ ಭಾರತ ರತ್ನ ಪ್ರಶಸ್ತಿ ಸಂದಿರುವುದು ತೆಲಂಗಾಣದ ಸಮಸ್ತ ಜನರಿಗೆ ಹೆಮ್ಮೆಯ ಸಂಗತಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಕೇಂದ್ರ ಸಚಿವ ಕಿಶನ್ ರೆಡ್ಡಿ ಬಣ್ಣಿಸಿದ್ದಾರೆ. ನರಸಿಂಹರಾವ್ ಅವರ ದೂರದೃಷ್ಟಿ ಹಾಗೂ ಅವರ ಜಾಣ್ಮೆ ದೇಶವನ್ನು ಆಧುನಿಕತೆಯತ್ತ ತೆಗೆದುಕೊಂಡು ಹೋಯಿತು ಎಂದು ಅವರು ಹೇಳಿದರು. ಚಾಣಕ್ಯನಂತೆ ರಾಜಕೀಯ ನಡೆಸಿದ ಪಿವಿಎನ್, ಬಹುಮುಖ ಪ್ರತಿಭೆಯಾಗಿದ್ದರು. ಅವರ ಜೀವನ ನಮ್ಮೆಲ್ಲರ ಪ್ರತಿ ಹೆಜ್ಜೆಯಲ್ಲೂ ನಮಗೆಲ್ಲರಿಗೂ ಆದರ್ಶಪ್ರಾಯವಾಗಿದೆ ಎಂದು ಕಿಶನ್ ರೆಡ್ಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮಾಜಿ ಪ್ರಧಾನಿ ಪಿವಿ ನರಸಿಂಹರಾವ್ ಅವರಿಗೆ ದೇಶದ ಅತ್ಯುನ್ನತ ಪ್ರಶಸ್ತಿ ಭಾರತ ರತ್ನ ಲಭಿಸಿರುವುದಕ್ಕೆ ಬಿಆರ್‌ಎಸ್ ಮುಖ್ಯಸ್ಥ ಕೆ ಚಂದ್ರಶೇಖರ್ ರಾವ್ ಸಂತಸ ವ್ಯಕ್ತಪಡಿಸಿದ್ದಾರೆ. ಈ ಪ್ರಶಸ್ತಿ ತೆಲಂಗಾಣ ಜನತೆಗೆ ಸಂದ ಗೌರವವಾಗಿದೆ ಎಂದು ಕೆಸಿಆರ್ ಹೇಳಿದ್ದಾರೆ. ಪಿವಿ ನರಸಿಂಹ ರಾವ್ ಅವರಿಗೆ ಭಾರತ ರತ್ನ ಘೋಷಿಸಬೇಕು ಎಂಬ ಬಿಆರ್‌ಎಸ್ ಪಕ್ಷದ ಬೇಡಿಕೆಯನ್ನು ಗೌರವಿಸಿ ಅವರಿಗೆ ಭಾರತ ರತ್ನ ನೀಡಿದ ಕೇಂದ್ರ ಸರ್ಕಾರಕ್ಕೆ ಕೆಸಿಆರ್ ಧನ್ಯವಾದ ಅರ್ಪಿಸಿದ್ದಾರೆ.
ಕೇಂದ್ರ ಸರ್ಕಾರವು ಮಾಜಿ ಪ್ರಧಾನಿ ಶ್ರೀ ಪಿವಿ ನರಸಿಂಹ ರಾವ್ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಿರುವುದು ಸಂತಸ ತಂದಿದೆ. ಕೆಸಿಆರ್ ಅವರ ನೇತೃತ್ವದಲ್ಲಿ ತೆಲಂಗಾಣ ಸರ್ಕಾರವು ನಡೆಸಿದ ಪಿವಿಎನ್ ಅವರ ಶತಮಾನೋತ್ಸವ ಆಚರಣೆಯ ದಿನದಿಂದಲೂ ನಾವು ಈ ಗೌರವಕ್ಕಾಗಿ ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತಿದ್ದೇವೆ ಎಂದು ಕೆಟಿಆರ್ ನೆನಪು ಮಾಡಿಕೊಟ್ಟರು.
ಭಾರತ ರತ್ನದ ಮೌಲ್ಯ ಹೆಚ್ಚಿದೆ; ನರಸಿಂಹರಾವ್ ಪುತ್ರಿ: ಪಿವಿಎನ್ಗೆ ಕೇಂದ್ರ ಸರ್ಕಾರ ಭಾರತ ರತ್ನ ನೀಡಿ ಗೌರವಿಸಿರುವುದನ್ನ ನರಸಿಂಹರಾವ್ ಪುತ್ರಿ ಸುರಭಿ ವಾಣಿದೇವಿ ಸಂತಸ ವ್ಯಕ್ತಪಡಿಸಿದ್ದಾರೆ. ಪಕ್ಷಾತೀತವಾಗಿ ಪಿವಿ ಸೇವೆಗೆ ಮನ್ನಣೆ ಸಿಕ್ಕಿದೆ ಎಂದು ಹೇಳಿದ್ದಾರೆ. ಹೈದರಾಬಾದ್‌ನ ಅಸೆಂಬ್ಲಿ ಮೀಡಿಯಾ ಪಾಯಿಂಟ್‌ನಲ್ಲಿ ಅವರು ಈ ಸಂತಸ ವ್ಯಕ್ತಪಡಿಸಿದ್ದಾರೆ. ನರಸಿಂಹರಾವ್ ಅವರಿಗೆ ಭಾರತ ರತ್ನ ಬಂದಿದ್ದರಿಂದ ಆ ಪ್ರಶಸ್ತಿಯ ಮೌಲ್ಯ ಮತ್ತಷ್ಟು ಹೆಚ್ಚಾಗಿದೆ ಎಂದು ವಾಣಿದೇವಿ ಬಣ್ಣಿಸಿದ್ದಾರೆ.
ಇದನ್ನು ಓದಿ: ಈ ವರ್ಷ ಐವರಿಗೆ ಭಾರತ ರತ್ನ: ಹಾಗಾದರೆ ಪ್ರಶಸ್ತಿಯ ಅರ್ಹತೆ, ವಿಶೇಷತೆ ಏನು?