ಅಮರಾವತಿ (ಮಹಾರಾಷ್ಟ್ರ): ಯಾವುದೇ ಒಂದು ಕುಟುಂಬದ ಅನ್ನದಾತನೇ ಕೊಲೆಯಾದರೆ, ಆ ಕುಟುಂಬದ ಮಹಿಳೆಯರು ಹಾಗೂ ಮಕ್ಕಳು ಸಹಜ ಜೀವನ ನಡೆಸುವುದು ಕಷ್ಟಕರ. ಅತ್ಯಾಚಾರದಂತಹ ಘಟನೆ ಏನಾದರೂ ಸಂಭವಿಸಿದ್ದಲ್ಲಿ, ಆ ಕುಟುಂಬ ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಕುಗ್ಗಿ ಹೋಗುತ್ತದೆ. ಇಂತಹ ಪ್ರಕರಣಗಳಲ್ಲಿ ಕೆಲವೊಮ್ಮೆ ಆರೋಪಿಗಳು ಪಾರಾಗುತ್ತಾರೆ. ಆಗ ಸಂತ್ರಸ್ತ ಕುಟುಂಬಗಳ ಪರಿಸ್ಥಿತಿ ಏನು? ಈ ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳಲೆಂದೇ ಅಮರಾವತಿಯ ಪ್ರವೀಣ್ ಖಂಡಪ್ಪಸೋಲೆ ಹಾಗೂ ಜ್ಯೋತಿ ಖಂಡಪ್ಪಸೋಲೆ ದಂಪತಿ ಮೇಕೆ ಬ್ಯಾಂಕ್ (Goat Bank) ಎನ್ನುವ ನೂತನ ಪರಿಕಲ್ಪನೆಯನ್ನು ಹುಟ್ಟುಹಾಕಿದ್ದಾರೆ.
ಅಪರಾಧ ಪ್ರಕರಣಗಳ ಸಂತ್ರಸ್ತ ಕುಟುಂಬಗಳನ್ನು ಆರ್ಥಿಕವಾಗಿ ಸದೃಢವಾಗಿಸುವ ಉದ್ದೇಶದಿಂದಲೇ ದಂಪತಿ ಈ ಮೇಕೆ ಬ್ಯಾಂಕ್ ಅನ್ನು ಪ್ರಾರಂಭಿಸಿದ್ದಾರೆ. ತಮ್ಮ ದಿಶಾ ಎನ್ಜಿಓ ಮೂಲಕ ಮೇಕೆ ಬ್ಯಾಂಕ್ ಅನ್ನು ಸ್ಥಾಪಿಸಿ, ಪ್ರತಿ ಕುಟುಂಬಗಳಿಗೆ ಎರಡೆರಡು ಮೇಕೆಗಳನ್ನು ನೀಡಲಾಗುತ್ತದೆ. ಈ ಮೇಕೆಗಳನ್ನು ಇಟ್ಟುಕೊಂಡು ವ್ಯಾಪಾರ ಮಾಡುವ ಮೂಲಕ ಆ ಕುಟುಂಬಗಳು ಜೀವನದ ಆದಾಯ ದಾರಿಯನ್ನು ಕಂಡುಕೊಂಡಿವೆ. ಈ ಮೇಕೆ ಬ್ಯಾಂಕ್ ಪರಿಕಲ್ಪನೆ ಅಮರಾವತಿ ಸೇರಿದಂತೆ ರಾಜ್ಯದ ಆರು ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ.
