ಕಾಸರಗೋಡು: 7.5 ಕೋಟಿ ರೂ. ಮೌಲ್ಯದ ಮಾರುಕಟ್ಟೆಯಿಂದ ಹಿಂಪಡೆದಿರುವ 2000 ರೂಪಾಯಿ ಮುಖಬೆಲೆಯ ನಕಲಿ ನೋಟುಗಳನ್ನು ಗುರುವಾರ ಕಾಸರಗೋಡಿನ ಅಂಬಲತ್ತರದಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಂಬಲತ್ತರ ಪರಪಳ್ಳಿ ಗುರುಪುರಂದಲ್ಲಿರುವ ಬಾಡಿಗೆ ಮನೆಯೊಂದರಲ್ಲಿ ನಕಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಂಬಲತ್ತರ ಪೊಲೀಸರಿಗೆ ದೊರೆತ ರಹಸ್ಯ ಮಾಹಿತಿ ಮೇರೆಗೆ ಬುಧವಾರ ಸಂಜೆ ತಪಾಸಣೆ ನಡೆಸಿ, ಪರಪಳ್ಳಿ ಗುರುಪುರಂನಲ್ಲಿರುವ ಬಾಡಿಗೆ ಮನೆಯಿಂದ ಅಪಾರ ಪ್ರಮಾಣದ ನಕಲಿ ನೋಟುಗಳನ್ನು ವಶಪಡಿಸಕೊಳ್ಳಲಾಗಿದೆ.
ಪರಪಳ್ಳಿಯ ಬಾಬುರಾಜ್ ಎಂಬವರಿಗೆ ಸೇರಿದ ಮನೆ ಇದಾಗಿದ್ದು, ಪಾಣತ್ತೂರು ಪಣತ್ತಡಿಯ ಅಬ್ದುಲ್ ರಝಾಕ್ ಎಂಬವರು ಈ ಮನೆಯಲ್ಲಿ ಬಾಡಿಗೆಗೆ ಇದ್ದಾರೆ. ನೋಟುಗಳನ್ನು ಮನೆಯ ಪೂಜಾ ಕೊಠಡಿ ಹಾಗೂ ಹಾಲ್ನಲ್ಲಿ ಚೀಲಗಳಲ್ಲಿ ಇರಿಸಲಾಗಿತ್ತು. ಪೂಜಾ ಕೊಠಡಿಯ ಪರಿಶೀಲನೆ ವೇಳೆ ಹೆಚ್ಚಿನ ನೋಟುಗಳು ಪತ್ತೆಯಾಗಿವೆ.
ಪೊಲೀಸರು ಅಬ್ದುಲ್ ರಝಾಕ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದರೂ, ಮೊಬೈಲ್ ಸ್ವಿಚ್ಡ್ ಆಫ್ ಬಂದಿತ್ತು. ಕಳೆದ ಎರಡು ದಿನಗಳಿಂದ ಆರೋಪಿ ಈ ಪ್ರದೇಶದಲ್ಲಿ ಇರಲಿಲ್ಲ ಎಂದು ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಆರೋಪಿ ಇತ್ತೀಚೆಗೆ ಇಲ್ಲಿ ಬಾಡಿಗೆಗೆ ಬಂದಿದ್ದು, ಹಾಗಾಗಿ ಈತನ ಬಗ್ಗೆ ಸ್ಥಳೀಯರಿಗೆ ಹೆಚ್ಚಿನ ಮಾಹಿತಿ ಇಲ್ಲ ಎಂದು ಪೊಲೀಸರು ಮಾಹಿತಿ ತಿಳಿಸಿದ್ದಾರೆ.
ಆದರೆ, ಆರೋಪಿಯು ಈ ಪ್ರದೇಶದಲ್ಲಿ ವಿವಿಧ ಕಾರ್ಯಕ್ರಮಗಳಿಗೆ ಅಪಾರ ಪ್ರಮಾಣದ ಹಣವನ್ನು ದೇಣಿಗೆಯಾಗಿ ನೀಡಿ ಸ್ಥಳೀಯರೊಂದಿಗೆ ಸ್ನೇಹ ಬೆಳೆಸಲು ಯತ್ನಿಸಿದ್ದರು ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ ಎಂದು ವರದಿಯಾಗಿದೆ. ಆರೋಪಿಯ ಪತ್ತೆಗಾಗಿ ಪೊಲೀಸರು ತೀವ್ರ ಶೋಧ ಆರಂಭಿಸಿದ್ದಾರೆ.