ನವದೆಹಲಿ: ಭಾರಿ ಸದ್ದು ಮಾಡಿದ್ದ ಗ್ಯಾಂಗ್ಸ್ಟರ್ ಸಂದೀಪ್ ಆಲಿಯಾಸ್ ಕಲಾ ಜಥೇಡಿ ಹಾಗೂ ಮೋಸ್ಟ್ವಾಟೆಂಡ್ ಶೀಟರ್ ಆಗಿದ್ದ ಅನುರಾಧ ಚೌಧರಿ ಆಲಿಯಾಸ್ ಮೇಡಂ ಮಿನ್ಸ್ ಮದುವೆ ಬಿಗಿ ಭದ್ರತೆಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ನೆರವೇರಿದೆ.
ಹರಿಯಾಣದ ಸೋನಿಪತ್ನಿಂದ ಎಸ್ಯುವಿ ಕಾರಿನಲ್ಲಿ ವಧು ಚೌಧರಿ ಮದುವೆ ಮಂಟಪಕ್ಕೆ ಆಗಮಿಸಿ, ಸಂದೀಪ್ ಜೊತೆ ಸಪ್ತಪದಿ ತುಳಿದಿದ್ದಾರೆ. ಸಂದೀಪ್ ಮದುವೆಗಾಗಿ ನ್ಯಾಯಾಲಯದಿಂದ ಆರು ಗಂಟೆಗೆ ಪೆರೋಲ್ ಪಡೆದಿದ್ದಾರೆ. ಈ ಇಬ್ಬರು ಗ್ಯಾಂಗ್ಸ್ಟರ್ಗಳ ಮದುವೆ ದ್ವಾರಕಾ ಸೆಕ್ಟರ್ 3ರಲ್ಲಿನ ಸಂತೋಷ್ ಗಾರ್ಡನ್ನ ಬಾಂಕ್ವೆಟ್ ಹಾಲ್ನಲ್ಲಿ ನಿಗದಿಯಾಗಿತ್ತು. ತಿಹಾರ್ ಜೈಲಿನಿಂದ 7 ಕಿ.ಮೀ ದೂರದಲ್ಲಿರುವ ಈ ಮದುವೆ ಮಂಟಪವನ್ನು ಸಂದೀಪ್ ಪರ ವಕೀಲ 51 ಸಾವಿರ ರೂ ಕೊಟ್ಟು ಬುಕ್ ಮಾಡಿದ್ದು, ವಿವಾಹಕ್ಕೆ ಸಕಲ ಸಿದ್ದತೆ ನಡೆಸಲಾಗಿತ್ತು.
ಬಿಗಿ ಭದ್ರತೆ: ನಟೋರಿಯಸ್ ಗ್ಯಾಂಗ್ಸ್ಟರ್ನ ಹಿಂದಿನ ಕೃತ್ಯ ಅರಿತಿರುವ ದೆಹಲಿ ಪೊಲೀಸರು ಯಾವುದೇ ಅನಾಹುತಗಳು ನಡೆಯದಂತೆ ಯೋಜನೆ ರೂಪಿಸಿದ್ದರು. ಬಿಗಿ ಭದ್ರತೆಗೆ 250 ಪೊಲೀಸರನ್ನು ನೇಮಕ ಮಾಡಲಾಗಿತ್ತು. ಮದುವೆ ಮಂಟಪದಲ್ಲಿ ಯಾವುದೇ ಗ್ಯಾಂಗ್ವಾರ್ ನಡೆಯದಂತೆ ಅಥವಾ ಸಂದೀಪ್ ತಪ್ಪಿಸಿಕೊಳ್ಳದಂತೆ ತಡೆಯಲು ಪೊಲೀಸರು ಅಗತ್ಯ ಮುಂಜಾಗ್ರತೆ ವಹಿಸಿದ್ದರು. ಮಂಟಪದಲ್ಲಿ ಮೆಟಲ್ ಡಿಟೆಕ್ಟರ್, ಸಿಸಿಟಿವಿ ಕ್ಯಾಮೆರಾ, ಡ್ರೋಣ್ ಮತ್ತು ಶಸ್ತ್ರ ಸಜ್ಜಿತ ಪೊಲೀಸರನ್ನು ಭದ್ರತೆಗೆ ನೇಮಕ ಮಾಡಲಾಗಿತ್ತು ಎಂದು ವರದಿಗಳು ತಿಳಿಸಿವೆ.