ಗೋಟ್ ಬ್ಯಾಂಕ್ ಪರಿಕಲ್ಪನೆ: ಮನೆಯ ಆಧಾರಸ್ತಂಭವಾಗಿರುವ ವ್ಯಕ್ತಿಗಳನ್ನೇ ಕಳೆದುಕೊಂಡಿರುವ ಕುಟುಂಬಗಳ ಭವಿಷ್ಯ, ಆರ್ಥಿಕ ಸಬಲತೆ, ಮಕ್ಕಳ ಶಿಕ್ಷಣವನ್ನು ಅಭಿವೃದ್ಧಿಗೊಳಿಸುವ ಉದ್ದೇಶದಿಂದ ದಿಶಾ ಸಂಸ್ಥೆ ಮೇಕೆ ಬ್ಯಾಂಕ್ ಎನ್ನುವ ಪರಿಕಲ್ಪನೆಯನ್ನು ಹುಟ್ಟುಹಾಕಿತು. ಅನೇಕ ಕುಟುಂಬಗಳು ಕೊರೊನಾ ಅವಧಿಯಲ್ಲಿ ಸಾಕಷ್ಟು ಸಂಕಷ್ಟಕ್ಕೆ ಸಿಲುಕಿದ್ದವು. ಅಂತಹ ಕುಟುಂಬಗಳ ಬಗ್ಗೆ ಕೂಲಂಕಷವಾಗಿ ಅಧ್ಯಯನ ನಡೆಸಿದ ದಿಶಾ ಸಂಸ್ಥೆ ಈ ಪರಿಕಲ್ಪನೆಯನ್ನು ಪ್ರಾರಂಭಿಸುವ ಬಗ್ಗೆ ಚಿಂತಿಸಿತು. ಸಂತ್ರಸ್ತ ಕುಟುಂಬಗಳಿಗೆ ವ್ಯಾಪಾರಕ್ಕೆ ಸಹಾಯ ಮಾಡಿದಲ್ಲಿ, ಆ ಕುಟುಂಬಗಳು ಮತ್ತೆ ಚೇತರಿಸಿಕೊಳ್ಳಬಹುದು ಎಂಬುದನ್ನು ಮನಗಂಡ ಸಂಸ್ಥೆ ಪ್ರತಿ ಕುಟುಂಬಗಳಿಗೆ ಮೇಕೆಗಳನ್ನು ನೀಡುವ ಈ ನೂತನ ಪ್ರಯತ್ನವನ್ನು ಮೂರು ವರ್ಷಗಳ ಹಿಂದೆ ಪ್ರಾರಂಭಿಸಿತು.
ಈ ಬಗ್ಗೆ ಈಟಿವಿ ಭಾರತ ಜೊತೆ ಮಾತನಾಡಿದ ದಿಶಾ ಸಂಸ್ಥೆಯ ಮುಖ್ಯಸ್ಥ ಪ್ರವೀಣ್ ಖಂಡಪಸೋಲೆ, "ಅಪರಾಧ ಸಂತ್ರಸ್ತ ಕುಟುಂಬಗಳಿಗೆ ಆದಾಯದ ಮೂಲವನ್ನು ಒದಗಿಸಲು ನಮ್ಮ ಮೇಕೆ ಬ್ಯಾಂಕಿನಿಂದ ಒಂದು ಗಂಡು ಹಾಗೂ ಹೆಣ್ಣು ಮೇಕೆಯನ್ನು ನೀಡಲಾಗುತ್ತದೆ. ಈ ಮೇಕೆ ಜನ್ಮ ನೀಡುವ ಮೊದಲ ಮರಿಯನ್ನು ಮತ್ತೆ ಸಂಸ್ಥೆಯೇ ತೆಗೆದುಕೊಳ್ಳುತ್ತದೆ. ಈ ರೀತಿ ತೆಗೆದುಕೊಂಡ ಮರಿಯನ್ನು ಸಂಸ್ಥೆ ಅಂತಹದೇ ಇನ್ನೊಂದು ಕುಟುಂಬಕ್ಕೆ ನೀಡುತ್ತದೆ. ಆ ಎರಡು ಮೇಕೆಗಳನ್ನು ಕುಟುಂಬಗಳು ಸಾಕುವುದರಿಂದ, ಅದು ಅವರಿಗೆ ಶಾಶ್ವತ ಆದಾಯದ ಮೂಲವಾಗುತ್ತದೆ. ಈ ಪರಿಕಲ್ಪನೆಯಿಂದ ಅನೇಕ ಕುಟುಂಬಗಳು ತಿಂಗಳಿಗೆ ಆರು ಸಾವಿರ ರೂಪಾಯಿಗಳನ್ನು ಗಳಿಸುತ್ತಿವೆ. ಏನೂ ಇಲ್ಲದವರಿಗೆ ಹೊಸ ಭರವಸೆಯನ್ನು ನೀಡುವುದು ನಮ್ಮ ಗುರಿಯಾಗಿದೆ" ಎಂದು ಹೇಳಿದರು.
