ನವದೆಹಲಿ: ವೇತನ ಮಿತಿ ಹೆಚ್ಚಾದ ಕಾರಣದಿಂದ ಇಎಸ್ಐ ಯೋಜನೆಯ ವ್ಯಾಪ್ತಿಯಿಂದ ತೆಗೆದುಹಾಕಲಾದ ನಿವೃತ್ತ ಉದ್ಯೋಗಿಗಳಿಗೆ ಕೂಡ ಇಎಸ್ಐಸಿ ವೈದ್ಯಕೀಯ ಸೌಲಭ್ಯಗಳನ್ನು ನೀಡುವ ಪ್ರಸ್ತಾಪವನ್ನು ನೌಕರರ ರಾಜ್ಯ ವಿಮಾ ನಿಗಮ (ಇಎಸ್ಐಸಿ) ಅನುಮೋದಿಸಿದೆ. ಕೇಂದ್ರ ಸಚಿವ ಭೂಪೇಂದರ್ ಯಾದವ್ ಅವರ ಅಧ್ಯಕ್ಷತೆಯಲ್ಲಿ ನಡೆದ ಇಎಸ್ಐಸಿಯ 193ನೇ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಏಪ್ರಿಲ್ 1, 2012ರ ನಂತರ ಕನಿಷ್ಠ ಐದು ವರ್ಷಗಳ ಕಾಲ ವಿಮೆ ಪಡೆಯಬಹುದಾದ ಉದ್ಯೋಗದಲ್ಲಿದ್ದ ಮತ್ತು ಏಪ್ರಿಲ್ 1, 2015 ರಂದು ಅಥವಾ ನಂತರ ತಿಂಗಳಿಗೆ 30,000 ರೂ.ವರೆಗಿನ ವೇತನದೊಂದಿಗೆ ನಿವೃತ್ತರಾದ ಅಥವಾ ಸ್ವಯಂಪ್ರೇರಿತವಾಗಿ ನಿವೃತ್ತರಾದ ವ್ಯಕ್ತಿಗಳು ಈಗ ಹೊಸ ಯೋಜನೆಯಡಿ ವೈದ್ಯಕೀಯ ಪ್ರಯೋಜನಗಳನ್ನು ಪಡೆಯಲು ಅರ್ಹರಾಗಿರುತ್ತಾರೆ.
ನೌಕರರ ರಾಜ್ಯ ವಿಮಾ (ಇಎಸ್ಐ) ಯೋಜನೆಯು ವಿಮಾದಾರರಿಗೆ ಮತ್ತು ಅವರ ಕುಟುಂಬ ಸದಸ್ಯರಿಗೆ ವೈದ್ಯಕೀಯ ಸಲಹೆ, ಚಿಕಿತ್ಸೆ, ಔಷಧಿಗಳು ಮತ್ತು ಚುಚ್ಚುಮದ್ದು, ತಜ್ಞ ಸಮಾಲೋಚನೆ ಮತ್ತು ಆಸ್ಪತ್ರೆಗೆ ದಾಖಲಾಗುವ ಶುಲ್ಕಗಳನ್ನು ಭರಿಸುವ ರೂಪದಲ್ಲಿ ಸಂಪೂರ್ಣ ವೈದ್ಯಕೀಯ ಆರೈಕೆಯನ್ನು ಒದಗಿಸುತ್ತದೆ.
