ನವದೆಹಲಿ: ದೇಶದ ಸ್ವಾತಂತ್ರ್ಯ ಚಳವಳಿಗೆ ಕಾಂಗ್ರೆಸ್ ಕೊಡುಗೆ ನೀಡಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಶ್ಲಾಘಿಸಿರುವ ವಿಡಿಯೋ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದನ್ನು ಇತ್ತೀಚಿನ ಹೇಳಿಕೆ ಎಂಬಂತೆ ಬಿಂಬಿಸಲಾಗುತ್ತಿದೆ. ಆದರೆ, 2018ರಲ್ಲಿ ಭಾಗವತ್ ಮಾತನಾಡಿದ ಹಳೆಯ ವಿಡಿಯೋ ಇದಾಗಿದೆ. ಈಗ ಮತ್ತೆ ಇದೇ ವಿಡಿಯೋ ಹಂಚಿಕೊಂಡು ತಪ್ಪುದಾರಿಗೆ ಎಳೆಯಲಾಗುತ್ತಿದೆ ಎಂದು ಸುದ್ದಿಸಂಸ್ಥೆ ಪಿಟಿಐ ಫ್ಯಾಕ್ಟ್ ಚೆಕ್ನಲ್ಲಿ ದೃಢಪಟ್ಟಿದೆ.
ಮೇ 22ರಂದು ಫೇಸ್‌ಬುಕ್ ಬಳಕೆದಾರರು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಹೇಳಿಕೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ದೇಶದ ಸ್ವಾತಂತ್ರ್ಯ ಚಳವಳಿಗೆ ನೀಡಿದ ಕೊಡುಗೆಗಾಗಿ ಕಾಂಗ್ರೆಸ್ ಪಕ್ಷವನ್ನು ಶ್ಲಾಘಿಸುವುದನ್ನು ಕೇಳಬಹುದು. ಈ ವಿಡಿಯೋ ಪೋಸ್ಟ್ ಮಾಡಿ ''ಮೋಹನ್ ಭಾಗವತ್ ಕಾಂಗ್ರೆಸ್ ಪಕ್ಷವನ್ನು ಹೊಗಳಿದ್ದಾರೆ'' ಎಂದು ಶೀರ್ಷಿಕೆ ನೀಡಲಾಗಿದೆ. ಇದೇ ವಿಡಿಯೋವನ್ನು ಹಲವರು ಪೋಸ್ಟ್ ಮಾಡಿದ್ದಾರೆ.
ಈ ಬಗ್ಗೆ ಪಿಟಿಐ ಫ್ಯಾಕ್ಟ್ ಚೆಕ್ ಡೆಸ್ಕ್ ಪರಿಶೀಲನೆ ಮಾಡಿದಾಗ 2018ರಲ್ಲಿ ಭಾಗವತ್ ಮಾತನಾಡಿದ ಹಳೆಯ ವಿಡಿಯೋ ಇದಾಗಿದೆ. 2018ರ ಸೆಪ್ಟೆಂಬರ್ 18ರಂದು ಇಂಡಿಯನ್ ಎಕ್ಸ್‌ಪ್ರೆಸ್‌ನ ಅಧಿಕೃತ ಫೇಸ್‌ಬುಕ್ ಖಾತೆಯಲ್ಲಿ ಈ ವಿಡಿಯೋ ಅಪ್‌ಲೋಡ್ ಮಾಡಿರುವುದು ಪತ್ತೆಯಾಗಿದೆ. ''ಈ ದೇಶದ ಜನರನ್ನು ಸ್ವಾತಂತ್ರ್ಯದ ಹಾದಿಯಲ್ಲಿ ಒಟ್ಟಿಗೆ ತರುವಲ್ಲಿ ಕಾಂಗ್ರೆಸ್‌ನ ಸಿದ್ಧಾಂತ ಪ್ರಮುಖ ಪಾತ್ರ ವಹಿಸಿದೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ'' ಎಂದು ಶೀರ್ಷಿಕೆ ನೀಡಿ ಅಂದು ವಿಡಿಯೋ ಹಂಚಿಕೊಳ್ಳಲಾಗಿದೆ.
