ನವದೆಹಲಿ: ಅನಾರೋಗ್ಯಕ್ಕೀಡಾಗಿರುವ ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮುಖ್ಯಸ್ಥರಾದ ಮಹಂತ್ ನೃತ್ಯ ಗೋಪಾಲ್ ದಾಸ್ ಸಾವನ್ನಪ್ಪಿದ್ದಾರೆ ಎಂಬ ಸುಳ್ಳು ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ಟ್ರಸ್ಟ್ ಅಧಿಕೃತ ಹೇಳಿಕೆ ನೀಡಿದ್ದು, "ಮಹಾಂತರು ಆರೋಗ್ಯವಾಗಿದ್ದಾರೆ, ಚೇತರಿಸಿಕೊಳ್ಳುತ್ತಿದ್ದಾರೆ" ಎಂದು ತಿಳಿಸಿದೆ.
ಮಹಂತ್ ಗೋಪಾಲ್ ದಾಸರು ಆಸ್ಪತ್ರೆಯಲ್ಲಿ ವೆಂಟಿಲೇಟರ್ನಲ್ಲಿ ಮಲಗಿದ್ದು, ಅವರಿಗೆ ಪ್ರಧಾನಿ ನರೇಂದ್ರ ಮೋದಿ ನಮಸ್ಕರಿಸುತ್ತಿರುವ ಚಿತ್ರವನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ವೈರಲ್ ಆದ ಚಿತ್ರದ ಫ್ಯಾಕ್ಟ್ ಚೆಕ್ ನಡೆಸಲಾಗಿದ್ದು, ನಕಲಿ ಚಿತ್ರ ಮತ್ತು ಸುದ್ದಿ ಸುಳ್ಳೆಂದು ಸಾಬೀತಾಗಿದೆ.
ಫೇಸ್‌ಬುಕ್ ಬಳಕೆದಾರರೊಬ್ಬರು ಫೋಟೋ ಸಮೇತ ಪೋಸ್ಟ್ ಹಂಚಿಕೊಂಡು, 'ಅತ್ಯಂತ ದುಃಖದ ಸುದ್ದಿ, ಶ್ರೀರಾಮ ಮಂದಿರ ಟ್ರಸ್ಟ್‌ನ ಮುಖ್ಯಸ್ಥರಾದ ಮಹಂತ್ ನೃತ್ಯ ಗೋಪಾಲ್ ದಾಸ್ ಅವರು ಕೊನೆಯುಸಿರೆಳೆದರು. ಓಂ ಶಾಂತಿ, ಓಂ ಶಾಂತಿ' ಎಂದು ಬರೆದುಕೊಂಡಿದ್ದಾರೆ.
ಪಶ್ಚಿಮ ಬಂಗಾಳದ ರಾಮಕೃಷ್ಣಾಶ್ರಮದ ಸಂತ ಸ್ವಾಮಿ ಸ್ಮರಣಾನಂದ ಮಹಾರಾಜ್ ಅವರು ಅನಾರೋಗ್ಯಕ್ಕೀಡಾದ ವೇಳೆಯ ಚಿತ್ರ ಇದಾಗಿದೆ. ಈ ವರ್ಷದ ಮಾರ್ಚ್ನಲ್ಲಿ ಕೋಲ್ಕತ್ತಾದ ಆಸ್ಪತ್ರೆಯಲ್ಲಿ ಅವರನ್ನು ದಾಖಲಿಸಿದಾಗ ಮೋದಿ ಭೇಟಿ ನೀಡಿದ್ದರು. ಈ ವೇಳೆ ಅವರು ಸಂತರಿಗೆ ನಮಸ್ಕರಿದ್ದರು. ಚಿತ್ರದಲ್ಲಿ ಮುಖವನ್ನು ಮಸುಕಾಗಿಸಿ ಮಹಂತ್ ಗೋಪಾಲ್ ದಾಸರು ಕೊನೆಯುಸಿರೆಳೆದಿದ್ದಾರೆ ಎಂದು ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.
श्री राम जन्मभूमि तीर्थ क्षेत्र न्यास के माननीय अध्यक्ष पूज्य महंत श्री नृत्यगोपाल दासजी महाराज के स्वास्थ्य के विषय मे आधिकारिक वक्तव्य
— Shri Ram Janmbhoomi Teerth Kshetra (@ShriRamTeerth) October 1, 2024
Statement regarding the health of the Honorable President of Shri Ram Janmabhoomi Teerth Kshetra Trust, Pujya Mahant Shri Nritya Gopal Das Ji… pic.twitter.com/rmpAzUyybc
ಮಹಾಂತರು ಆರೋಗ್ಯವಾಗಿದ್ದಾರೆ: ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಸುದ್ದಿಯನ್ನು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಮಾಧ್ಯಮ ವಕ್ತಾರ ಶರದ್ ಶರ್ಮಾ ಅಲ್ಲಗಳೆದಿದ್ದಾರೆ. ಗೋಪಾಲದಾಸರು ಆರೋಗ್ಯವಾಗಿದ್ದಾರೆ. ವದಂತಿಗಳು ಕಳವಳಕಾರಿಯಾಗಿವೆ. ರಾಮ ಭಕ್ತರು ಇಂತಹ ತಪ್ಪು ಮಾಹಿತಿಗೆ ಗಮನ ಕೊಡಬೇಡಿ. ಮಹಂತರ ಆರೋಗ್ಯ ಸುಧಾರಿಸುತ್ತಿದೆ. ಅವರು ಅಯೋಧ್ಯೆಯ ಮಣಿ ರಾಮ್ ದಾಸ್ ಚವಾನಿಯಲ್ಲಿ ತಂಗಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಅಧಿಕೃತ 'ಎಕ್ಸ್' ಖಾತೆಯಲ್ಲೂ ಗೋಪಾಲದಾಸರ ಆರೋಗ್ಯದ ಕುರಿತು ಹೇಳಿಕೆ ಬಿಡುಗಡೆ ಮಾಡಲಾಗಿದೆ. ವೈರಲ್ ಆಗುತ್ತಿರುವ ಚಿತ್ರವು ಸುಳ್ಳಾಗಿದೆ. ಮಹಂತರು ಆರೋಗ್ಯವಾಗಿದ್ದಾರೆ ಎಂದು ತಿಳಿಸಿದೆ.
ಇದನ್ನೂ ಓದಿ: ರಾಧಾ-ಕೃಷ್ಣರ ಮೂರ್ತಿ ಕದ್ದ ಕಳ್ಳನಿಗೆ ಸಂಕಷ್ಟ: ದೇಗುಲದೆದುರು ವಿಗ್ರಹ ತಂದಿಟ್ಟ - Radha Krishna Idol Theft Case