ಇಎಸ್ಐ ಯೋಜನೆಯು 10 ಅಥವಾ ಅದಕ್ಕಿಂತ ಹೆಚ್ಚು ಜನ ಕೆಲಸ ಮಾಡುವ ಕಾರ್ಖಾನೆಗಳು ಮತ್ತು ರಸ್ತೆ ಸಾರಿಗೆ, ಹೋಟೆಲ್ಗಳು, ರೆಸ್ಟೋರೆಂಟ್ಗಳು, ಸಿನೆಮಾ ಮಂದಿರಗಳು, ಮಾಧ್ಯಮ ಸಂಸ್ಥೆ, ಅಂಗಡಿಗಳು ಮತ್ತು ಶೈಕ್ಷಣಿಕ ಅಥವಾ ವೈದ್ಯಕೀಯ ಸಂಸ್ಥೆಗಳಂತಹ ಇತರ ಸಂಸ್ಥೆಗಳಿಗೆ ಅನ್ವಯಿಸುತ್ತದೆ
ಸರ್ಕಾರದ ಆಕ್ಟ್ ಈಸ್ಟ್ ಪಾಲಿಸಿಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ದೇಶದ ಈಶಾನ್ಯ ಪ್ರದೇಶ ಮತ್ತು ಸಿಕ್ಕಿಂನಲ್ಲಿ ವೈದ್ಯಕೀಯ ಸೇವೆಗಳು ಮತ್ತು ಮೂಲಸೌಕರ್ಯಗಳನ್ನು ಹೆಚ್ಚಿಸಲು ಕೂಡ ಕಾರ್ಮಿಕ ಸಚಿವ ಭೂಪೇಂದರ್ ಯಾದವ್ ಅವರ ಅಧ್ಯಕ್ಷತೆಯಲ್ಲಿ ನಡೆದ ಇಎಸ್ಐಸಿ ಸಭೆ ನಿರ್ಧರಿಸಿದೆ. ಸಿಕ್ಕಿಂ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲಿ ಔಷಧಾಲಯಗಳು, ವೈದ್ಯಕೀಯ ಮೂಲಸೌಕರ್ಯ / ಪ್ರಾದೇಶಿಕ / ಉಪ ಪ್ರಾದೇಶಿಕ ಕಚೇರಿಗಳನ್ನು ಸ್ಥಾಪಿಸಲು ಸದ್ಯ ಜಾರಿಯಲ್ಲಿರುವ ಮಾನದಂಡಗಳನ್ನು ಇಎಸ್ಐಸಿ ಸಡಿಲಿಸಿದೆ.
ಇಎಸ್ಐ ಫಲಾನುಭವಿಗಳಿಗೆ ಸಮಗ್ರ ಯೋಗಕ್ಷೇಮದ ಸೌಲಭ್ಯ ನೀಡಲು ಇಎಸ್ಐಸಿ ಸಂಸ್ಥೆಗಳಲ್ಲಿ ಆಯುಷ್ 2023 ರ ಹೊಸ ನೀತಿಯನ್ನು ಸಭೆಯಲ್ಲಿ ಅಂಗೀಕರಿಸಲಾಯಿತು. ಹೊಸ ನೀತಿಯ ಪ್ರಕಾರ ಇಎಸ್ಐಸಿ ಆಸ್ಪತ್ರೆಗಳಲ್ಲಿ ಪಂಚಕರ್ಮ, ಕ್ಷಾರ ಸೂತ್ರ ಮತ್ತು ಆಯುಷ್ ಘಟಕಗಳನ್ನು ಸ್ಥಾಪಿಸಲಾಗುವುದು.
ಇದಲ್ಲದೆ ವೈದ್ಯಕೀಯ ವ್ಯವಸ್ಥೆಯ ಮೂಲಸೌಕರ್ಯವನ್ನು ಬಲಪಡಿಸುವ ಸಲುವಾಗಿ ಕರ್ನಾಟಕದ ಉಡುಪಿ ಮತ್ತು ಕೇರಳದ ಇಡುಕ್ಕಿಯಲ್ಲಿ ತಲಾ 100 ಹಾಸಿಗೆಗಳ ಆಸ್ಪತ್ರೆ ನಿರ್ಮಾಣಕ್ಕಾಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಸಭೆಯಲ್ಲಿ ಅನುಮೋದನೆ ನೀಡಲಾಯಿತು. ಪಂಜಾಬ್ನ ಮಲೆರ್ಕೋಟ್ಲಾದಲ್ಲಿ 150 ಹಾಸಿಗೆಗಳ ಆಸ್ಪತ್ರೆಯನ್ನು ಸಹ ಮಂಜೂರು ಮಾಡಲಾಗಿದೆ.
ಇದನ್ನೂ ಓದಿ: ಖಜಾನೆ ಖಾಲಿ ಮಾಡಿಕೊಳ್ಳುವ ರಾಜ್ಯಗಳಿಗೆ ಸಹಾಯ ಮಾಡಲಾಗದು: ಗೃಹ ಸಚಿವ ಅಮಿತ್ ಶಾ