ನವದೆಹಲಿ: ದೀರ್ಘಕಾಲದವರೆಗೆ ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ವಿದೇಶಾಂಗ ಸಚಿವ ಕೆ.ನಟ್ವರ್ ಸಿಂಗ್ ಶನಿವಾರ ರಾತ್ರಿ ನಿಧನರಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಅವರಿಗೆ 93 ವರ್ಷ ವಯಸ್ಸಾಗಿತ್ತು. ದೆಹಲಿ ಬಳಿಯ ಗುರುಗ್ರಾಮ್‌ನ ಮೇದಾಂತ ಆಸ್ಪತ್ರೆಯಲ್ಲಿ ಕಳೆದೆರಡು ವಾರಗಳಿಂದ ದಾಖಲಾಗಿದ್ದ ಅವರು ಕೊನೆಯುಸಿರೆಳೆದಿದ್ದಾರೆ.
1931ರಲ್ಲಿ ಸಿಂಗ್ ಅವರು ರಾಜಸ್ಥಾನದ ಭರತ್‌ಪುರ ಜಿಲ್ಲೆಯಲ್ಲಿ ಜನಿಸಿದ್ದರು. ಅವರು ವೃತ್ತಿ ರಾಜತಾಂತ್ರಿಕರಾಗಿ ಕಾರ್ಯನಿರ್ವಹಿಸಿದ್ದರು. ನಟ್ವರ್ ಸಿಂಗ್ ವಿದೇಶಿ ವ್ಯವಹಾರಗಳ ಸೂಕ್ಷ್ಮ ವಿಷಯಗಳ ಬಗ್ಗೆ ಬರೆಯುತ್ತಿದ್ದ ಲೇಖನಗಳಿಂದಲೂ ಜನಪ್ರಿಯತೆ ಗಳಿಸಿದ್ದರು. ತಮ್ಮ ವಿಶಿಷ್ಟ ವೃತ್ತಿಜೀವನದ ಅವಧಿಯಲ್ಲಿ ಅವರು ಅನೇಕ ಗೌರವಗಳಿಗೆ ಪಾತ್ರರಾಗಿದ್ದರು. ಅವರ ಸೇವೆಗಾಗಿ 1984ರಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ನೀಡಲಾಗಿದೆ.
"ಮಾಜಿ ಸಚಿವ ನಟವರ್ ಸಿಂಗ್ ಅವರ ಮಗ ಆಸ್ಪತ್ರೆಯಲ್ಲಿದ್ದಾರೆ. ಅವರ ಕುಟುಂಬ ಸದಸ್ಯರು ದೆಹಲಿಯಲ್ಲಿ ಅಂತಿಮ ವಿಧಿ-ವಿಧಾನ ನೆರವೇರಿಸಲು ರಾಜಸ್ಥಾನದಿಂದ ಬರುತ್ತಿದ್ದಾರೆ. ಮಾಜಿ ಸಚಿವ ನಟ್ವರ್ ಸಿಂಗ್ ಅವರು ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಶನಿವಾರ ತಡರಾತ್ರಿ ನಿಧನರಾದರು" ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಅನುಭವಿ ರಾಜಕಾರಣಿ, ಕೆ.ನಟ್ವರ್ ಸಿಂಗ್ ಅವರು ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ-1 ಸರ್ಕಾರದ 2004-05ರ ಅವಧಿಯಲ್ಲಿ ಭಾರತದ ವಿದೇಶಾಂಗ ಸಚಿವರಾಗಿದ್ದರು. 1966ರಿಂದ 1971ರವರೆಗೆ ಪ್ರಧಾನಿ ಇಂದಿರಾ ಗಾಂಧಿಯವರ ಅವಧಿಯಲ್ಲಿ ಸಿಂಗ್ ಪಾಕಿಸ್ತಾನಕ್ಕೆ ರಾಯಭಾರಿಯಾಗಿ ಸೇವೆ ಸಲ್ಲಿಸಿದ್ದರು. ಮಾಜಿ ಸಚಿವ ನಟ್ವರ್ ಸಿಂಗ್ಜಿ ಅವರ ನಿಧನದ ಸುದ್ದಿ ದುಃಖಕರವಾಗಿದೆ. ದೇವರು ಅವರ ಕುಟುಂಬಕ್ಕೆ ಈ ನಷ್ಟವನ್ನು ಭರಿಸುವ ಶಕ್ತಿ ಮತ್ತು ಅಗಲಿದ ಆತ್ಮಕ್ಕೆ ಶಾಂತಿ ನೀಡಲಿ ಎಂದು ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೆವಾಲಾ ಎಕ್ಸ್ ಪೋಸ್ಟ್‌ನಲ್ಲಿ ಮಾಜಿ ವಿದೇಶಾಂಗ ಸಚಿವರಿಗೆ ಸಂತಾಪ ಸೂಚಿಸಿದ್ದಾರೆ.
ಸಿಂಗ್ ಅವರು 'ದಿ ಲೆಗಸಿ ಆಫ್ ನೆಹರು: ಎ ಮೆಮೋರಿಯಲ್ ಟ್ರಿಬ್ಯೂಟ್' ಮತ್ತು 'ಮೈ ಚೀನಾ ಡೈರಿ 1956-88' ಸೇರಿದಂತೆ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ. 'ಒನ್ ಲೈಫ್ ಇಸ್ ನಾಟ್ ಎನಫ್' ಎಂಬ ಪುಸ್ತಕವು ಮಾಜಿ ಸಚಿವ ನಟ್ವರ್ ಸಿಂಗ್ ಅವರ ಆತ್ಮಕಥೆಯಾಗಿದೆ.
ಇದನ್ನೂ ಓದಿ: ಬಾಂಗ್ಲಾದೇಶದಲ್ಲಿ ತೀವ್ರಗೊಂಡ ಹಿಂಸಾಚಾರ: 12 ಕೈದಿಗಳ ಹತ್ಯೆ, ಜೈಲಿನಿಂದ ನೂರಾರು ಮಂದಿ ಪರಾರಿ! - Bangladesh crisis