ನವದೆಹಲಿ: ಮದ್ಯ ನೀತಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ತೆಲಂಗಾಣದ ಬಿಆರ್ಎಸ್ ಪಕ್ಷದ ನಾಯಕಿ, ವಿಧಾನ ಪರಿಷತ್ ಸದಸ್ಯೆ ಕೆ.ಕವಿತಾ ಅವರನ್ನು ಮಂಗಳವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇದರಿಂದ ಅವರನ್ನು ರಾಷ್ಟ್ರ ರಾಜಧಾನಿ ದೆಹಲಿಯ ತಿಹಾರ್ ಜೈಲಿಗೆ ಸ್ಥಳಾಂತರ ಮಾಡಲಾಗಿದೆ.
2021-22ರಲ್ಲಿ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರವು ಹೊಸ ಅಬಕಾರಿ ನೀತಿಯನ್ನು ರೂಪಿಸಿತ್ತು. ಆದರೆ, ಇದನ್ನು ರೂಪಿಸುವಲ್ಲಿ ಮತ್ತು ಜಾರಿಗೊಳಿಸುವಲ್ಲಿ ಭ್ರಷ್ಟಾಚಾರ ಮತ್ತು ಅಕ್ರಮ ಹಣ ವರ್ಗಾವಣೆ ನಡೆದಿದೆ ಎಂದು ಆರೋಪಿಸಲಾಗಿದೆ. ಈ ಆರೋಪಗಳು ಕೇಳಿ ಬಂದ ನಂತರ ನೀತಿಯನ್ನೇ ರದ್ದುಗೊಳಿಸಲಾಗಿದೆ. ಭ್ರಷ್ಟಾಚಾರ, ಅಕ್ರಮ ಹಣ ವರ್ಗಾವಣೆ ಸಂಬಂಧ ಕೇಂದ್ರದ ತನಿಖಾ ಸಂಸ್ಥೆಗಳಾದ ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ), ಜಾರಿ ನಿರ್ದೇಶನಾಲಯ (ಇಡಿ) ತನಿಖೆ ನಡೆಸುತ್ತಿವೆ.
ದೆಹಲಿಯಲ್ಲಿ ಮದ್ಯದ ಪರವಾನಗಿಗಳ ದೊಡ್ಡ ಪಾಲು ಪಡೆಯಲು ಪ್ರತಿಯಾಗಿ ಸೌತ್ ಗ್ರೂಪ್ ಎಂಬ ಸಂಸ್ಥೆ 100 ಕೋಟಿ ರೂ.ಗಳನ್ನು ಆಮ್ ಆದ್ಮಿ ಪಕ್ಷಕ್ಕೆ ಕಿಕ್ ಬ್ಯಾಕ್ ನೀಡಿದ್ದು, ಕವಿತಾ ಈ ಸೌತ್ ಗ್ರೂಪ್ನ ಪ್ರಮುಖ ಸದಸ್ಯೆಯಾಗಿದ್ದಾರೆ ಎಂದು ಇಡಿ ಆರೋಪಿಸಿದೆ. ಇದರಿಂದ ಹೈದರಾಬಾದ್‌ನಲ್ಲಿ ಮಾರ್ಚ್ 15ರಂದು ಇಡಿ ಅಧಿಕಾರಿಗಳು ದಾಳಿ ಮಾಡಿ ಕವಿತಾ ಅವರನ್ನು ಬಂಧಿಸಿದ್ದರು.
ಹೆಚ್ಚಿನ ತನಿಖೆಗಾಗಿ ಹೈದರಾಬಾದ್‌ನಿಂದ ದೆಹಲಿಗೆ ಕವಿತಾ ಅವರನ್ನು ಇಡಿ ಅಧಿಕಾರಿಗಳು ಸ್ಥಳಾಂತರ ಮಾಡಿದ್ದಾರೆ. ಈ ಮೊದಲು ಆಗ ಏಳು ದಿನಗಳ ಇಡಿ ಕಸ್ಟಡಿಗೆ ಕೋರ್ಟ್ ನೀಡಿತ್ತು. ಮಾರ್ಚ್ 23ರಂದು ಮೂರು ದಿನಗಳ ಕಾಲ ಕಸ್ಟಡಿಯ ಅವಧಿಯನ್ನು ವಿಸ್ತರಿಸಲಾಗಿತ್ತು. ಇಂದಿಗ ಇದರ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಮತ್ತೆ ಅಧಿಕಾರಿಗಳು ಕವಿತಾ ಅವರನ್ನು ರೋಸ್ ಅವೆನ್ಯೂ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು.
