ಕೋಲ್ಕತಾ : ಕಲ್ಕತ್ತಾ ಹೈಕೋರ್ಟ್ ನ್ಯಾಯಮೂರ್ತಿ ಅಭಿಜಿತ್ ಗಂಗೋಪಾಧ್ಯಾಯ ಮಂಗಳವಾರ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದು, ಬಿಜೆಪಿ ಪಕ್ಷ ಸೇರ್ಪಡೆಯಾಗುವುದಾಗಿ ಘೋಷಿಸಿದ್ದಾರೆ. ಬಿಜೆಪಿಗೆ ಸೇರುವ ನಿರ್ಧಾರದ ಹಿಂದಿನ ಕಾರಣಗಳನ್ನು ಉಲ್ಲೇಖಿಸಿದ ಅವರು, ತಮ್ಮ ಪ್ರಕಾರ ಸಮಾಜ ವಿರೋಧಿ ಶಕ್ತಿಗಳ ಪಕ್ಷವಾಗಿರುವ ತೃಣಮೂಲ ಕಾಂಗ್ರೆಸ್ನ ಶಕ್ತಿಯನ್ನು ಎದುರಿಸಬಲ್ಲ ಏಕೈಕ ರಾಷ್ಟ್ರೀಯ ಪಕ್ಷ ಬಿಜೆಪಿಯಾಗಿದೆ ಎಂದರು.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಸ್ಪರ್ಧಿಸುತ್ತೀರಾ ಎಂದು ನಿರ್ದಿಷ್ಟವಾಗಿ ಕೇಳಿದಾಗ, ಚುನಾವಣೆಗೆ ಸ್ಪರ್ಧಿಸುತ್ತೇನೋ ಇಲ್ಲವೋ ಎಂಬ ಬಗ್ಗೆ ನನಗೆ ಖಚಿತತೆ ಇಲ್ಲ ಎಂದರು. "ನಾನು ಇನ್ನೂ ಔಪಚಾರಿಕವಾಗಿ ಬಿಜೆಪಿಗೆ ಸೇರಿಲ್ಲ. ನಾನು ಸ್ಪರ್ಧಿಸುತ್ತೇನೆ ಅಥವಾ ಇಲ್ಲ ಎಂಬುದರ ಹೊರತಾಗಿಯೂ ನಾನು ಬಿಜೆಪಿಗೆ ಸೇರುವ ನಿರ್ಧಾರ ತೆಗೆದುಕೊಂಡಿದ್ದೇನೆ" ಎಂದು ಅವರು ಮಂಗಳವಾರ ಮಧ್ಯಾಹ್ನ ಮಾಧ್ಯಮಗಳೊಂದಿಗೆ ಮಾತನಾಡುತ್ತ ಹೇಳಿದರು.
ಮಾರ್ಚ್ 7 ರಂದು ತಾವು ಔಪಚಾರಿಕವಾಗಿ ಬಿಜೆಪಿಗೆ ಸೇರ್ಪಡೆಯಾಗುವುದಾಗಿ ಮತ್ತು ನಂತರ ತಾವು ಸ್ಪರ್ಧಿಸಬೇಕೇ ಅಥವಾ ಬೇಡವೇ ಎಂಬುದನ್ನು ಪಕ್ಷದ ನಾಯಕತ್ವ ನಿರ್ಧರಿಸುತ್ತದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ತೃಣಮೂಲ ಕಾಂಗ್ರೆಸ್ ವಕ್ತಾರರು ನನ್ನ ವಿರುದ್ಧ ನಿರಂತರವಾಗಿ ವಾಗ್ದಾಳಿ ನಡೆಸುತ್ತಿರುವುದು ರಾಜಕೀಯಕ್ಕೆ ಸೇರಲು ನನ್ನನ್ನು ಪ್ರೋತ್ಸಾಹಿಸಿದೆ ಎಂದು ಹೇಳಿದರು. "ನ್ಯಾಯಾಧೀಶರ ಮೇಲೆ ವೈಯಕ್ತಿಕವಾಗಿ ವಾಗ್ದಾಳಿ ಮಾಡಬಾರದು ಎಂಬುದು ಅವರಿಗೆ ತಿಳಿದಿಲ್ಲ. ಆದರೆ, ಅವರು ನಿರಂತರವಾಗಿ ಅದನ್ನೇ ಮಾಡುತ್ತಿದ್ದಾರೆ. ಅವರ ಅನೇಕ ಭ್ರಷ್ಟ ಚಟುವಟಿಕೆಗಳು ಪ್ರತಿದಿನ ಬಹಿರಂಗಗೊಳ್ಳುತ್ತಿರುವುದರಿಂದ ಅವರು ನಿರಂತರವಾಗಿ ನನ್ನ ವಿರುದ್ಧ ಮಾತನಾಡುತ್ತಿದ್ಧಾರೆ" ಎಂದು ಹೇಳಿದರು.
ಸಿಪಿಐ (ಎಂ) ಪಕ್ಷದ ಹಲವಾರು ನಾಯಕರೊಂದಿಗೆ, ಅದರಲ್ಲೂ ವಿಶೇಷವಾಗಿ ರಾಜ್ಯಸಭಾ ಸಂಸದ ಮತ್ತು ಕಲ್ಕತ್ತಾ ಹೈಕೋರ್ಟ್ನ ಹಿರಿಯ ವಕೀಲ ಬಿಕಾಶ್ ರಂಜನ್ ಭಟ್ಟಾಚಾರ್ಯ ಅವರೊಂದಿಗೆ ನಿಕಟ ಒಡನಾಟ ಹೊಂದಿದ್ದರೂ ಸಿಪಿಐ (ಎಂ) ಗೆ ಏಕೆ ಸೇರ್ಪಡೆಯಾಗುತ್ತಿಲ್ಲ ಎಂಬ ಬಗ್ಗೆ ಕೂಡ ಅವರು ವಿವರಿಸಿದರು.
ತಾವು ನಾಸ್ತಿಕನಲ್ಲದ ಕಾರಣದಿಂದ ಸಿಪಿಐ (ಎಂ) ಗೆ ಸೇರ್ಪಡೆಯಾಗುತ್ತಿಲ್ಲ ಎಂದು ನ್ಯಾಯಮೂರ್ತಿ ಗಂಗೋಪಾಧ್ಯಾಯ ಹೇಳಿದರು. ನಾರದಾ ವೀಡಿಯೊ ಹಗರಣದಲ್ಲಿ ಪಶ್ಚಿಮ ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಅವರ ವಿರುದ್ಧ ಪಿತೂರಿ ಮಾಡಲಾಗಿದ್ದು, ಅವರನ್ನು ಬಲಿಪಶುವನ್ನಾಗಿ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಇದನ್ನೂ ಓದಿ : ಡಿಕೆಶಿಗೆ ಬಿಗ್ ರಿಲೀಫ್: ಅಕ್ರಮ ಹಣ ವರ್ಗಾವಣೆ ಪ್ರಕರಣ ವಜಾಗೊಳಿಸಿದ ಸುಪ್ರೀಂ ಕೋರ್ಟ್