ನವದೆಹಲಿ: ದೆಹಲಿ ಬಿಜೆಪಿ ಸಂಸದ, ಭಾರತದ ಮಾಜಿ ಕ್ರಿಕೆಟರ್ ಗೌತಮ್ ಗಂಭೀರ್ ರಾಜಕೀಯದಿಂದ ಹಿಂದೆ ಸರಿಯುವ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಕ್ರಿಕೆಟ್ನಲ್ಲಿ ತೊಡಗಿಸಿಕೊಳ್ಳಲು ಬಯಸಿರುವ ಅವರು ಪಕ್ಷದ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಅವರಿಗೆ ಪತ್ರ ಬರೆದು ತಮ್ಮನ್ನು ರಾಜಕೀಯ ಕರ್ತವ್ಯಗಳಿಂದ ಮುಕ್ತಗೊಳಿಸುವಂತೆ ಕೋರಿದ್ದಾರೆ.
ನನ್ನನ್ನು ರಾಜಕೀಯ ಕರ್ತವ್ಯಗಳಿಂದ ಮುಕ್ತಗೊಳಿಸುವಂತೆ ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ ಅವರಿಗೆ ಮನವಿ ಮಾಡಿದ್ದೇನೆ. ಇದರಿಂದಾಗಿ ನನ್ನ ಮುಂಬರುವ ಕ್ರಿಕೆಟ್ ಬದ್ಧತೆಗಳ ಮೇಲೆ ಗಮನಹರಿಸಬಹುದು. ಜನ ಸೇವೆ ಮಾಡಲು ಈವರೆಗೂ ಅವಕಾಶ ನೀಡಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ನಾನು ಧನ್ಯವಾದ ಸಲ್ಲಿಸುತ್ತೇನೆ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಗಂಭೀರ್, 2019 ರ ಮಾರ್ಚ್ನ ಲ್ಲಿ ಬಿಜೆಪಿಗೆ ಸೇರಿದ್ದರು. ದೆಹಲಿಯಲ್ಲಿ ಪಕ್ಷದ ಪ್ರಮುಖ ನಾಯಕರಾಗಿದ್ದರು. 2019 ರ ಲೋಕಸಭಾ ಚುನಾವಣೆಯಲ್ಲಿ ಪೂರ್ವ ದೆಹಲಿ ಕ್ಷೇತ್ರದಿಂದ ಸ್ಪರ್ಧಿಸಿ 6,95,109 ಮತಗಳ ಗಣನೀಯ ಅಂತರದಿಂದ ಗೆದ್ದರು. ಮುಂಬರುವ 2024 ರ ಚುನಾವಣೆಗೆ ಗಂಭೀರ್‌ಗೆ ಟಿಕೆಟ್ ಸಿಗುವುದಿಲ್ಲ ಎಂಬ ಸುದ್ದಿಯ ನಡುವೆ ರಾಜಕೀಯ ತ್ಯಜಿಸುವ ನಿರ್ಧಾರ ಮಾಡಿದ್ದಾರೆ ಎಂದು ಹೇಳಲಾಗಿದೆ.
ಮುಂದಿನ ಲೋಕಸಭೆ ಚುನಾವಣೆಗೆ ಇನ್ನೂ ಕೆಲವೇ ದಿನಗಳು ಬಾಕಿ ಇರುವಾಗ ಪೂರ್ವ ದೆಹಲಿಯ ಸಂಸದರಾಗಿರುವ ಗಂಭೀರ್ ರಾಜಕೀಯದಿಂದ ಪರಿತ್ಯಕ್ತನಾಗಲು ಕೋರಿದ್ದಾರೆ.
ಇದನ್ನೂ ಓದಿ: ಲೋಕಸಭಾ ಚುನಾವಣೆಗೆ ಸ್ಪರ್ಧಿಸಲ್ಲ: ಯುವರಾಜ್ ಸಿಂಗ್