ನವದೆಹಲಿ: ಕೇಂದ್ರಾಡಳಿತ ಪ್ರದೇಶ ಸೇರಿ 8 ರಾಜ್ಯಗಳ ಒಟ್ಟು 49 ಲೋಕಸಭಾ ಕ್ಷೇತ್ರಗಳಲ್ಲಿ ಇಂದು 5ನೇ ಹಂತದ ಮತದಾನ ಸುಗಮವಾಗಿ ನಡೆಯುತ್ತಿದೆ. ಇದೇ ವೇಳೆ, ಒಡಿಶಾದ 35 ವಿಧಾನಸಭಾ ಕ್ಷೇತ್ರಗಳಿಗೂ ಚುನಾವಣೆ ನಡೆಯುತ್ತಿದ್ದು, ಮತದಾರrರು ಮತಗಟ್ಟೆಯತ್ತ ಆಗಮಿಸಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸುತ್ತಿದ್ದಾರೆ. ಉದ್ಯಮಿಗಳು, ಸೆಲೆಬ್ರಿಟಿಗಳು, ರಾಜಕೀಯ ಮುಖಂಡರು ಸರದಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು.
ಮತದಾನ ಮಾಡಿ ಮಾತನಾಡಿದ ಕಾಂಗ್ರೆಸ್ ನಾಯಕ, ಅಮೇಥಿ ಲೋಕಸಭೆಯ ಕ್ಷೇತ್ರದ ಅಭ್ಯರ್ಥಿ ಕೆ.ಎಲ್. ಶರ್ಮಾ ಅವರು ತಮ್ಮ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದರು. ''ಮತದಾರರ ದಿಕ್ಕುತಪ್ಪಿಸಲು ಸಾಧ್ಯವಿಲ್ಲ. ಜನರ ಮನಸ್ಸಿನಲ್ಲಿ ಏನಿದೆಯೋ, ಅದರಂತೆ ಅವರು ಮತ ಹಾಕುತ್ತಾರೆ'' ಎಂದರು.
ಉತ್ತರ ಪ್ರದೇಶದ ಮಾಜಿ ಸಿಎಂ ಮತ್ತು ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಲಕ್ನೋದಲ್ಲಿ ಮತ ಚಲಾಯಿಸಿದರು. ಮತದಾನದ ನಂತರ ಮಾತನಾಡಿದ ಅವರು, ಜನರು ಮನೆಯಿಂದ ಹೊರಗೆ ಬಂದು ತಮ್ಮ ಪ್ರಜಾಸತ್ತಾತ್ಮಕ ಹಕ್ಕನ್ನು ಚಲಾಯಿಸುವಂತೆ ಅವರು ಮನವಿ ಮಾಡಿದರು.
ಎಲ್‌ಜೆಪಿ (ರಾಮ್ ವಿಲಾಸ್) ಮುಖ್ಯಸ್ಥ ಮತ್ತು ಹಾಜಿಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಚಿರಾಗ್ ಪಾಸ್ವಾನ್, ''ನನ್ನ ತಂದೆಗೆ ಸಿಗುತ್ತಿದ್ದ ಪ್ರೀತಿ ನನಗೂ ಸಿಗುತ್ತಿದೆ. ಈ ಚುನಾವಣೆಯಲ್ಲಿ ಎನ್ಡಿಎ 400 ಸ್ಥಾನ ದಾಟಲಿದೆ'' ಎಂದು ಮತದಾನದ ಬಳಿಕ ವಿಶ್ವಾಸ ವ್ಯಕ್ತಪಡಿಸಿದರು.
ಹಾಲಿ ಸಂಸದ ಮತ್ತು ಲಕ್ನೋ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯೂ ಆದ ಸಚಿವ ರಾಜನಾಥ್ ಸಿಂಗ್ ಲಕ್ನೋದ ಮತಗಟ್ಟೆಗೆ ತೆರಳಿ ಮತದಾನ ಮಾಡಿದರು. ಮತ್ತೊಬ್ಬ ಕೇಂದ್ರ ಸಚಿವರೂ ಆದ, ಮುಂಬೈ ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿಯೂಷ್ ಗೋಯಲ್ ಮುಂಬೈನ ಮತದಾನ ಕೇಂದ್ರದಲ್ಲಿ ವೋಟ್ ಮಾಡಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಪ್ರಜಾಪ್ರಭುತ್ವದ ಈ ಹಬ್ಬದಲ್ಲಿ ಪಾಲ್ಗೊಳ್ಳುವಂತೆ ಮತದಾರರಲ್ಲಿ ಮನವಿ ಮಾಡಿದರು. ಮುಂಬೈ ಉತ್ತರ ಕ್ಷೇತ್ರದಿಂದ ಕಾಂಗ್ರೆಸ್ ಭೂಷಣ್ ಪಾಟೀಲ್ ಅವರನ್ನು ಕಣಕ್ಕಿಳಿಸಿದೆ.
