ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ನಿಯಮಗಳನ್ನು ಜಾರಿ ಮಾಡಿ ಅಧಿಸೂಚನೆ ಹೊರಡಿಸಿರುವ ಕೇಂದ್ರ ಸರ್ಕಾರ ಅದನ್ನು ಜನರಿಗೆ ಮನದಟ್ಟು ಮಾಡಲು ಮತ್ತು ಸಿಎಎ-2019 ಅಡಿಯಲ್ಲಿ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಲು ಹೊಸ ಪೋರ್ಟಲ್ ಅನ್ನು ಮಂಗಳವಾರ ಬಿಡುಗಡೆ ಮಾಡಿದೆ.
ಹಿಂದುಗಳು, ಜೈನರು, ಬೌದ್ಧರು, ಪಾರ್ಶಿಗಳು, ಕ್ರಿಶ್ಚಿಯನ್ನರು ಸೇರಿದಂತೆ ನೆರೆರಾಷ್ಟ್ರಗಳಿಂದ ಬಂದು ಭಾರತದಲ್ಲಿ ನೆಲೆಸಿರುವ ಮುಸ್ಲಿಮೇತರ ವಲಸಿಗರು ಪೌರತ್ವ ಕೋರಿ ಅರ್ಜಿ ಸಲ್ಲಿಸಬಹುದಾಗಿದೆ. ನಾಗರಿಕತ್ವ ಬಯಸುವ ಜನರು ಸರ್ಕಾರ ಬಿಡುಗಡೆ ಮಾಡಿರುವ indiancitizenshiponline.nic.in ಎಂಬ ಹೊಸ ಪೋರ್ಟಲ್ನಲ್ಲಿ ಅರ್ಜಿ ಸಲ್ಲಿಸಬೇಕು ಎಂದು ಸರ್ಕಾರ ಸೂಚಿಸಿದ್ದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಇದರ ಜೊತೆಗೆ ಸಿಎಎ ನಿಯಮಗಳನ್ನು ಸಲೀಸಲಾಗಿ ಅರ್ಥ ಮಾಡಿಕೊಳ್ಳಲು ಮತ್ತು ಅರ್ಜಿ ಸಲ್ಲಿಕೆಯು ತ್ವರಿತವಾಗಲು 'CAA-2019' ಎಂಬ ಮೊಬೈಲ್ ಅಪ್ಲಿಕೇಶನ್ ಸಹ ಬಿಡುಗಡೆ ಮಾಡಲಿದೆ ಎಂದು ಕೇಂದ್ರ ಗೃಹ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಯಾರು ಪೌರತ್ವಕ್ಕೆ ಅರ್ಹರು?: ಪೌರತ್ವ ತಿದ್ದುಪಡಿ ಕಾಯಿದೆ-2019ರ ಪ್ರಕಾರ, ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಧಾರ್ಮಿಕ ತುಳಿತಕ್ಕೊಳಗಾಗಿ ಭಾರತಕ್ಕೆ ಬಂದು ನೆಲೆಸಿರುವ 6 ಅಲ್ಪಸಂಖ್ಯಾತ ಸಮುದಾಯಗಳಾದ ಹಿಂದೂಗಳು, ಸಿಖ್ಖರು, ಬೌದ್ಧರು, ಜೈನರು, ಪಾರ್ಸಿಗಳು ಮತ್ತು ಕ್ರಿಶ್ಚಿಯನ್ನರು ಈ ಕಾನೂನಿನಡಿ ಪೌರತ್ವ ಪಡೆಯಲು ಅರ್ಹರಾಗಿದ್ದಾರೆ.
ಕೇಂದ್ರ ಗೃಹ ಸಚಿವಾಲಯ ಸೋಮವಾರ ರಾತ್ರಿ ಆರಂಭಿಸಿರುವ ಪೋರ್ಟಲ್ನಲ್ಲಿ ಸೂಚಿಸಿದಂತೆ, ಈ ಧಾರ್ಮಿಕ ನಿರಾಶ್ರಿತರಿಗೆ ನಿಯಮಗಳನುಸಾರ ಭಾರತೀಯ ಪೌರತ್ವವನ್ನು ನೀಡಲಾಗುತ್ತದೆ. ಡಿಸೆಂಬರ್ 31, 2014 ರ ಮೊದಲು ಅವರು ಭಾರತದಲ್ಲಿ ಆಶ್ರಯ ಪಡೆದಿರಬೇಕು ಎಂದು ಷರತ್ತು ವಿಧಿಸಲಾಗಿದೆ. ಯಾವ ದೇಶದಿಂದ ವಲಸೆ ಬಂದ ಬಗ್ಗೆ ಮಾಹಿತಿ, ಅದರ ದಾಖಲೆ, ಜಾತಿ ಪ್ರಮಾಣಪತ್ರ, ಫೋಟೋವನ್ನು ಆನ್ಲೈನ್ ಮೂಲಕ ಅರ್ಜಿ ಸಮೇತ ಸಲ್ಲಿಸಬೇಕು. ಬಳಿಕ ಪೌರತ್ವ ಸಮಿತಿಯ ಮುಂದೆ ಖುದ್ದಾಗಿ ಹಾಜರಾಗಬೇಕು. ಇಲ್ಲವಾದಲ್ಲಿ ಕೋರಿಕೆ ತಿರಸ್ಕೃತವಾಗಲಿದೆ.