ಮೇಕೆಗಳ ಸಂಖ್ಯೆ ಹೆಚ್ಚಳ: "ಕಳೆದ ಮೂರು ವರ್ಷಗಳಿಂದ ಮೇಕೆ ಬ್ಯಾಂಕ್ ಪರಿಕಲ್ಪನೆಯಡಿ ಸಂತ್ರಸ್ತ ಕುಟುಂಬಗಳಿಗೆ ಮೇಕೆಗಳನ್ನು ನೀಡಲಾಗುತ್ತಿದೆ. ಇದುವರೆಗೆ 60 ಕುಟುಂಬಗಳಿಗೆ ಒಂದು ಅಥವಾ ಎರಡು ಮೇಕೆಗಳನ್ನು ನೀಡಲಾಗಿದೆ. ಮೇಕೆ ಸಾಕಾಣಿಕೆ ಅನೇಕ ಕುಟುಂಬಗಳ ಕೈಹಿಡಿದಿದ್ದು, 60ರಲ್ಲಿ ಅನೇಕ ಕುಟುಂಬಗಳು 17 ರಿಂದ 18 ಮೇಕೆಗಳನ್ನು ಹೊಂದಿವೆ. ಇದರಿಂದ ಈ ಕುಟುಂಬಗಳಿಗೆ ಆರ್ಥಿಕವಾಗಿ ಸಬಲರಾಗಲು ಹೊಸ ದಾರಿ ಸಿಕ್ಕಿದೆ" ಎಂದು ತಿಳಿಸಿದರು.
ದಿಶಾ ಸಂಸ್ಥೆಯ ಜ್ಯೋತಿ ಖಂಡಪಸೋಲೆ ಮಾತನಾಡಿ, "ಒಂದು ಕುಟುಂಬದ ಯಜಮಾನ ಕೊಲೆಯಾದಂತಹ ಸಂದರ್ಭದಲ್ಲಿ ಆ ಇಡೀ ಮನೆಯ ಜವಾಬ್ದಾರಿ ವಿಧವೆ ಹೆಂಡತಿಯ ಮೇಲೆ ಬೀಳುತ್ತದೆ. ನ್ಯಾಯಕ್ಕಾಗಿ ಕುಟುಂಬ ನ್ಯಾಯಾಲಯದಲ್ಲಿ ಹೋರಾಡುತ್ತದೆ. ಆದರೆ ಅವರ ಹೊಟ್ಟೆಪಾಡಿನ ಕಥೆಯೇನು ಎಂದು ಸಂತ್ರಸ್ತ ಮಹಿಳೆಯೊಬ್ಬಳು ಕೊರೊನಾ ಸಮಯದಲ್ಲಿ ನಮಗೆ ಪ್ರಶ್ನೆ ಮಾಡಿದ್ದರು. ಅಲ್ಲಿಯವರೆಗೆ ಅಂತಹ ಸಂತ್ರಸ್ತ ಕುಟುಂಬಗಳಿಗೆ ನ್ಯಾಯ ಒದಗಿಸುವ ಕೆಲಸವನ್ನು ನಮ್ಮ ದಿಶಾ ಸಂಸ್ಥೆ ಮಾಡುತ್ತಿತ್ತು. ಆದರೆ ನಂತರದಲ್ಲಿ ಅದರ ಜೊತೆಗೆ ಆ ಕುಟುಂಬಗಳನ್ನು ಆರ್ಥಿಕವಾಗಿ ಸದೃಢರನ್ನಾಗಿ ಮಾಡುವ ಪ್ರಯತ್ನವನ್ನು ಮಾಡಲಾಗುತ್ತಿದೆ" ಎಂದು ಹೇಳಿದರು.
