ಕಣ್ಣೂರು (ಕೇರಳ): ಕೇರಳದಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಪಾಲಕ್ಕಾಡ್ ಮತ್ತು ಕಣ್ಣೂರು ಜಿಲ್ಲೆಗಳಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಹವಾಮಾನ ವೈಪರೀತ್ಯದಿಂದಾಗಿ ಪಾಲಕ್ಕಾಡ್‌ನಲ್ಲಿ ಮನೆ ಕುಸಿದು ತಾಯಿ ಮತ್ತು ಮಗ ಸಾವನ್ನಪ್ಪಿದ್ದಾರೆ. ಸುಲೋಚನಾ (53) ಮತ್ತು ಅವರ ಮಗ ರಂಜಿತ್ (32) ಅವರು ನಿನ್ನೆ (ಸೋಮವಾರ) ರಾತ್ರಿ ಕೊಡಕುನ್ನುನಲ್ಲಿರುವ ಮನೆ ಮಲಗಿದ್ದರು. ಈ ವೇಳೆ, ಗೋಡೆ ಕುಸಿದು ತಾಯಿ ಮತ್ತು ಮಗ ಸಾವನ್ನಪ್ಪಿದ್ದಾರೆ.
ಹಾಸಿಗೆ ಹಿಡಿದಿದ್ದ ಸುಲೋಚನಾ ಅವರು ತಮ್ಮ ಮಗ ರಂಜಿತ್ ಜೊತೆ ಒಂದೇ ಕೋಣೆಯ ಮನೆಯಲ್ಲಿ ವಾಸವಾಗಿದ್ದರು. ರಾತ್ರಿ ವೇಳೆ ಮನೆಯ ಹಿಂಬದಿಯ ಗೋಡೆ ಕುಸಿದಿದೆ. ಇಬ್ಬರು ನಿದ್ರೆಯಲ್ಲಿದ್ದ ವೇಳೆ ಗೋಡೆ ಕುಸಿದು ಬಿದ್ದಿದೆ. ಮರುದಿನ ಬೆಳಗಿನ ಜಾವದವರೆಗೂ ಅಪಘಾತದ ಬಗ್ಗೆ ಯಾರಿಗೂ ತಿಳಿದಿರಲಿಲ್ಲ. ಕುಸಿದು ಬಿದ್ದ ಮನೆಯನ್ನು ಗಮನಿಸಿದ ಸ್ಥಳೀಯರು ತಾಯಿ ಮತ್ತು ಮಗನನ್ನು ಆಸ್ಪತ್ರೆಗೆ ಕರೆದೊಯ್ದರೂ ರಕ್ಷಿಸಲು ಸಾಧ್ಯವಾಗಲಿಲ್ಲ.
ರಂಜಿತ್ ಖಾಸಗಿ ಬಸ್ನಲ್ಲಿ ಕಂಡಕ್ಟರ್ ಆಗಿದ್ದರು. ಮನೆಯಿಂದ ಯಾರು ಕೂಡ ಹೊರಗೆ ಬಾರದೇ ಇರುವುದನ್ನು ಸ್ಥಳೀಯರು ಗಮನಿಸಿದ್ದಾರೆ. ಮರುದಿನ ಸ್ಥಳೀಯರು, ಆ ಮನೆ ಬಳಿ ಬಂದು ನೋಡಿದಾಗ ಮುಂಚೆಯೇ ಅಪಘಾತ ಸಂಭವಿಸಿದೆ ಎಂಬುದು ತಿಳಿದಿದೆ.
ಮತ್ತೊಂದು ಘಟನೆಯಲ್ಲಿ, ಕಣ್ಣೂರಿನ ಮಟ್ಟನ್ನೂರಿನಲ್ಲಿ ನೀರಿನ ಹೊಂಡಕ್ಕೆ ಮಹಿಳೆಯೊಬ್ಬರು ಬಿದ್ದು ಸಾವನ್ನಪ್ಪಿದ್ದಾರೆ. ಸಿ. ಕುಂಞಮಿನಾ (51) ಸೋಮವಾರ ಸಂಜೆ ಮನೆ ಸಮೀಪದ ಹೊಲಕ್ಕೆ ಹೋಗಿದ್ದರು. ಆಕೆ ವಾಪಸ್ ಬಾರದೇ ಇದ್ದಾಗ ಕುಟುಂಬಸ್ಥರು ಆಕೆಯನ್ನು ಹುಡುಕಾಡಿದಾಗ ಕೃಷಿ ಉದ್ದೇಶಕ್ಕಾಗಿ ತೋಡಿದ ಬಾವಿ ಬಳಿ ಆಕೆ ಪತ್ತೆಯಾಗಿದ್ದಳು. ಕೂಡಲೇ ಅವರನ್ನು ಮಟ್ಟನ್ನೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ದರೂ ರಕ್ಷಿಸಲಾಗಲಿಲ್ಲ.
ಭಾರೀ ಮಳೆಯಿಂದಾಗಿ ಕೊಯಿಕ್ಕೋಡ್‌ನಲ್ಲಿ ಪ್ರವಾಹ ಉಂಟಾಗಿದೆ. ಮಾವೂರ್ ಪ್ರದೇಶದಲ್ಲಿ ತುಂಬಾ ಸಮಸ್ಯೆಯಾಗಿದೆ. ನಿನ್ನೆ ತಡರಾತ್ರಿ ಚಾಲಿಯಾರ್ ಮತ್ತು ಚೆರುಪುಳದ ಕರಾವಳಿ ಪ್ರದೇಶಗಳಿಗೆ ನೀರು ನುಗ್ಗಿದ್ದು, ಗ್ರಾಮೀಣ ರಸ್ತೆಗಳು ಸಂಫುರ್ಣ ಜಲಾವೃತಗೊಂಡಿವೆ.
ಪೆರಿಯಾರ್ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳವಾಗಿರುವುದರಿಂದ ಎರ್ನಾಕುಲಂ ಜಿಲ್ಲೆಯ ಆಲುವಾದಲ್ಲಿರುವ ಶಿವ ದೇವಾಲಯವು ಭಾಗಶಃ ಮುಳುಗಿ ಹೋಗಿದೆ. ಬೆಳಗ್ಗೆ ಯಾವುದೇ ಪೂಜಾ ಕೈಂಕರ್ಯಗಳನ್ನು ಕೈಗೊಳ್ಳಲಾಗಿಲ್ಲ. ದೇವಾಲಯದ ಆವರಣಕ್ಕೆ ಭೇಟಿ ನೀಡದಂತೆ ನಿರ್ಬಂಧಿಸಲಾಗಿದೆ. ಭಾರಿ ಮಳೆಯಿಂದಾಗಿ ಅಣೆಕಟ್ಟುಗಳ ಹೊರ ಹರಿವು ಹೆಚ್ಚಾಗಿದೆ. ಪೆರಿಯಾರ್ ನದಿ ದಡದಲ್ಲಿ ವಾಸಿಸುವವರಿಗೆ ಮುನ್ನೆಚ್ಚರಿಕೆ ನೀಡಲಾಗಿದೆ. ಕೊಚ್ಚಿ ನಗರ ಸೇರಿದಂತೆ ಕರಾವಳಿ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದೆ.
ಇದನ್ನೂ ಓದಿ: ಅಸ್ಸಾಂ ಭೀಕರ ಪ್ರವಾಹ: ಕಾಜಿರಂಗ ರಾಷ್ಟ್ರೀಯ ಉದ್ಯಾನದಲ್ಲಿ 212 ವನ್ಯಜೀವಿಗಳು, 93 ಜನರ ಸಾವು - Assam flood report