ಅದೇ ರೀತಿಯಾಗಿ 2018ರ ಸೆಪ್ಟೆಂಬರ್ 18ರಂದು ಎನ್ಡಿಟಿವಿ ಸಹ ಅಧಿಕೃತ ಯೂಟ್ಯೂಬ್ ಚಾನೆಲ್ನಲ್ಲಿ ಭಾಗವತ್ ಭಾಷಣದ ವಿಡಿಯೋ ಅಪ್‌ಲೋಡ್ ಮಾಡಲಾಗಿದೆ. ''ದೆಹಲಿಯಲ್ಲಿ ಮೂರು ದಿನಗಳ ಸಮಾವೇಶದಲ್ಲಿ ಮೋಹನ್ ಭಾಗವತ್ ಮಾತನಾಡಿ, ಕಾಂಗ್ರೆಸ್‌ನ ರೂಪದಲ್ಲಿ ರಾಷ್ಟ್ರದಲ್ಲಿ ಒಂದು ದೊಡ್ಡ ಸ್ವಾತಂತ್ರ್ಯ ಚಳವಳಿಯು ಹೊರಹೊಮ್ಮಿತು. ಇದು ಇಂದಿಗೂ ನಮಗೆ ಸ್ಫೂರ್ತಿ ನೀಡುತ್ತಿರುವ ಹಲವಾರು ಸರ್ವ ತ್ಯಾಗದ ಮಹಾನ್ ವ್ಯಕ್ತಿಗಳಿಗೆ ಜನ್ಮ ನೀಡಿತು. ಆ ಆಂದೋಲನವು ಸಾಮಾನ್ಯ ಜನರನ್ನು ಸ್ವಾತಂತ್ರ್ಯ ಹೋರಾಟಕ್ಕೆ ಸೇರುವಂತೆ ಪ್ರೇರೇಪಿಸಿತು. ಸ್ವಾತಂತ್ರ್ಯವನ್ನು ಸಾಧಿಸುವಲ್ಲಿ ಅದು ನಮ್ಮಲ್ಲಿ ದೊಡ್ಡ ಪಾತ್ರವನ್ನು ಹೊಂದಿತ್ತು'' ಎಂದು ಹೇಳಿದ್ದಾರೆ ಎಂಬುವುದಾಗಿ ಎನ್ಡಿಟಿವಿ ತನ್ನ ಯೂಟ್ಯೂಬ್ ಖಾತೆಯಲ್ಲಿ ಬರೆದಿದೆ.
ಈ ಮೂಲಕ ಕಾಂಗ್ರೆಸ್ ಪಕ್ಷವನ್ನು ಮೋಹನ್ ಭಾಗವತ್ ಹೊಗಳಿರುವ 2018ರ ಹಳೆಯ ವಿಡಿಯೋವನ್ನು ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ತಪ್ಪುದಾರಿಗೆಳೆಯುವ ಹಕ್ಕುಗಳೊಂದಿಗೆ ಹಂಚಿಕೊಳ್ಳಲಾಗಿದೆ ಎಂದು ಫ್ಯಾಕ್ಟ್ ಚೆಕ್ನಲ್ಲಿ ಖಚಿತವಾಗಿದೆ.
ಇದನ್ನೂ ಓದಿ: ಬಿಜೆಪಿ ರಾಷ್ಟ್ರೀಯ ವಕ್ತಾರರಾಗಿ ಪ್ರಶಾಂತ್ ಕಿಶೋರ್ ನೇಮಕವಾಗಿದ್ದಾರೆಯೇ?: ಪ್ಯಾಕ್ಟ್ ಚೆಕ್ ಇಲ್ಲಿದೆ...