ಈ ವೇಳೆ, ಇಡಿ ಪರ ವಕೀಲ ಜೋಬ್ ಹುಸೇನ್ ಆನ್‌ಲೈನ್‌ನಲ್ಲಿ ವಾದ ಮಂಡಿಸಿದರು. ಕವಿತಾ ಅವರನ್ನು 15 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದರು. ಅಲ್ಲದೇ, ಪ್ರಕರಣದ ತನಿಖೆ ಪ್ರಗತಿಯಲ್ಲಿದೆ. ಇನ್ನೂ ಹಲವು ಆರೋಪಿಗಳ ವಿಚಾರಣೆ ನಡೆಯುತ್ತಿದೆ ಎಂದು ವಕೀಲರು ತಿಳಿಸಿದರು. ಮತ್ತೊಂದೆಡೆ, ಕವಿತಾ ಪರ ವಕೀಲರು ಪ್ರತಿವಾದ ಮಂಡಿಸಿ, ಕವಿತಾ ಅವರ ಮಗನ ಪರೀಕ್ಷೆಯ ವೇಳಾಪಟ್ಟಿ ಬಿಡುಗಡೆಯಾಗಿದೆ. ಹೀಗಾಗಿ ಮಧ್ಯಂತರ ಜಾಮೀನು ನೀಡುವಂತೆ ಮನವಿ ಮಾಡಿದರು. ಆಗ ಎರಡೂ ಕಡೆಯ ವಾದ - ಪ್ರತಿವಾದವನ್ನು ಆಲಿಸಿದ ನ್ಯಾಯಾಲಯವು ಕವಿತಾ ಅವರನ್ನು 14 ದಿನಗಳು ಕಾಲ, ಏಪ್ರಿಲ್ 9ರವರೆಗೆ ರಿಮಾಂಡ್ಗೆ ಆದೇಶಿಸಿದೆ. ಇದೇ ವೇಳೆ, ಮಧ್ಯಂತರ ಜಾಮೀನು ಅರ್ಜಿಯ ವಿಚಾರಣೆಯನ್ನು ಏಪ್ರಿಲ್ 1ರಂದು ನಡೆಸಲಾಗುವುದು ಎಂದು ಕೋರ್ಟ್ ತಿಳಿಸಿದೆ.
ನ್ಯಾಯಾಂಗ ಬಂಧನಕ್ಕೆ ಕೋರ್ಟ್ ಒಪ್ಪಿಸಿದ ಕಾರಣದಿಂದ ಕವಿತಾ ಅವರನ್ನು ತನಿಖಾಧಿಕಾರಿಗಳು ತಿಹಾರ್ ಜೈಲಿಗೆ ಕಳುಹಿಸಿದ್ದಾರೆ. ಮತ್ತೊಂದೆಡೆ, ನ್ಯಾಯಾಲಯಕ್ಕೆ ಹಾಜರುಪಡಿಸುವ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಕವಿತಾ, ಇದೊಂದು ಸುಳ್ಳು ಪ್ರಕರಣ. ಅಕ್ರಮ ಹಣ ವರ್ಗಾವಣೆ ಪ್ರಕರಣವಲ್ಲ. ರಾಜಕೀಯ ಅಕ್ರಮ ದಂಧೆ ಪ್ರಕರಣ ಎಂದು ದೂರಿದರು. ಅಲ್ಲದೇ, ನಾನು ತೊಳೆದ ಮುತ್ತಿನಂತೆ ಹೊರ ಬರುತ್ತೇನೆ. ನನ್ನನ್ನು ತಾತ್ಕಾಲಿಕವಾಗಿ ಜೈಲಿಗೆ ಹಾಕಬಹುದು. ನನ್ನ ಸ್ವಾಭಿಮಾನಕ್ಕೆ ಧಕ್ಕೆ ತರಲು ಸಾಧ್ಯವಿಲ್ಲ. ಒಬ್ಬ ಆರೋಪಿ ಈಗಾಗಲೇ ಬಿಜೆಪಿ ಸೇರಿದ್ದಾನೆ. ಪಕ್ಷ ಮತ್ತೊಬ್ಬ ಆರೋಪಿಗೆ ಟಿಕೆಟ್ ನೀಡುತ್ತಿದೆ. ಮೂರನೇ ಆರೋಪಿಯು ಬಿಜೆಪಿಗೆ ಬಾಂಡ್ ರೂಪದಲ್ಲಿ 50 ಕೋಟಿ ರೂ. ನೀಡಿದ್ದಾನೆ ಎಂದೂ ಆರೋಪಿಸಿದರು.
ಇದನ್ನೂ ಓದಿ: ಕವಿತಾ ಇಡಿ ಕಸ್ಟಡಿ ಅವಧಿ ವಿಸ್ತರಿಸಿದ ದೆಹಲಿ ಕೋರ್ಟ್: ಹೈದರಾಬಾದ್‌ನಲ್ಲಿ ಸಂಬಂಧಿಯ ಮನೆ ಮೇಲೆ ಅಧಿಕಾರಿಗಳ ದಾಳಿ