ಸೋನಿಪತ್ ಮೂಲದ ಸಂದೀಪ್ ಅನೇಕ ಕ್ರಿಮಿನಲ್ ಪ್ರಕರಣದಲ್ಲಿ ಬೇಕಾದ ಅಪರಾಧಿಯಾಗಿದ್ದು, ಈತನ ತಲೆಗೆ 7 ಲಕ್ಷ ರೂಗಳನ್ನೂ ಘೋಷಣೆ ಮಾಡಲಾಗಿತ್ತು. ಅನುರಾಧ ಚೌಧರಿ ಕೂಡ ಆರಕ್ಕಿಂತ ಹೆಚ್ಚು ಪ್ರಕರಣಗಳಲ್ಲಿ ಬೇಕಾದ ಅಪರಾಧಿ. ಅವರ ವಿರುದ್ಧ ಮನಿ ಲಾಂಡರಿಂಗ್, ಅಪಹರಣ, ಬೆದರಿಕೆ, ರಾಜಸ್ಥಾನ ಮತ್ತು ದೆಹಲಿಯಲ್ಲಿ ಬೆದರಿಕೆ ಮತ್ತು ಶಸ್ತ್ರ ಕಾಯ್ದೆ ಪ್ರಕರಣಗಳು ದಾಖಲಾಗಿವೆ.
ಮದುವೆಗಾಗಿ ಪೆರೋಲ್: ಸಂದೀಪ್ ಮತ್ತು ಅನುರಾಧ ಕಳೆದ ನಾಲ್ಕು ವರ್ಷದಿಂದ ಸಂಬಂಧದಲ್ಲಿದ್ದಾರೆ. ಅನುರಾಧ ಸದ್ಯ ಜಾಮೀನಿನ ಮೇಲೆ ಹೊರಗಿದ್ದಾಳೆ. ಅನುರಾಧಗೆ ಇದು ಎರಡನೇ ಮದುವೆಯಾಗಿದ್ದು, 2007ರಲ್ಲಿ ನಡೆದ ಮದುವೆಯಿಂದ ವಿಚ್ಛೇದನ ಪಡೆದಿದ್ದಳು. ಸಂದೀಪ್ ಜೊತೆಗೆ ಅನೇಕ ಅಪರಾಧ ಪ್ರಕರಣದಲ್ಲಿ ಅನುರಾಧ ಸಹಭಾಗಿತ್ವ ಹೊಂದಿದ್ದಾಳೆ. ಇವರಿಬ್ಬರು ಇಂದೋರ್ ಜೈಲಿನಿಂದ ತಪ್ಪಿಸಿಕೊಂಡಿದ್ದರು. ಈ ಸಮಯದಲ್ಲಿ ಅವರ ನಡುವೆ ಪ್ರೇಮಾಂಕುರವಾಗಿತ್ತು.
ಸದ್ಯ ಸಂದೀಪ್ ತಿಹಾರ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದು, ಅನುರಾಧಾ ಜಾಮೀನಿನ ಮೇಲೆ ಆತನ ಪೋಷಕರ ಪೋಷಣೆಯಲ್ಲಿ ತೊಡಗಿದ್ದಾರೆ. ಇದೀಗ ಮದುವೆಗಾಗಿ ಸಂದೀಪ್ಗೆ ಆರು ಗಂಟೆಗಳ ಕಾಲ ಪೆರೋಲ್ ಅನ್ನು ದೆಹಲಿ ನ್ಯಾಯಾಲಯ ನೀಡಿದೆ.
ಇದನ್ನೂ ಓದಿ: ಸಾಲ ಮರುಪಾವತಿಸದಿದ್ದಕ್ಕೆ ಗ್ರಾಹಕನ ಮಗನನ್ನೇ ಒತ್ತೆ ಇರಿಸಿಕೊಂಡ ಮ್ಯಾನೇಜರ್: ಬಂಧನ, ಅಮಾನತು