ಶಿಮ್ಲಾ(ಹಿಮಾಚಲ ಪ್ರದೇಶ): ಕಳೆದ ವರ್ಷ ತೀವ್ರ ಮಳೆ ಕೊರತೆ ಕಂಡಿದ್ದ ಹಿಮಚ್ಚಾದಿತ ರಾಜ್ಯವಾದ ಹಿಮಾಚಲ ಪ್ರದೇಶದಲ್ಲಿ ಇದೀಗ ಭಾರೀ ಹಿಮಪಾತವಾಗುತ್ತಿದೆ. ಹಲವೆಡೆ ಮಳೆಯೂ ಸುರಿಯುತ್ತಿದೆ. ಇದು ರೈತರಿಗೆ ಸಂತಸ ತಂದರೆ, ಸಹಜ ಜೀವನಕ್ಕೆ ಅಡ್ಡಿಯುಂಟಾಗಿದೆ. ರಸ್ತೆಗಳ ಮೇಲೆ 15 ಸೆಂಟಿ ಮೀಟರ್ನಷ್ಟು ಹಿಮ ಶೇಖರಣೆಯಾಗಿದೆ. 4 ರಾಷ್ಟ್ರೀಯ ಹೆದ್ದಾರಿಗಳು ಸೇರಿದಂತೆ 134 ರಸ್ತೆಗಳು ಬಂದ್ ಆಗಿವೆ.
ಜನವರಿ 30ರಿಂದ ರಾಜ್ಯದ ಹಲವೆಡೆ ಹಿಮಪಾತವಾಗುತ್ತಿದೆ. ಇನ್ನೂ ಎರಡು ದಿನ ಇದೇ ಪರಿಸ್ಥಿತಿ ಮುಂದುವರಿಯಲಿದೆ. ಶಿಮ್ಲಾ, ಛಂಬಾ, ಕಿನ್ನೌರ್ ಲಾಹೌಲ್, ಸ್ಪಿತಿಯಲ್ಲಿ ಭಾರೀ ಹಿಮ ಮತ್ತು ಮಳೆಯಾಗಲಿದ್ದು, ಸ್ಥಳೀಯ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ನೀಡಿದೆ. ಇದು ಈ ವರ್ಷದ ಮೊದಲ ಹಿಮಪಾತವಾಗಿದೆ. ಲಾಹೌಲ್ ಮತ್ತು ಸ್ಪಿತಿ ಜಿಲ್ಲೆಯಲ್ಲೊಂದರಲ್ಲೇ ಗರಿಷ್ಠ 120 ರಸ್ತೆಗಳಲ್ಲಿ ಸಂಚಾರ ಬಂದ್ ಆಗಿವೆ.
ಕಂಡ ಕಂಡಲ್ಲಿ ಹಿಮದ ರಾಶಿ: ಹಿಮಪಾತದಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಶಿಮ್ಲಾ ಜಿಲ್ಲೆಯ ಎತ್ತರದ ಪ್ರದೇಶಗಳಲ್ಲಿ ಸುಮಾರು 15 ಸೆಂ.ಮೀನಷ್ಟು ಹಿಮ ರಾಶಿ ಕಟ್ಟಿಕೊಂಡಿದೆ. ಲಾಹೌಲ್ ಮತ್ತು ಸ್ಪಿತಿಯಲ್ಲಿ 26 ಸೆಂ.ಮೀ., ಕೋಠಿ 15 ಸೆಂ.ಮೀ., ಸುಮ್ಧೋ 14.8 ಸೆಂ.ಮೀ., ಕುಮುಮ್ಸೇರಿ 14.2 ಸೆಂ.ಮೀ. ಖದ್ರಾಲಾದಲ್ಲಿ 14 ಸೆಂ.ಮೀ., ಭರ್ಮೌರ್ 8.6 ಸೆಂ.ಮೀ., ಕೀಲಾಂಗ್ 8 ಸೆಂ.ಮೀ., ಮನಾಲಿ, ಸಾಂಗ್ಲಾ ಮತ್ತು ಶಿಲಾರೂದಲ್ಲಿ ತಲಾ 5 ಸೆಂ.ಮೀ, ಮತ್ತು ಕೊಕ್ಸರ್ 2.5 ಸೆಂ.ಮೀನಷ್ಟು ಹಿಮ ಬಿದ್ದಿದೆ.
