ನವದೆಹಲಿ: ಮದ್ಯ ನೀತಿ ಹಗರಣಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಬಂಧಿತರಾಗಿರುವ ದೆಹಲಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಈಗ ಜೈಲಿನಿಂದ ಬಿಡುಗಡೆಯಾಗುವ ಲಕ್ಷಣ ಕಾಣುತ್ತಿಲ್ಲ. ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಪ್ರಕರಣದಲ್ಲಿ ಮಧ್ಯಂತರ ಜಾಮೀನು ನೀಡಲು ಸುಪ್ರೀಂ ಕೋರ್ಟ್ ಬುಧವಾರ ನಿರಾಕರಿಸಿದೆ. ಆದ್ರೆ ಬಂಧನದ ವಿರುದ್ಧ ಕೇಜ್ರಿವಾಲ್ ಸಲ್ಲಿಸಿದ್ದ ಅರ್ಜಿಯ ಮೇರೆಗೆ ಸಿಬಿಐಗೆ ಸುಪ್ರೀಂ ನೋಟಿಸ್ ಜಾರಿ ಮಾಡಿದೆ.
ಮದ್ಯ ನೀತಿಗೆ ಸಂಬಂಧಿಸಿದಂತೆ ಕೇಜ್ರಿವಾಲ್ ಅವರನ್ನು ಜೂನ್ ಅಂತ್ಯದಲ್ಲಿ ಸಿಬಿಐ ಬಂಧಿಸಿದ್ದು ಗೊತ್ತೇ ಇದೆ. ಅಂದಿನಿಂದ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ. ಈ ಬಂಧನವನ್ನು ಪ್ರಶ್ನಿಸಿ, ಅವರು ಮೊದಲು ದೆಹಲಿ ಹೈಕೋರ್ಟ್ ಅನ್ನು ಸಂಪರ್ಕಿಸಿದ್ದರು. ಆದರೆ ಯಾವುದೇ ಪರಿಹಾರ ದೊರೆಯಲಿಲ್ಲ. ಹೈಕೋರ್ಟ್ ಅವರ ಬಂಧನವನ್ನು ಕಾನೂನುಬದ್ಧವೆಂದು ಎತ್ತಿಹಿಡಿಯಿತು. ಇದನ್ನು ಪ್ರಶ್ನಿಸಿ ಕೇಜ್ರಿವಾಲ್ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.
ಈಗ ತನಿಖಾ ಸಂಸ್ಥೆ ತನ್ನ ಬಂಧನವನ್ನು ಎತ್ತಿಹಿಡಿದ ದೆಹಲಿ ಹೈಕೋರ್ಟ್ ಆದೇಶದ ವಿರುದ್ಧ ಕೇಜ್ರಿವಾಲ್ ಸಲ್ಲಿಸಿದ ಮನವಿಯ ಮೇರೆಗೆ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಉಜ್ಜಲ್ ಭುಯಾನ್ ಅವರ ಪೀಠವು ಸಿಬಿಐಗೆ ನೋಟಿಸ್ ಜಾರಿ ಮಾಡಿದೆ. "ನಾವು ಯಾವುದೇ ಮಧ್ಯಂತರ ಜಾಮೀನು ನೀಡುತ್ತಿಲ್ಲ. ನಾವು ನೋಟಿಸ್ ನೀಡುತ್ತೇವೆ" ಎಂದು ಕೇಜ್ರಿವಾಲ್ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ ಅವರಿಗೆ ನ್ಯಾಯಪೀಠ ತಿಳಿಸಿದೆ.
ಇತ್ತೀಚೆಗಷ್ಟೇ ಈ ಬಗ್ಗೆ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಈ ಪ್ರಕರಣದಲ್ಲಿ ಸಿಎಂಗೆ ಮಧ್ಯಂತರ ಜಾಮೀನು ನೀಡಲು ನಿರಾಕರಿಸಿತ್ತು. ನಂತರ ಸಿಬಿಐಗೆ ನೋಟಿಸ್ ಜಾರಿ ಮಾಡಿ ಮುಂದಿನ ವಿಚಾರಣೆಯನ್ನು ಆಗಸ್ಟ್ 23ಕ್ಕೆ ಮುಂದೂಡಲಾಯಿತು. ಮತ್ತೊಂದೆಡೆ, ಇಡಿ ಪ್ರಕರಣದಲ್ಲಿ ಈಗಾಗಲೇ ಸುಪ್ರೀಂ ಕೋರ್ಟ್ ಜುಲೈ 12 ರಂದು ಮಧ್ಯಂತರ ಜಾಮೀನು ಮಂಜೂರು ಮಾಡಿದೆ ಎಂದು ತಿಳಿದಿದೆ. ಆದರೆ ಸಿಬಿಐ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದರಿಂದ ಜೈಲಿನಿಂದ ಬಿಡುಗಡೆಯಾಗಲು ಸಾಧ್ಯವಾಗಲಿಲ್ಲ.
ಓದಿ: ಭೋವಿ ಅಭಿವೃದ್ಧಿ ನಿಗಮ ಅಕ್ರಮ ಪ್ರಕರಣ; ತಡರಾತ್ರಿ ಸಿಐಡಿ ಅಧಿಕಾರಿಗಳಿಂದ ಶೋಧ - CID Raid