ವಿಜಯವಾಡ, ಆಂಧ್ರಪ್ರದೇಶ: ಕೃಷ್ಣ ಜಿಲ್ಲೆಯ ಎಸ್ಆರ್ ಗುಡ್ಲಾವಲ್ಲೆರು ಇಂಜಿನಿಯರಿಂಗ್ ಕಾಲೇಜಿನ ಯುವತಿಯರ ಹಾಸ್ಟೆಲ್ನಲ್ಲಿ ಹಿಡನ್ ಕ್ಯಾಮೆರ್ ಪತ್ತೆಯಾಗಿದ್ದು, ಈ ಸಂಬಂಧಿತ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ ಹಿನ್ನೆಲೆಯಲ್ಲಿ ಕಾಲೇಜಿನಲ್ಲಿ ಗುರುವಾರ (ಆಗಸ್ಟ್ 29) ಭಾರಿ ಪ್ರತಿಭಟನೆ ವ್ಯಕ್ತವಾಗಿದೆ. ಕೋಲ್ಕತ್ತಾದ ಆರ್ಕೆ ಕರ್ ಆಸ್ಪತ್ರೆ ಪ್ರತಿಭಟನೆ ಮಾದರಿಯಲ್ಲಿ ಇದೀಗ ವಿದ್ಯಾರ್ಥಿನಿಯರು ನಮಗೆ ನ್ಯಾಯ ಬೇಕು ಎಂಬ ಘೋಷಣೆಯೊಂದಿಗೆ ಆಕ್ರೋಶ ವ್ಯಕ್ತಪಡಿಸಿದ್ದು, ಆರೋಪಿಗಳ ವಿರುದ್ಧ ತಕ್ಷಣಕ್ಕೆ ಕ್ರಮ ಕ್ಕೆ ಮುಂದಾಗುವಂತೆ ಒತ್ತಾಯಿಸಿದ್ದಾರೆ.
ಕ್ಯಾಮರಾ ಇಟ್ಟ ಹಾಗೂ ವಿಡಿಯೋ ಹರಿದಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು, ಅದೇ ಕಾಲೇಜಿನ ಅಂತಿಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿ ವಿಜಯ್ ಎಂಬಾಂತನನ್ನು ಬಂಧಿಸಿದ್ದಾರೆ. ಬಂಧಿತನ ಲ್ಯಾಪ್ಟಾಪ್ನಲ್ಲಿ 300ಕ್ಕೂ ಹೆಚ್ಚು ಅಶ್ಲೀಲ ವಿಡಿಯೋಗಳು ಪತ್ತೆಯಾಗಿವೆ ಎಂದೂ ಹೇಳಲಾಗುತ್ತಿದೆ. ಅಷ್ಟೇ ಅಲ್ಲ ಈತ ಅನೇಕ ವಿದ್ಯಾರ್ಥಿಗಳಿಗೆ ಅಕ್ರಮವಾಗಿ ಈ ವಿಡಿಯೋಗಳನ್ನು ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಗುರುವಾರ ಸಂಜೆ ಮಹಿಳಾ ವಿದ್ಯಾರ್ಥಿನಿಯ ಗುಂಪಿಗೆ ಸ್ನಾನದ ಗೃಹದಲ್ಲಿ ರಹಸ್ಯ ಕ್ಯಾಮೆರಾವೊಂದು ಪತ್ತೆಯಾದ ಬಳಿಕ ಈ ಪ್ರಕರಣ ಹೊರ ಬಂದಿದೆ. ಘಟನೆ ವಿದ್ಯಾರ್ಥಿನಿಯರಲ್ಲಿ ಆಘಾತ ಮೂಡಿಸಿದ್ದು, ಕ್ಯಾಂಪಸ್ನಲ್ಲಿ ಮಹಿಳಾ ಸುರಕ್ಷತೆ ಮತ್ತು ಭದ್ರತೆ ಕುರಿತು ಪ್ರಶ್ನೆ ಮೂಡಿಸಿದೆ. ವಿದ್ಯಾರ್ಥಿಗಳ ಗುಂಪು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದೆ.
ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ಕ್ಯಾಂಪಸ್ನಲ್ಲಿ 7 ಗಂಟೆ ಸುಮಾರಿಗೆ ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ಆರಂಭಿಸಿದವು. ಶುಕ್ರವಾರ ಬೆಳಗ್ಗೆವರೆಗೆ ಮುಂದುವರೆದ ಪ್ರತಿಭಟನೆಯಲ್ಲಿ ನಮಗೆ ನ್ಯಾಯ ಬೇಕು ಎಂಬ ಘೋಷಣೆ ಅವಿರತವಾಗಿ ಮುಂದುವರೆಯಿತು.
ಪ್ರಕರಣದ ತನಿಖೆ ಸಾಗಿದ್ದು, ವಿದ್ಯಾರ್ಥಿಗಳು ಅಥವಾ ಹೊರಗಿನವರು ಯಾರಾದರೂ ಈ ಕ್ಯಾಮೆರಾವನ್ನು ರಹಸ್ಯವಾಗಿ ಇರಿಸಿ, ವಿಡಿಯೋವನ್ನು ಹಂಚುತ್ತಿರುವವರೇ ಎಂಬ ಕುರಿತು ಕೂಡ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಬಳಿಕ ಅನೇಕ ಮಹಿಳಾ ವಿದ್ಯಾರ್ಥಿಗಳು ಶೌಚ ಬಳಕೆಗೆ ಹಿಂದೇಟು ಹಾಕಿದ್ದು, ಈ ಪ್ರದೇಶದತ್ತ ಸುಳಿಯಲು ನಿರಾಕರಿಸಿದ್ದಾರೆ.
ಮಹಿಳೆಯರ ಶೌಚಗೃಹದಲ್ಲಿ ರಹಸ್ಯವಾಗಿ ಕ್ಯಾಮೆರಾ ಇರಿಸುವ ಅನೇಕ ಪ್ರಕರಣಗಳು ದೇಶದಲ್ಲಿ ಹೆಚ್ಚುತ್ತಿದ್ದು, ಇದು ನಿಜಕ್ಕೂ ಹೀನಕೃತ್ಯವಾಗಿದೆ. ಆಗಸ್ಟ್ 16ರಂದು ಕೂಡ ಉತ್ತರಾಖಂಡ್ನ ಬಲ್ಲುಪುರ್ ಚೌಕ್ನ ಖ್ಯಾತ ಸ್ವೀಟ್ ಅಂಡ್ ರೆಸ್ಟೋರೆಂಟ್ ಮಳಿಗೆಯ ಮಹಿಳಾ ಶೌಚಗೃಹದಲ್ಲಿ ರಹಸ್ಯ ಕ್ಯಾಮೆರಾ ಇರಿಸಿದ್ದ ಪ್ರಕರಣ ಬಯಲಾಗಿತ್ತು.
ಇದನ್ನೂ ಓದಿ: ಮಗಳ ಮೇಲೆ ತಂದೆಯಿಂದಲೇ ಅತ್ಯಾಚಾರ: ಪೋಕ್ಸೋ ಪ್ರಕರಣ ದಾಖಲು