ಉತ್ತರಾಖಂಡ: ಪಡಿತರ ಚೀಟಿಯಡಿಯಲ್ಲಿ ನ್ಯಾಯಬೆಲೆ ಅಂಗಡಿಗಳಲ್ಲಿ ಸಿಗುವ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ಮಿಶ್ರಣವಾಗಿದೆ ಎಂಬ ಆರೋಪ ಉತ್ತರಾಖಂಡದ ಪೌರಿ ಗರ್ವಾಲ್ ಜಿಲ್ಲೆಯಲ್ಲಿ ಕೇಳಿ ಬಂದಿತ್ತು. ಇದೀಗ ಈ ವದಂತಿಗೆ ಆಹಾರ ಇಲಾಖೆ ಸ್ಪಷ್ಟನೆ ನೀಡಿದ್ದು, ಇದು ಸಾರವರ್ಧಿತ ಅಕ್ಕಿ (Fortified Rice) ಎಂದು ಸ್ಪಷ್ಟಪಡಿಸಿದೆ.
ಪೌರಿ ಗರ್ವಾಲ್ ಜಿಲ್ಲೆಯಲ್ಲಿ ಮಹಿಳೆಯೊಬ್ಬರು ಸರ್ಕಾರದಿಂದ ಸಿಗುತ್ತಿರುವ ರೇಷನ್ ಅಕ್ಕಿ ಖರೀದಿಸಿದ್ದರು. ಈ ಅಕ್ಕಿಯನ್ನು ಬಳಕೆ ಮಾಡುವಾಗ ಪ್ಲಾಸ್ಟಿಕ್ ರೀತಿಯಂತೆ ಕಂಡುಬಂದಿದೆ. ಅನುಮಾನದಿಂದ ಸುಟ್ಟಾಗ ಅಕ್ಕಿ ಕರಗಿದೆ ಎಂದು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಇದನ್ನು ಗಮನಿಸಿದ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಇದು ಪ್ಲಾಸ್ಟಿಕ್ ಅಲ್ಲ, ಸಾರವರ್ಧಿತ ಅಕ್ಕಿ ಎಂದು ತಿಳಿಸಿದ್ದಾರೆ.
"ಸಾರವರ್ಧಿತ ಅಕ್ಕಿಯನ್ನು ಆರಿಸುವಾಗ, ತೊಳೆಯುವಾಗ ಮತ್ತು ಅಡುಗೆ ಮಾಡಿ ಸೇವಿಸುವಾಗ ಎಸೆದುಬಿಡಬೇಡಿ. ನಿಯಮಿತವಾಗಿ ಸೇವಿಸಿ. ಇದರಲ್ಲಿ ಹೆಚ್ಚಿನ ಪೌಷ್ಟಿಕಾಂಶವಿದೆ. ನಿಮ್ಮ ದೈನಂದಿನ ಆಹಾರದಲ್ಲಿ ಕಬ್ಬಿಣ, ವಿಟಮಿನ್ ಮತ್ತು ಫೋಲಿಕ್ ಆಮ್ಲದ ಪ್ರಮಾಣ ಸಮತೋಲಿತವಾಗಿರುತ್ತದೆ. FSSAI ನಿಗದಿಪಡಿಸಿದ ಮಾನದಂಡಗಳ ಪ್ರಕಾರವೇ ಸಾರವರ್ಧಿತ ಅಕ್ಕಿಯನ್ನು ಸಾಮಾನ್ಯ ಅಕ್ಕಿಯೊಂದಿಗೆ ಬೆರೆಸಲಾಗುತ್ತದೆ. ಪೌರಿ ಗರ್ವಾಲ್ ಜಿಲ್ಲೆಯ ವಿಡಿಯೋ ಗಮನಕ್ಕೆ ಬಂದಿರುವ ಕಾರಣ ಈ ಮಾಹಿತಿ ನೀಡಲಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ದಾರಿ ತಪ್ಪಿಸುವ ವಿಡಿಯೋ ಹಾಗೂ ಸಂದೇಶಗಳ ಬಗ್ಗೆ ಎಚ್ಚರವಿರಲಿ" ಎಂದು ಪ್ರಾದೇಶಿಕ ಆಹಾರ ಅಧಿಕಾರಿ ವಿಜಯ್ ದೋವಲ್ ಹೇಳಿದ್ದಾರೆ.
ಫೋರ್ಟಿಫೈಡ್ ರೈಸ್ ಅಥವಾ ಸಾರವರ್ಧಿತ ಅಕ್ಕಿ ಎಂದರೇನು?: ಎಫ್‌ಎಸ್‌ಎಸ್‌ಎಐ ಸೂಚಿಸಿದ ಮಾನದಂಡಗಳ ಪ್ರಕಾರ, ಕಟಾವು ಮಾಡಿ ಸಿದ್ದಪಡಿಸಿರುವ ಸಾಮಾನ್ಯ ಅಕ್ಕಿಯನ್ನು ಪುಡಿ ಮಾಡಿ ಅದಕ್ಕೆ ಕಬ್ಬಿಣ, ವಿಟಮಿನ್ ಮತ್ತು ಫೋಲಿಕ್ ಆಮ್ಲ ಸೇರಿಸುವ ಮೂಲಕ ಬಲವರ್ಧಿತ ಅಕ್ಕಿ ಕಾಳುಗಳನ್ನು ತಯಾರಿಸಲಾಗುತ್ತದೆ. ಈ ರೀತಿ ತಯಾರಿಸಿದ ಸಾರವರ್ಧಿತ ಅಕ್ಕಿಯನ್ನು ಪ್ರತಿ 100 ಕೆಜಿಗೆ 1 ಕೆಜಿಯಂತೆ ಸೇರಿಸಲಾಗುತ್ತದೆ. ಇದರಲ್ಲಿ ಕಬ್ಬಿಣ, ವಿಟಮಿನ್ ಮತ್ತು ಫೋಲಿಕ್ ಆಮ್ಲದಂತಹ ಸೂಕ್ಷ್ಮ ಪೋಷಕಾಂಶಗಳು ಸಮೃದ್ಧವಾಗಿವೆ. ಕಬ್ಬಿಣ ರಕ್ತಹೀನತೆಯನ್ನು ತಡೆಗಟ್ಟುವಲ್ಲಿ ಸಹಕಾರಿಯಾದರೆ, ಫೋಲಿಕ್ ಆಮ್ಲ ರಕ್ತವನ್ನು ಉತ್ಪಾದಿಸಲು ನೆರವಾಗುತ್ತದೆ. ವಿಟಮಿನ್ ಬಿ-12 ನರಮಂಡಲದ ನಿರ್ವಹಣೆಗೆ ಸಹಕಾರಿಯಾಗಿದೆ.