ವಾರಾಣಸಿ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಜ್ಞಾನವಾಪಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂಲ ದಾವೆಯ ವಿಚಾರಣೆಯು ತ್ವರಿತ ನ್ಯಾಯಾಲಯದಲ್ಲಿ ಆರಂಭವಾಗಿದೆ. ಪ್ರಾಚೀನ ಆದಿವಿಶ್ವೇಶ್ವರನಿಗೆ ಸಂಬಂಧಿಸಿದ ಈ ಮೂಲ ದಾವೆಯಲ್ಲಿ ಶೈಲೇಂದ್ರ ಪಾಠಕ್ ಮತ್ತು ಜೈನೇಂದ್ರ ಪಾಠಕ್ ಎಂಬುವರನ್ನು ಕಕ್ಷಿದಾರರನ್ನಾಗಿಸುವ ಅರ್ಜಿಯ ವಿಚಾರಣೆ ನಡೆಯಲಿದೆ.
ವಾರಾಣಸಿಯ ಸಿವಿಲ್ ನ್ಯಾಯಾಧೀಶ ಹಿರಿಯ ವಿಭಾಗದ ತ್ವರಿತ ನ್ಯಾಯಾಲಯದಲ್ಲಿ ಅರ್ಜಿ ವಿಚಾರಣೆ ಶುರುವಾಗಿದೆ. ಇತ್ತೀಚೆಗಷ್ಟೇ ಹಿಂದೂ ಪರ ಈ ಇಬ್ಬರು ವಕೀಲರು ಇದೇ ವಿಚಾರವಾಗಿ ನ್ಯಾಯಾಲಯದಲ್ಲಿ ಪರಸ್ಪರ ವಾಗ್ವಾದ ನಡೆಸಿದ್ದರು. ಆದರೆ, ನಂತರ ಉಭಯ ಪಕ್ಷಗಳ ನಡುವೆ ಸಮನ್ವಯ ಏರ್ಪಟ್ಟಿತ್ತು.
ಶುಕ್ರವಾರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ತ್ವರಿತ ನ್ಯಾಯಾಲಯದಲ್ಲಿ ವಿಚಾರಣೆ ಜರುಗಲಿದೆ. ಪ್ರಾಚೀನ ಆದಿ ವಿಶ್ವೇಶ್ವರನಿಗೆ ಸಂಬಂಧಿಸಿದ ಮೂಲ ಮೊಕದ್ದಮೆಯಲ್ಲಿ ಶೈಲೇಂದ್ರ ಪಾಠಕ್ ಮತ್ತು ಜೈನೇಂದ್ರ ಪಾಠಕ್ ಅವರನ್ನು ಕಕ್ಷಿದಾರರನ್ನಾಗಿಸುವ ಅರ್ಜಿಯ ಕುರಿತು ಆರಂಭವಾದ ಈ ವಿಚಾರಣೆಯಲ್ಲಿ ವಕೀಲರಾದ ಸುಧೀರ್ ತ್ರಿಪಾಠಿ ಮತ್ತು ಸುಭಾಷ್ ನಂದನ್ ಚತುರ್ವೇದಿ ತಮ್ಮ ವಾದವನ್ನು ಮಂಡಿಸಿದ್ದಾರೆ.
ವಕೀಲರು ತಮ್ಮ ದಾಖಲೆಗಳನ್ನು ಹಾಜರುಪಡಿಸಿ, ತಮ್ಮನ್ನು ಕಕ್ಷಿದಾರರನ್ನಾಗಿ ಮಾಡುವಂತೆ ಮನವಿ ಮಾಡಲಿದ್ದಾರೆ. ಆದರೆ, ಈ ವೇಳೆ, ಕೋರ್ಟ್ ನೇಮಿಸಿರುವ ವ್ಯಾಜ್ಯದ ಸ್ನೇಹಿತ ವಿಜಯ್ ಶಂಕರ್ ರಸ್ತೋಗಿ ಬೇರೆ ಯಾರನ್ನೂ ಕಕ್ಷಿದಾರರನ್ನಾಗಿ ಮಾಡುವುದಕ್ಕೆ ವೈಯಕ್ತಿಕವಾಗಿ ವಿರೋಧಿಸಿದ್ದಾರೆ. ಈ ಪ್ರಕರಣವು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯಾಗಿದೆ ಎಂದು ಅವರು ಹೇಳಿದ್ದಾರೆ.