ಹಾಲಿ ಸಂಸದೆ ಮತ್ತು ಅಮೇಥಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಸ್ಮೃತಿ ಇರಾನಿ ಮತ ಚಲಾಯಿಸಿ ಮಾತನಾಡಿ, ''ಇಂದು ನಾನು ನನ್ನ ಗ್ರಾಮ ಗೌರಿಗಂಜ್‌ನಲ್ಲಿ ವಿಕಸಿತ ಭಾರತ ಎಂಬ ಸಂಕಲ್ಪದೊಂದಿಗೆ ಮತ ಚಲಾಯಿಸಿರುವುದು ಖುಷಿ ತಂದಿದೆ. ದೇಶದ ಉತ್ತಮ ಭವಿಷ್ಯಕ್ಕಾಗಿ ಎಲ್ಲರೂ ಮತ ಹಾಕಬೇಕು'' ಎಂದು ಮನವಿ ಮಾಡಿದರು. ಈ ಕ್ಷೇತ್ರದಿಂದ ಕಾಂಗ್ರೆಸ್ ಕೆ.ಎಲ್. ಶರ್ಮಾ ಅವರನ್ನು ಕಣಕ್ಕಿಳಿಸಿದೆ.
ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಅವರು ಥಾಣೆಯ ಮತಗಟ್ಟೆಯಲ್ಲಿ ಮತದಾನ ಮಾಡಿದರು. ಹಾಲಿ ಸಂಸದ ಬ್ರಿಜ್ ಭೂಷಣ್ ಸಿಂಗ್ ಗುರುತುಪಡಿಸಿದ ಮತಗಟ್ಟೆಯಲ್ಲಿ ಮತದಾನ ಮಾಡಿದರೆ, ನಟಿ ಮತ್ತು ಸಂಸದೆ ಹೇಮಾ ಮಾಲಿನಿ, ಅವರ ಪುತ್ರಿ ಮತ್ತು ನಟಿ ಇಶಾ ಡಿಯೋಲ್ ಮುಂಬೈನ ಮತಗಟ್ಟೆಯಲ್ಲಿ ಮತದಾನ ಮಾಡಿದರು. ಆರ್‌ಬಿಐ ಡೆಪ್ಯುಟಿ ಗವರ್ನರ್ ಮೈಕೆಲ್ ಪಾತ್ರಾ ಅವರು ಮುಂಬೈನ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.
ಕೇಂದ್ರ ಸಚಿವೆ ಮತ್ತು ಫತೇಪುರ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಾಧ್ವಿ ನಿರಂಜನ್ ಜ್ಯೋತಿ ಅವರು ಹಮೀರ್‌ಪುರದ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.
ಕೇಂದ್ರ ಸಚಿವೆ ಮತ್ತು ಫತೇಪುರ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಾಧ್ವಿ ನಿರಂಜನ್ ಜ್ಯೋತಿ ಅವರು ಹಮೀರ್‌ಪುರದ ಮತಗಟ್ಟೆಯಲ್ಲಿ ಮತ ಚಲಾಯಿಸಿ ಮಾತನಾಡಿ, ರಾಷ್ಟ್ರೀಯ ಹಬ್ಬದಲ್ಲಿ ಭಾಗವಹಿಸಲು ಮತ್ತು ದೇಶದ ಆಧ್ಯಾತ್ಮಿಕ ಮತ್ತು ಧಾರ್ಮಿಕ ಪರಂಪರೆಯ ಸಂರಕ್ಷಣೆಗಾಗಿ ಮತ ಚಲಾಯಿಸುವಂತೆ ಜನರಿಗೆ ಮನವಿ ಮಾಡಿದರು.
ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಅವರ ಪುತ್ರ ಆದಿತ್ಯ ಠಾಕ್ರೆ ಮತ್ತು ಪತ್ನಿ ರಶ್ಮಿ ಠಾಕ್ರೆ ಅವರೊಂದಿಗೆ ಮುಂಬೈನ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಮತದಾನ ಮಾಡಿದ ನಂತರ ಆದಿತ್ಯ ಠಾಕ್ರೆ ಸಾಮಾಜಿಕ ಜಾಲತಾಣವಾದ ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯಿಸಿ, "ಹೊರಹೋಗಿ ಮತ್ತು ಮತ ಚಲಾಯಿಸಿ. ಭಾರತಕ್ಕಾಗಿ ಮತದಾನ ನೀಡಿ'' ಎಂದು ಹೇಳಿದ್ದಾರೆ.
ಇದಕ್ಕೂ ಮುನ್ನ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಥಾಣೆಯ ಮತಗಟ್ಟೆಯಲ್ಲಿ ಮತದಾನ ಮಾಡಿದರು.