ತಿರುಪತ್ತೂರು: ಜಿಲ್ಲೆಯ ಜೋಲಾರ್‌ಪೇಟೆ ಸಮೀಪದ ಆಚಮಂಗಲಂನಲ್ಲಿ ಎಲ್ಲಿಂದಲೋ ನಿಗೂಢ ವಸ್ತುವೊಂದು ರಭಸವಾಗಿ ಭೂಮಿಗೆ ಅಪ್ಪಳಿಸಿದ್ದು, ಇದರ ಪರಿಣಾಮ 5 ಅಡಿ ಆಳದ ಗುಂಡಿ ಸೃಷ್ಟಿಯಾಗಿದೆ. ಈ ಘಟನೆ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ನಾಲ್ಕು ದಿನಗಳ ಹಿಂದೆ ತಿರುಪತ್ತೂರು ಜಿಲ್ಲೆಯ ಜೋಲಾರ್ ಪೇಟೆ ಪಕ್ಕದ ಆಚಮಂಗಲಂ ಬಳಿ ರಾಜಿ ಎಂಬುವರ ಜಮೀನಿನಲ್ಲಿ ನಿಗೂಢ ವಸ್ತುವೊಂದು ಬಿದ್ದಿತ್ತು. ಇದರಿಂದ ಸುಮಾರು 5 ಅಡಿ ಆಳದವರೆಗೆ ಹೊಂಡ ನಿರ್ಮಾಣವಾಗಿದೆ.
ವಿಚಿತ್ರ ರೀತಿಯ ಹೊಂಡ ನೋಡಿದ ತಿರುಮಲೈ ಎಂಬ ವ್ಯಕ್ತಿ ಆರಂಭದಲ್ಲಿ ಮಾಮೂಲಿ ಹಳ್ಳ ಎಂದುಕೊಂಡು ಹೋಗಿದ್ದರು. ಆದರೆ, ಹೊಂಡದ ಒಳಗಿಂದ ಶಾಖ ಬಿಡುಗಡೆಯಾಗುತ್ತಿರುವುದನ್ನು ಗಮನಿಸಿ ಗ್ರಾಮಸ್ಥರಿಗೆ ತಿಳಿಸಿದ್ದನು. ಆ ಬಳಿಕ ಗ್ರಾಮಸ್ಥರು ಭಯಭೀತರಾಗಿ ತಿರುಪತ್ತೂರು ಜಿಲ್ಲಾಧಿಕಾರಿ ಅನಂತಕೃಷ್ಣನ್ ಹಾಗೂ ಜೋಲಾರ್‌ಪೇಟೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ತಿಳಿದ ತಕ್ಷಣ ಘಟನಾ ಸ್ಥಳಕ್ಕೆ ಭೇಟಿ ನೀಡಿದ ತಿರುತ್ತೂರು ಜಿಲ್ಲಾಧಿಕಾರಿ ಹಾಗೂ ಪೊಲೀಸರು ಪರಿಶೀಲನೆ ನಡೆಸಿದರು. ಅದಲ್ಲದೆ, ಗುಂಡಿ ಸೃಷ್ಟಿಯಾದ ಸುತ್ತಲೂ ಬೇಲಿ ಹಾಕಿ ಸುರಕ್ಷಿತವಾಗಿ ಇರಿಸುವಂತೆ ತಮ್ಮ ಅಧಿಕಾರಿಗಳಿಗೆ ಸೂಚನೆ ನೀಡಿದರು. ಇದೇ ವೇಳೆ ಸಾರ್ವಜನಿಕರು ಭಯಪಡದಂತೆ ಧೈರ್ಯ ಕೂಡ ತುಂಬಿದರು.
ಘಟನೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಅನಂತಕೃಷ್ಣನ್, ತಿರುಪತ್ತೂರು ಜಿಲ್ಲೆಯ ಆಚಮಂಗಲಂ ಪ್ರದೇಶದಲ್ಲಿ ನಿಗೂಢ ವಸ್ತು ಬಿದ್ದಿದೆ ಎಂಬ ಮಾಹಿತಿ ಮೇರೆಗೆ ಅಧಿಕಾರಿಗಳ ತಂಡ ಬಂದು ನೋಡಿದೆ. ವಸ್ತುವಿನ ಬಗ್ಗೆ ಸದ್ಯಕ್ಕೆ ಯಾವುದೇ ನಿಖರ ಮಾಹಿತಿ ಲಭ್ಯವಾಗಿಲ್ಲ. ನಿಗೂಢ ವಸ್ತು ಯಾವುದೆಂದು ಪತ್ತೆ ಹಚ್ಚುವಂತೆ ತಮಿಳುನಾಡು ವಿಜ್ಞಾನ ಮತ್ತು ತಂತ್ರಜ್ಞಾನ ಕೇಂದ್ರದ ನಿರ್ದೇಶಕರೊಂದಿಗೆ ಮಾತನಾಡಿದ್ದೇವೆ. ಗುಂಡಿಯಿಂದ ಮಣ್ಣು ಮತ್ತು ಬೂದಿಯ ಮಾದರಿಗಳನ್ನು ಚೆನ್ನೈನಲ್ಲಿರುವ ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು. ಅಧ್ಯಯನದ ನಂತರ ಇಲ್ಲಿ ಬಿದ್ದ ನಿಗೂಢ ವಸ್ತು ಉಲ್ಕಾಶಿಲೆಯೇ? ಅಥವಾ ಈ ಕುಳಿ ಯಾವುದಾದರೂ ಗುಡುಗು ಸಿಡಿಲಿನಿಂದ ರೂಪುಗೊಂಡಿದೆಯೇ? ಎಂಬುದು ಬಹಿರಂಗವಾಗಲಿದೆ. ಈ ಕುರಿತು ತನಿಖೆ ನಡೆಸಲು ವೈಜ್ಞಾನಿಕ ಸಂಶೋಧಕರನ್ನು ಶೀಘ್ರದಲ್ಲೇ ಇಲ್ಲಿಗೆ ಕಳುಹಿಸುವುದಾಗಿಯೂ ಹೇಳಿರುವ ಅವರು, ತಮಿಳುನಾಡು ವಿಜ್ಞಾನ ಮತ್ತು ತಂತ್ರಜ್ಞಾನ ಕೇಂದ್ರವೂ ಶೀಘ್ರ ಅಧ್ಯಯನ ನಡೆಸಿ ಮುಂದಿನ ಹಂತದ ಮಾಹಿತಿ ಪ್ರಕಟಿಸುವುದಾಗಿ ಹೇಳಿದೆ. ಹಾಗಾಗಿ ಈ ಬಗ್ಗೆ ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ ಎಂದರು.
ವೈಜ್ಞಾನಿಕ ಸಂಶೋಧನಾ ಕೇಂದ್ರದ ಅಧಿಕಾರಿ ರವಿಕುಮಾರ್ ಮಾತನಾಡಿ, ‘ಈ ಭಾಗದಲ್ಲಿ ಬಿದ್ದ ನಿಗೂಢ ವಸ್ತು ಉಲ್ಕಾ ಶಿಲೆಯಾಗಿರುವ ಅನುಮಾನವಿದ್ದು, ಬೀಳುವ ವೇಗಕ್ಕೆ ಮಣ್ಣು ಬೂದಿಯಾಗಿ ಮಾರ್ಪಟ್ಟಿರಬಹುದು. ಅದೇನೇ ಇರಲಿ ಸೃಷ್ಟಿಯಾದ ಕಂದಕದಿಂದ ಮಣ್ಣು ಮತ್ತು ಬೂದಿಯ ಮಾದರಿಗಳನ್ನು ಚೆನ್ನೈನಲ್ಲಿರುವ ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು. ವರದಿ ಬಳಿಕ ಈ ಬಗ್ಗೆ ಗೊತ್ತಾಗಲಿದೆ. ‘ಮಂಗಳ ಮತ್ತು ಗುರು ಗ್ರಹಗಳ ನಡುವೆ ಪರಿಭ್ರಮಿಸುವ ಕ್ಷುದ್ರಗ್ರಹಗಳು ಸಾಂದರ್ಭಿಕವಾಗಿ ಭೂಮಿಯ ಕಡೆಗೆ ಬೀಳುತ್ತವೆ. ದೊಡ್ಡ ಪ್ರಮಾಣದ ಕ್ಷುದ್ರಗ್ರಹಗಳು ಬಿದ್ದಾಗ ಹೆಚ್ಚು ಹಾನಿ ಉಂಟುಮಾಡುತ್ತವೆ’ ಎಂದು ಹೇಳಿದರು.
ಇದನ್ನೂ ಓದಿ: ಮಧ್ಯರಾತ್ರಿ ಭೂಮಿಗೆ ಅಪ್ಪಳಿಸಿತೇ ಉಲ್ಕಾಶಿಲೆ? ರಾಜಸ್ಥಾನದ ಗಡಿ ಪ್ರದೇಶದಲ್ಲಿ ವಿಸ್ಮಯ - Astronomical Event In Barmer