ಜೈಪುರ(ರಾಜಸ್ಥಾನ): ಕಾಲೇಜುಗಳಲ್ಲಿ ರ‍್ಯಾಗಿಂಗ್ ಮಾಡುವುದು ಅಪರಾಧ. ಆದಾಗ್ಯೂ, ಇಂತಹ ಪ್ರಕರಣಗಳು ಮರುಕಳಿಸುತ್ತಿವೆ. ರಾಜಸ್ಥಾನದ ವೈದ್ಯಕೀಯ ಕಾಲೇಜಿನಲ್ಲಿ ಕಿರಿಯ ಎಂಬಿಬಿಎಸ್ ವಿದ್ಯಾರ್ಥಿಗೆ ಹಿರಿಯ ವಿದ್ಯಾರ್ಥಿಗಳು ರ‍್ಯಾಗಿಂಗ್ ಮಾಡಿದ್ದು, ಆತನ ಕಿಡ್ನಿ ಮತ್ತು ಲಿವರ್ಗೆ ಹಾನಿಯಾಗಿದೆ. ಇದರಿಂದ ಡಯಾಲಿಸಿಸ್ಗೆ ಒಳಗಾಗಿದ್ದಾನೆ. ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಡುಂಗರ್ಪುರ ವೈದ್ಯಕೀಯ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿ ಪ್ರಥಮ್ ವ್ಯಾಸ್ ಎಂಬಾತನನ್ನು ಸೀನಿಯರ್ ವಿದ್ಯಾರ್ಥಿಗಳು ಛೇಡಿಸಿದ್ದಾರೆ. ಬಲವಂತವಾಗಿ 300ಕ್ಕೂ ಅಧಿಕ ಬಸ್ಕಿ (ಸಿಟ್ ಅಪ್) ಹೊಡೆಸಿದ್ದಾರೆ. ಇದರಿಂದಾಗಿ ಪ್ರಥಮ್ನ ಮೂತ್ರಪಿಂಡ ಮತ್ತು ಲಿವರ್ ಮೇಲೆ ಒತ್ತಡ ಬಿದ್ದಿದೆ. ತೀವ್ರ ಹೊಟ್ಟೆನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದಾನೆ. ನಾಲ್ಕು ಬಾರಿ ಡಯಾಲಿಸಿಸ್ ಕೂಡಾ ಮಾಡಲಾಗಿದೆ.
ಅತಿ ಕ್ರೂರವಾಗಿ 300 ಬಾರಿ ಬಸ್ಕಿ ಹೊಡೆಸಿದ್ದರಿಂದ ಕಿಡ್ನಿ ಮತ್ತು ಲಿವರ್ಗೆ ಒತ್ತಡ ಬಿದ್ದು ಸೋಂಕು ಉಂಟಾಗಿದೆ. ನಿತ್ರಾಣಗೊಂಡ ವಿದ್ಯಾರ್ಥಿ ವ್ಯಾಸ್ ಆಸ್ಪತ್ರೆಗೆ ದಾಖಲಾದಾಗ ವೈದ್ಯರು ಡಯಾಲಿಸಿಸ್ಗೆ ಸೂಚಿಸಿದ್ದಾರೆ. ಕಳೆದ ವರ್ಷವಷ್ಟೇ ಈತ ಕಾಲೇಜಿಗೆ ಪ್ರವೇಶ ಪಡೆದಿದ್ದ. ಅಂದಿನಿಂದಲೂ ಹಿರಿಯ ವಿದ್ಯಾರ್ಥಿಗಳು ರ‍್ಯಾಗಿಂಗ್ ಹಾಗು ಇನ್ನಿತರೆ ರೀತಿಯಲ್ಲಿ ಹಿಂಸಿಸಿದ್ದಾರೆ. ಹಲವು ಬಾರಿ ಹಲ್ಲೆ ಕೂಡ ನಡೆದಿದೆ. ಇದರಿಂದ ಕಿರಿಯ ವಿದ್ಯಾರ್ಥಿಗಳು ಒತ್ತಡ ಮತ್ತು ಭಯದಲ್ಲೇ ವ್ಯಾಸಂಗ ಮಾಡಬೇಕಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಆರೋಪಿ ವಿದ್ಯಾರ್ಥಿಗಳು