ಈ ಮೊದಲು ಶೈಲೇಂದ್ರ ಪಾಠಕ್ ಮತ್ತು ಅವರ ಸಹೋದರ ಕೂಡ ಕಕ್ಷಿದಾರರಾಗಲು ಹೈಕೋರ್ಟ್‌ನಲ್ಲಿ ಮನವಿ ಮಾಡಿದ್ದರು. ಆದರೆ ಅಲ್ಲಿ ಪರಿಹಾರ ಸಿಕ್ಕಿರಲಿಲ್ಲ. ಅದೇ ರೀತಿ ಇನ್ನೊಬ್ಬ ಫಿರ್ಯಾದಿಯನ್ನು ಕಕ್ಷಿದಾರರನ್ನಾಗಿಸುವ ಅರ್ಜಿಯನ್ನು ಈಗಾಗಲೇ ತಿರಸ್ಕರಿಸಲಾಗಿದೆ. ಆದ್ದರಿಂದ ಈಗ ಅರ್ಜಿ ಸಲ್ಲಿಸಿ ಯಾರನ್ನಾದರೂ ಪಕ್ಷದ ಸದಸ್ಯರನ್ನಾಗಿ ಮಾಡುವ ಮನವಿಯನ್ನು ಸ್ವೀಕರಿಸುವ ಸಾಧ್ಯತೆ ಕಡಿಮೆ ಇದೆ. ವಿಜಯ ಶಂಕರ್ ರಸ್ತೋಗಿ ಜ್ಞಾನವಾಪಿಯಲ್ಲಿರುವ ಸಂಪೂರ್ಣ ಸಂಕೀರ್ಣದ ಸಮೀಕ್ಷೆಗೆ ಒತ್ತಾಯಿಸುತ್ತಾರೆ. ಈ ಅರ್ಜಿಯ ಬಗ್ಗೆಯೂ ಚರ್ಚೆ ನಡೆಯಲಿದೆ.
ಪ್ರಸಿದ್ಧ ಕಾಶಿ ವಿಶ್ವನಾಥ ದೇವಸ್ಥಾನದ ಪಕ್ಕದಲ್ಲಿ ಜ್ಞಾನವಾಪಿ ಮಸೀದಿ ಇದೆ. ಹಿಂದೂ ದೇವಾಲಯದ ಸ್ಥಳದಲ್ಲಿ ಈ ಮಸೀದಿ ನಿರ್ಮಿಸಲಾಗಿದೆ ಎಂಬ ವಾದವನ್ನು ಹಿಂದೂಗಳು ಮಾಡುತ್ತಿದ್ದಾರೆ. ಇದರ ಬಗ್ಗೆ ಹಿಂದೂಗಳು ಮತ್ತು ಮುಸ್ಲಿಮರು ಕಾನೂನು ಹೋರಾಟ ನಡೆಸುತ್ತಿದ್ದಾರೆ. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ಸಹ ಜ್ಞಾನವಾಪಿ ಸಂಕೀರ್ಣದಲ್ಲಿ ವೈಜ್ಞಾನಿಕ ಸಮೀಕ್ಷೆ ನಡೆಸುತ್ತಿದೆ.
ಇದನ್ನೂ ಓದಿ: ಜ್ಞಾನವಾಪಿ: ಹಿಂದೂಗಳು ಪೂಜಿಸುತ್ತಿರುವ 'ವ್ಯಾಸ್ ಕಾ ತೆಹ್ಖಾನಾ' ಪ್ರದೇಶದ ದುರಸ್ತಿ, ರಕ್ಷಣೆ ಕೋರಿ ಕೋರ್ಟ್ಗೆ ಅರ್ಜಿ