ಇದರ ನಡುವೆ ಛಂಬಾದ ತಿಸ್ಸಾದಲ್ಲಿ 31 ಮಿ.ಮೀ ಮಳೆಯಾಗಿದ್ದು, ಸಲೋನಿಯಲ್ಲಿ 25.2 ಮಿ.ಮೀ, ಟಿಂಡರ್ 18 ಮಿ.ಮೀ ಮತ್ತು ಮನಾಲಿಯಲ್ಲಿ 12 ಮಿ.ಮೀ ವರುಣ ಧಾರೆಯಾಗಿದೆ. ಶಿಮ್ಲಾದಲ್ಲಿ ಬುಧವಾರ ಸಂಜೆ ಗುಡುಗು, ಬಿರುಗಾಳಿ ಸಹಿತ ಮಳೆ ಸುರಿದಿದೆ. ಹಿಮಪಾತ ಮತ್ತು ಮಳೆ ಮುನ್ಸೂಚನೆಯು ರೈತರು, ಹಣ್ಣು ಮತ್ತು ತರಕಾರಿ ಬೆಳೆಗಾರರಲ್ಲಿ ಹರ್ಷ ತಂದಿದೆ. ಕಳೆದ ಕಂಡು ಕೇಳರಿಯದ ಅನಾವೃಷ್ಟಿಯಿಂದಾಗಿ ಸಂಕಷ್ಟ ಅನುಭವಿಸಿದ್ದರು.
ತಾಪಮಾನ ಕುಸಿತ: ದಿನದಿಂದ ದಿನಕ್ಕೆ ತಾಪಮಾನ ಕುಸಿತ ಉಂಟಾಗುತ್ತಿದೆ. ಕುಕುಂಸೇರಿಯಲ್ಲಿ ಬುಧವಾರ ರಾತ್ರಿ -2.8 ಡಿಗ್ರಿ ಸೆಲ್ಸಿಯಸ್ ತಾಪಮಾನದಿಂದಾಗಿ ಅತ್ಯಂತ ಚಳಿ ದಾಖಲಾಗಿದೆ. ನರಕಂದದಲ್ಲಿ -1.3 ಡಿಗ್ರಿ , ಕಲ್ಪಾದಲ್ಲಿ -1.2 ಡಿಗ್ರಿ, ಕುಫ್ರಿಯಲ್ಲಿ 0.1 ಡಿಗ್ರಿ, ಡಾಲ್ಹೌಸಿ 1 ಡಿಗ್ರಿ, ಮನಾಲಿ 1.4 ಡಿಗ್ರಿ ಮತ್ತು ಶಿಮ್ಲಾದಲ್ಲಿ 2.4 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಲಾಹೌಲ್, ಸ್ಪಿತಿ, ಶಿಮ್ಲಾ, ಕಿನ್ನೌರ್, ಛಂಬಾ, ಕಂಗ್ರಾ, ಕುಲು ಮತ್ತು ಮಂಡಿಯಲ್ಲಿ ಮೂರು ಅಥವಾ ನಾಲ್ಕು ಬಾರಿ ಭಾರೀ ಮಳೆ ಅಥವಾ ಹಿಮಪಾತದ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಭಾರತದಲ್ಲಿವೆ 718 ಹಿಮ ಚಿರತೆಗಳು: ಲಡಾಖ್‌ನಲ್ಲಿ ಅತೀ ಹೆಚ್ಚು