ನವದೆಹಲಿ: ಕನಿಷ್ಠ ಬೆಂಬಲ ಬೆಲೆಗೆ ಆಗ್ರಹಿಸಿ ಪಂಜಾಬ್ ರೈತರು ಆರಂಭಿಸಿರುವ ದೆಹಲಿ ಚಲೋ ಹೋರಾಟ ಎರಡನೇ ಬಾರಿಗೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.
ಶನಿವಾರ ನಿಲ್ಲಿಸಲಾಗಿದ್ದ ಹೋರಾಟವನ್ನು ಇಂದು ಮರು ಆರಂಭಿಸಲಾಯಿತು. ಆದರೆ, ಶಂಭು ಗಡಿಯಲ್ಲಿ ಪೊಲೀಸರು ಅಶ್ರುವಾಯು ಸಿಡಿಸಿದ್ದು ಹಲವು ರೈತರು ಗಾಯಗೊಂಡರು.
ಹರಿಯಾಣ ಮತ್ತು ಪಂಜಾಬ್‌ನ ಗಡಿ ದಾಟಿ ದೆಹಲಿಗೆ ತೆರಳಲು ರೈತರು ಯತ್ನಿಸಿದ್ದಾರೆ. ಜನರನ್ನು ಚದುರಿಸಲು ಭದ್ರತಾ ಸಿಬ್ಬಂದಿ ಸಿಡಿಸಿದ ಅಶ್ರುವಾಯು ಶೆಲ್‌ಗಳಿಂದ ರೈತರು ಗಾಯಗೊಂಡರು. ಇದರಿಂದ ಸ್ಥಳದಲ್ಲಿ ಕೋಲಾಹಲ ಉಂಟಾದ್ದರಿಂದ ದೆಹಲಿ ಪಾದಯಾತ್ರೆಗೆ ತಾತ್ಕಾಲಿಕ ತಡೆ ನೀಡಲಾಗಿದೆ.
"ರೈತರು ದೆಹಲಿಗೆ ತೆರಳುತ್ತಿದ್ದಾಗ ಪೊಲೀಸರು ಸಿಡಿಸಿದ ಶೆಲ್‌ಗಳಿಂದ ಎಂಟು ರೈತರು ಗಾಯಗೊಂಡಿದ್ದಾರೆ. ಅವರನ್ನು ಚಂಡೀಗಢದ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸ್ನಾತಕೋತ್ತರ ಸಂಸ್ಥೆಗೆ (PGIMER) ದಾಖಲಿಲಾಗಿದೆ. ಘಟನೆಯ ಬಳಿಕ ಹೋರಾಟವನ್ನು ಇಂದಿಗೆ ನಿಲ್ಲಿಸಲಾಗಿದೆ" ಎಂದು ರೈತ ಮುಖಂಡ ಸರ್ವಾನ್ ಸಿಂಗ್ ಪಂಧೇರ್ ತಿಳಿಸಿದ್ದಾರೆ.
"ರೈತ ಸಂಘಟನೆಗಳಾದ ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ಸೋಮವಾರ ಸಭೆ ನಡೆಸಲಿದ್ದು, ಬಳಿಕ ಮುಂದಿನ ಹೋರಾಟದ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುವುದು" ಎಂದು ಪಂಧೇರ್ ಹೇಳಿದ್ದಾರೆ.
ಬಿಗಿ ಪೊಲೀಸ್ ಭದ್ರತೆ: ಹಲವು ಬೇಡಿಕೆಗಳನ್ನು ಮಂಡಿಸಿ ಹರಿಯಾಣ ಮತ್ತು ಪಂಜಾಬ್ ರೈತರು ಕಳೆದ 9 ತಿಂಗಳಿನಿಂದ ಶಂಭು ಗಡಿಯಲ್ಲಿ ಹೋರಾಟ ನಡೆಸುತ್ತಿದ್ದಾರೆ. ಇದರಲ್ಲಿ 100 ಜನರು ದೆಹಲಿ ಚಲೋ ಹೋರಾಟ ಆರಂಭಿಸಿದ್ದಾರೆ. ಆದರೆ, ಇದಕ್ಕೆ ಭದ್ರತಾ ಸಿಬ್ಬಂದಿ ಅವಕಾಶ ನೀಡುತ್ತಿಲ್ಲ. ಪಾದಯಾತ್ರೆ ದೆಹಲಿಗೆ ಬರಲು ಸರ್ಕಾರದಿಂದ ಅನುಮತಿ ಪಡೆದರಷ್ಟೇ ಬಿಡುವುದಾಗಿ ಸೂಚಿಸಿದ್ದಾರೆ.
ಪೊಲೀಸರ ನಿರ್ದೇಶನಗಳನ್ನು ಮೀರಿ ಬ್ಯಾರಿಕೇಡ್ಗಳನ್ನು ದಾಟಿ ಬರುತ್ತಿರುವ ರೈತರ ಮೇಲೆ ಭದ್ರತಾ ಸಿಬ್ಬಂದಿ ಅಶ್ರುವಾಯು, ಜಲಫಿರಂಗಿ ಬಳಸಿ ತಡೆಯುತ್ತಿದ್ದಾರೆ. ಶನಿವಾರವೂ ಬಲವಂತವಾಗಿ ಪೊಲೀಸ್ ಪಹರೆ ದಾಟಲು ಪ್ರಯತ್ನಿಸಿದ ರೈತರ ಮೇಲೆ ಅಶ್ರುವಾಯು ಸಿಡಿಸಲಾಗಿತ್ತು. ಈ ವೇಳೆ ಹಲವರು ಗಾಯಗೊಂಡಿದ್ದರು.
"ನಮಗೆ ಶಾಂತಿಯುತವಾಗಿ ದೆಹಲಿಗೆ ಹೋಗಲು ಅವಕಾಶ ನೀಡಬೇಕು. ನಮ್ಮ ಬೇಡಿಕೆಗಳ ಬಗ್ಗೆ ಸರ್ಕಾರ ಮಾತುಕತೆಗೆ ಬರಬೇಕು. ಇಲ್ಲವಾದಲ್ಲಿ ದೆಹಲಿಯಲ್ಲಿ ಪ್ರತಿಭಟನೆಗೆ ಜಾಗ ನೀಡಬೇಕು. ಅಂಬಾಲಾದಲ್ಲಿ ಇಂಟರ್‌ನೆಟ್ ಸೇವೆ ಮರುಸ್ಥಾಪಿಸಬೇಕು" ಎಂದು ರೈತ ಮುಖಂಡ ಶರ್ವಾನ್ ಸಿಂಗ್ ಪಂಧೇರ್ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಮಹಾರಾಷ್ಟ್ರ ಸಿಎಂ ಪ್ರಮಾಣವಚನ ಕಾರ್ಯಕ್ರಮದಲ್ಲಿ ಕಳ್ಳರ ಹಾವಳಿ; ಚಿನ್ನ, ಮೊಬೈಲ್, ಹಣ ಮಾಯ