ಹೈದರಾಬಾದ್: ಸಿಕಂದರಾಬಾದ್‌ನ ಕಿಮ್ಸ್ ಆಸ್ಪತ್ರೆಯ ವೈದ್ಯರು ದೇಶದ ಮೊದಲ ಕನಿಷ್ಠ ಆಕ್ರಮಣಶೀಲ ಶಸ್ತ್ರಚಿಕಿತ್ಸೆ (MIS) ಮೂಲಕ ಯಕೃತ್ತಿನ ಕಸಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದು, ಅಭೂತಪೂರ್ವ ವೈದ್ಯಕೀಯ ಸಾಧನೆ ಮಾಡಿದ್ದಾರೆ.
ಯಕೃತ್ತಿನ ಸಿರೋಸಿಸ್ನಿಂದ ಬಳಲುತ್ತಿದ್ದ 63 ವರ್ಷದ ವ್ಯಕ್ತಿ, ಶಸ್ತ್ರಚಿಕಿತ್ಸೆಗೆ ಒಳಗಾಗಿ ಕೇವಲ ಐದು ದಿನಗಳ ನಂತರ ಡಿಸ್ಚಾರ್ಜ್ ಆಗಿದ್ದಾರೆ. ವೈದ್ಯಕೀಯ ಕ್ಷೇತ್ರದಲ್ಲಿ ಈ ಮೂಲಕ ಹೊಸ ಮೈಲಿಗಲ್ಲನ್ನು ಕಿಮ್ಸ್ ವೈದ್ಯರು ನಿರ್ಮಿಸಿದ್ದಾರೆ.
ಹೆಪಟೊಬಿಲಿಯರಿ ಪ್ಯಾಂಕ್ರಿಯಾಸ್ನ ಹಿರಿಯ ಸಲಹೆಗಾರ ಮತ್ತು ಲಿವರ್ ಟ್ರಾನ್ಸ್‌ಪ್ಲಾಂಟ್ ಸರ್ಜನ್, ಡಾ. ಸಚಿನ್ ಡಾಗಾ, ಶಸತ್ರಚಿಕಿತ್ಸೆಯ ತಂಡದ ನೇತೃತ್ವ ವಹಿಸಿಕೊಂಡಿದ್ದರು. ಈ ಬಗ್ಗೆ ಮಾತನಾಡಿದ ಅವರು, "ಸಾಂಪ್ರದಾಯಿಕ ಯಕೃತ್ತಿನ ಕಸಿ ಶಸ್ತ್ರಚಿಕಿತ್ಸೆಗಳಿಗೆ ದೊಡ್ಡ ಮಟ್ಟ ಶಸ್ತ್ರಚಿಕಿತ್ಸೆಯ ಅಗತ್ಯವಿರುತ್ತದೆ. ಆದರೆ ಈ ಹೊಸ ವಿಧಾನದಲ್ಲಿ ಕನಿಷ್ಠ ಆಕ್ರಮಣಶೀಲ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಈ ಶಸ್ತ್ರ ಚಿಕಿತ್ಸೆ ಮಾಡುವುದರಿಂದ ಸ್ನಾಯುವಿಗಾಗುವ ಹಾನಿ ತಪ್ಪುತ್ತದೆ. ಮತ್ತು ಚೇತರಿಕೆಯ ಸಮಯ ಕೂಡ ಗಮನಾರ್ಹವಾಗಿ ವೇಗವಾಗಿರುತ್ತದೆ" ಎಂದು ಅವರು ವಿವರಿಸಿದರು.
"ಸಿರೋಸಿಸ್ ರೋಗಿಗಳಿಗೆ ಯಕೃತ್ತಿನ ಕಸಿ ಸಾಮಾನ್ಯವಾಗಿ ಉತ್ತಮ ಚಿಕಿತ್ಸಾ ಆಯ್ಕೆಯಾಗಿದೆ. ಆದರೆ ಸಾಂಪ್ರದಾಯಿಕ ಶಸ್ತ್ರಚಿಕಿತ್ಸೆಗಳು ದೊಡ್ಡ ಮಟ್ಟದ ನೋವು, ಅಂಗಾಂಶಗಳ ಛೇದನದ ಅವಶ್ಯಕತೆ ಇರುವ ಕಾರಣದಿಂದಾಗಿ ಚೇತರಿಕೆಗೆ ದೀರ್ಘ ಅವಧಿ ಬೇಕಾಗುತ್ತದೆ. ಈ ಕನಿಷ್ಠ ಆಕ್ರಮಣಶೀಲ ಶಸ್ತ್ರಚಿಕಿತ್ಸಾ ವಿಧಾನದಿಂದ, ರೋಗಿಗಳು ಕಡಿಮೆ ನೋವು ಮತ್ತು ಗುರುತುಗಳ ಅಪಾಯ ಇಲ್ಲದೆಯೇ ಹೆಚ್ಚು ವೇಗವಾಗಿ ಚೇತರಿಸಿಕೊಳ್ಳಬಹುದು." ಎನ್ನುತ್ತಾರೆ ಡಾ. ಡಾಗಾ.
ಎಂಐಎಸ್ ತಂತ್ರಗಳನ್ನು ಅಳವಡಿಸಿಕೊಂಡು 1991 ರಲ್ಲಿ ಮೊದಲ ಬಾರಿಗೆ ಯಕೃತ್ತಿನ ಶಸ್ತ್ರಚಿಕಿತ್ಸೆ ಮಾಡಲಾಯಿತು. ಆದರೆ ಕಸಿ ಮಾಡುವಿಕೆಗೆ ಸಂಬಂಧಿಸಿದಂತೆ ಅವುಗಳ ಅಪ್ಲಿಕೇಶನ್ ಜೀವಂತ ದಾನಿ ಕಾರ್ಯವಿಧಾನಕ್ಕೆ ಮಾತ್ರ ಸೀಮಿತವಾಗಿತ್ತು. ಇದು ಸಾಂಪ್ರದಾಯಿಕ ಶಸ್ತ್ರಚಿಕಿತ್ಸೆಗಿಂತ ಸುರಕ್ಷಿತ ಮತ್ತು ಹೆಚ್ಚು ಸಹಿಸಿಕೊಳ್ಳಬಲ್ಲದು ಮತ್ತು ರೋಗಿಗಳಲ್ಲಿ ಕಡಿಮೆ ನೋವು, ಗುರುತು ಮತ್ತು ಅಂಗಾಂಶ ಹಾನಿಯನ್ನು ಕಡಿಮೆ ಮಾಡುವ ಚಿಕಿತ್ಸೆ ಆಗಿದೆ.