ಆರು ಜಿಲ್ಲೆಗಳಲ್ಲಿ ಗೋಟ್ ಬ್ಯಾಂಕ್ ಯಶಸ್ವಿ: ಪ್ರಾರಂಭದಲ್ಲಿ ಅಮರಾವತಿ ಜಿಲ್ಲೆಯ ತಿವಾಸ್ ತಾಲೂಕಿನ ವಠೋಡ ಖುರ್ದ್ ಎಂಬ ಹಳ್ಳಿಯಲ್ಲಿ ದಿಶಾ ಸಂಸ್ಥೆ ಮೇಕೆ ಬ್ಯಾಂಕ್ ಅನ್ನು ಸ್ಥಾಪಿಸಿತು. ಈ ಮೇಕೆ ಬ್ಯಾಂಕ್ ಮೂಲಕ ಅಮರಾವತಿ ಜಿಲ್ಲೆ ಸೇರಿದಂತೆ ನಾಗಪುರ, ಯವತ್ಮಾಲ್, ಹಿಂಗೋಲಿ, ಪರ್ಭಾನಿ ಮತ್ತು ನಾಂದೇಡ್ ಎಂಬ ಆರು ಜಿಲ್ಲೆಗಳ ಅಪರಾಧ ಸಂತ್ರಸ್ತ ಕುಟುಂಬಗಳು ಪ್ರಯೋಜನ ಪಡೆಯುತ್ತಿವೆ. ಅಮರಾವತಿ ಜಿಲ್ಲೆಯ 15 ಕುಟುಂಬಗಳು, ಯವತ್ಮಾಲ್ ಜಿಲ್ಲೆಯಲ್ಲಿ 22 ಕುಟುಂಬಗಳು, ನಾಗ್ಪುರ ಜಿಲ್ಲೆಯಲ್ಲಿ 5, ಹಿಂಗೋಲಿ ಜಿಲ್ಲೆಯಲ್ಲಿ 12, ಪರ್ಭಾನಿ ಜಿಲ್ಲೆಯಲ್ಲಿ 5 ಹಾಗೂ ನಾಂದೇಡ್ ಜಿಲ್ಲೆಯಲ್ಲಿ 7 ಕುಟುಂಬಗಳು ಮೇಕೆ ಬ್ಯಾಂಕ್ನಿಂದ ಮೇಕೆಗಳನ್ನು ಪಡೆದು ವ್ಯಾಪಾರ ನಡೆಸುತ್ತಿವೆ. ಮುಂದಿನ ದಿನಗಳಲ್ಲಿ ಈ ಆರು ಜಿಲ್ಲೆಗಳಲ್ಲಿ ಒಟ್ಟು 350 ಕುಟುಂಬಗಳಿಗೆ ಮೇಕೆಗಳನ್ನು ನೀಡಲಾಗುವುದು" ಎಂದು ಜ್ಯೋತಿ ಖಂಡಪಸೋಲೆ ತಿಳಿಸಿದರು.
ದಿಶಾ ಸಂಸ್ಥೆಯ ಕುರಿತು: ಪ್ರವೀಣ್ ಖಂಡಪಸೋಲೆ ಹಾಗೂ ಜ್ಯೋತಿ ಖಂಡಪಸೋಲೆ ದಂಪತಿ 2009ರಲ್ಲಿ ಅಮರಾವತಿಯಲ್ಲಿ ಈ ದಿಶಾ ಸಂಸ್ಥೆಯನ್ನು ಸ್ಥಾಪಿಸಿದರು. ಅಪರಾಧ ಸಂತ್ರಸ್ತರಿಗೆ ನ್ಯಾಯ ಒದಗಿಸುವುದು ಈ ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ. ನ್ಯಾಯಾಲಯಗಳಲ್ಲಿ ಅಪರಾಧ ಸಂತ್ರಸ್ತರಿಗೆ ನ್ಯಾಯ ಪಡೆಯಲು ಈ ಸಂಸ್ಥೆ ಸಹಾಯ ಮಾಡುತ್ತದೆ. ಸೌಲಭ್ಯ ವಂಚಿತ ಮಕ್ಕಳಿಗೆ ನ್ಯಾಯ ಒದಗಿಸಿಕೊಡುವ ಕೆಲಸವನ್ನೂ ಈ ಸಂಸ್ಥೆ ಮಾಡುತ್ತಿರುವುದು ಶ್ಲಾಘನೀಯ.
ಇದನ್ನೂ ಓದಿ: ಭಾರತದಲ್ಲಿ ಮೊದಲ ಬಾರಿಗೆ ಪ್ರಯೋಗಾಲಯದಲ್ಲಿ ಮೀನು ಬೆಳೆಯಲು ಮುಂದಾದ ಸಿಎಂಎಫ್ಆರ್ಐ