ಪೌರತ್ವಕ್ಕೆ ನಿಯಮಗಳಿವು:
- ಭಾರತೀಯ ಮೂಲದ ವ್ಯಕ್ತಿ
- ಭಾರತದ ಪ್ರಜೆಯನ್ನು ವಿವಾಹವಾದ ವ್ಯಕ್ತಿ
- ಭಾರತೀಯ ಪ್ರಜೆಯ ಅಪ್ರಾಪ್ತ ಮಗು
- ಪೋಷಕರು ಭಾರತೀಯ ನಾಗರಿಕತ್ವದ ವ್ಯಕ್ತಿ
- ಪೋಷಕರು ಅಥವಾ ವ್ಯಕ್ತಿಯು ಸ್ವತಂತ್ರ ಭಾರತದ ನಾಗರಿಕ
- ಭಾರತದ ಸಾಗರೋತ್ತರ ನಾಗರಿಕರಾಗಿ ನೋಂದಾಯಿಸಲ್ಪಟ್ಟ ವ್ಯಕ್ತಿ
- ನೈಸರ್ಗಿಕವಾಗಿ ಪೌರತ್ವವನ್ನು ಬಯಸುವ ವ್ಯಕ್ತಿ (5 ವರ್ಷಗಳಿಂದ ಭಾರತದ ಸಾಗರೋತ್ತರ ಪ್ರಜೆಯಾಗಿ ನೋಂದಾಯಿಸಲ್ಪಟ್ಟ ವ್ಯಕ್ತಿ ಅಥವಾ ಭಾರತದಲ್ಲಿ ಒಂದು ವರ್ಷದಿಂದ ವಾಸಿಸುತ್ತಿರುವವರು)
ದಾಖಲೆಗಳು ಏನಿರಬೇಕು?:
- ಅಫ್ಘಾನಿಸ್ತಾನ, ಬಾಂಗ್ಲಾದೇಶ ಅಥವಾ ಪಾಕಿಸ್ತಾನ ಸರ್ಕಾರದಿಂದ ನೀಡಲಾದ ಪಾಸ್‌ಪೋರ್ಟ್‌ನ ನಕಲು
- ಈ ದೇಶಗಳಲ್ಲಿ ಸರ್ಕಾರದಿಂದ ನೀಡಿದ ಜನ್ಮ ಪ್ರಮಾಣಪತ್ರ
- ಶಾಲೆ/ಕಾಲೇಜು/ಬೋರ್ಡ್ ಅಥವಾ ವಿಶ್ವವಿದ್ಯಾನಿಲಯದ ಪ್ರಮಾಣ ಪತ್ರ
- ಸರ್ಕಾರಿ ಅಧಿಕಾರಿಗಳು ನೀಡಿದ ಯಾವುದೇ ರೀತಿಯ ಗುರುತಿನ ದಾಖಲೆ
- ವಿದೇಶಿಯರ ಪ್ರಾದೇಶಿಕ ನೋಂದಣಿ ಅಧಿಕಾರಿ ಅಥವಾ ಭಾರತದಲ್ಲಿ ವಿದೇಶಿಯರ ನೋಂದಣಿ ಅಧಿಕಾರಿ ನೀಡಿದ ವಸತಿ ಪರವಾನಗಿ
- ಈ ಮೂರು ದೇಶಗಳಲ್ಲಿ ಸರ್ಕಾರಿ ಅಧಿಕಾರಿಗಳು ನೀಡಿದ ಯಾವುದಾದರೂ ಪರವಾನಗಿ ದಾಖಲೆ
- ಈ ದೇಶಗಳಲ್ಲಿ ಇರುವ ಭೂಮಿ ಅಥವಾ ಹಿಡುವಳಿ ದಾಖಲೆಗಳು
- ಅರ್ಜಿದಾರರ ಪೋಷಕರು ಅಥವಾ ಅಜ್ಜಿಯರು ಅಥವಾ ಮುತ್ತಜ್ಜಿಯರು ಸೂಚಿಸಿದ ದೇಶಗಳ ನಾಗರಿಕರು ಎಂದು ತೋರಿಸುವ ಯಾವುದೇ ದಾಖಲೆ.
ಇದನ್ನೂ ಓದಿ: ಸಿಎಎ ಜಾರಿಯಾದ ಮರುದಿನವೇ ತಡೆ ಕೋರಿ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ ಮುಸ್ಲಿಂ ಲೀಗ್