ಅಮಾನತು: ಮೇ 15ರಂದು ಘಟನೆ ನಡೆದಿದೆ. ವಿದ್ಯಾರ್ಥಿ ಪ್ರಥಮ್ ಜೂನ್ 20ರಂದು ದೂರು ದಾಖಲಿಸಿದ್ದಾನೆ. ತನಿಖೆ ನಡೆಸಿದ ಪೊಲೀಸರು ಹಿರಿಯ ವಿದ್ಯಾರ್ಥಿಗಳು ರ‍್ಯಾಗಿಂಗ್ ಮಾಡಿದ್ದು ಖಚಿತವಾಗಿದೆ. ಆರೋಪಿ ವಿದ್ಯಾರ್ಥಿಗಳಾದ ದೇವೇಂದ್ರ ಮೀನಾ, ಅಂಕಿತ್ ಯಾದವ್, ರವೀಂದ್ರ ಕುಲಾರಿಯಾ, ಸುರಜಿತ್ ದಾಬ್ರಿಯಾ, ವಿಶ್ವವೇಂದ್ರ ದಯಾಳ್, ಸಿದ್ದಾರ್ಥ್ ಪರಿಹಾರ್, ಅಮನ್ ರಗೇರಾ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಕಾಲೇಜಿನ ಪ್ರಾಂಶುಪಾಲರು ಎಲ್ಲರನ್ನೂ ಅಮಾನತು ಮಾಡಿದ್ದಾರೆ.
ಈ ಬಗ್ಗೆ 'ಈಟಿವಿ ಭಾರತ್' ಜೊತೆ ಮಾತನಾಡಿರುವ ಸಂತ್ರಸ್ತ ವಿದ್ಯಾರ್ಥಿಯ ತಂದೆ, "ನನ್ನ ಮಗನ ಜೊತೆಗೆ 50ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳು ರ‍್ಯಾಗಿಂಗ್ ಮಾಡಿದ್ದಾರೆ. ಟಾರ್ಚರ್‌ನಿಂದ ಹಲವರು ಮಾನಸಿಕ ಮತ್ತು ದೈಹಿಕವಾಗಿ ನೊಂದಿದ್ದಾರೆ. ತನ್ನ ಮಗನಿಗೆ ಕಿಡ್ನಿ, ಲಿವರ್‌ನಲ್ಲಿ ಸೋಂಕು ಉಂಟಾಗಿದೆ. ಆತ ಕಾಲೇಜಿಗೆ ಮತ್ತೆ ಹೋಗುತ್ತಿದ್ದಾನಾದರೂ, ಭಯದಲ್ಲೇ ವ್ಯಾಸಂಗ ಮಾಡಬೇಕಿದೆ. ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು" ಎಂದು ಆಗ್ರಹಿಸಿದ್ದಾರೆ.
ಗಮನಿಸಿ: ರಾಷ್ಟ್ರೀಯ ರ‍್ಯಾಗಿಂಗ್ ವಿರೋಧಿ ಕಾರ್ಯಕ್ರಮ ಏಜಿನ್ಸಿಯಾದ ಸೆಂಟರ್ ಫಾರ್ ಯೂತ್ (C4Y) ಇಂತಹ ಪ್ರಕರಣಗಳ ವಿಚಾರಣೆ ನಡೆಸುತ್ತದೆ. ಕಾಲೇಜಿನಲ್ಲಿ ರ‍್ಯಾಗಿಂಗ್ ಕಂಡುಬಂದಲ್ಲಿ ಸಂಸ್ಥೆಯ ಟೋಲ್ ಫ್ರೀ ಸಂಖ್ಯೆ 1800-180-5522 ಮತ್ತು ಇ-ಮೇಲ್: helpline@antiragging.inಗೆ ಮಾಹಿತಿ/ದೂರು ನೀಡಬಹುದು.
ಇದನ್ಣೂ ಓದಿ: ಜುಲೈ 1 ರಿಂದ ಹೊಸ ಅಪರಾಧ ಕಾನೂನುಗಳು ಜಾರಿ: 40 ಲಕ್ಷ ಜನರಿಂದ ತರಬೇತಿ - new criminal laws