ನವದೆಹಲಿ: ಮಹಾರಾಷ್ಟ್ರ ಮತ್ತು ಜಾರ್ಖಂಡ್ ರಾಜ್ಯಗಳ ವಿಧಾನಸಭಾ ಚುನಾವಣಾ ವೇಳಾಪಟ್ಟಿಯನ್ನು ಇಂದು ಕೇಂದ್ರ ಚುನಾವಣಾ ಆಯೋಗ ಪ್ರಕಟಿಸಿತು. ಮಹಾರಾಷ್ಟ್ರದಲ್ಲಿ ಒಂದೇ ಹಂತದಲ್ಲಿ ಮತ್ತು ಜಾರ್ಖಂಡ್ನಲ್ಲಿ ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ.
ಮಹಾರಾಷ್ಟ್ರದಲ್ಲಿ ನವೆಂಬರ್ 20ರಂದು ಮತದಾನ ನಡೆಯಲಿದೆ. ಜಾರ್ಖಂಡ್ನಲ್ಲಿ ನವೆಂಬರ್ 13 ಮತ್ತು 21ರಂದು ಮತದಾನ ನಡೆಯಲಿದೆ. ಎರಡೂ ರಾಜ್ಯಗಳ ಫಲಿತಾಂಶ ನವೆಂಬರ್ 23 ರಂದು ಹೊರಬರಲಿದೆ ಎಂದು ಆಯೋಗ ಮಾಹಿತಿ ನೀಡಿದೆ. ದೆಹಲಿಯ ವಿಜ್ಞಾನ ಭವನದ ಪ್ಲಿನರಿ ಹಾಲ್‌ನಲ್ಲಿ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ರಾಜೀವ್ ಕುಮಾರ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.
288 ಸ್ಥಾನಗಳ ಮಹಾರಾಷ್ಟ್ರ ವಿಧಾನಸಭೆಯ ಅವಧಿ ನವೆಂಬರ್ 26, 2024 ಮತ್ತು 81 ಸ್ಥಾನಗಳನ್ನು ಹೊಂದಿರುವ ಜಾರ್ಖಂಡ್ ವಿಧಾನಸಭೆ ಅವಧಿ ಜನವರಿ 5, 2025ರಂದು ಕೊನೆಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಆಯೋಗ, ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಮಹಾರಾಷ್ಟ್ರದಲ್ಲಿ 9.63 ಕೋಟಿ ಮತ್ತು ಜಾರ್ಖಂಡ್ನಲ್ಲಿ 2.6 ಕೋಟಿ ಮತದಾರರು ಮತಹಕ್ಕು ಹೊಂದಿದ್ದಾರೆ.
ಮಹಾರಾಷ್ಟ್ರ ಚುನಾವಣೆ ವೇಳಾಪಟ್ಟಿ: ಅಕ್ಟೋಬರ್ 22 ರಂದು ಗೆಜೆಟ್ ನೋಟಿಫಿಕೇಷನ್ ಆಗಲಿದೆ. ಅ.29 ನಾಮಿನೇಷನ್ ಸಲ್ಲಿಕೆಗೆ ಕೊನೆ ದಿನ. ನಾಮಪತ್ರ ಹಿಂಪಡೆಯಲು ನ.4 ಕೊನೆ ದಿನ. ನ.23ರಂದು ಫಲಿತಾಂಶ ಪ್ರಕಟ.
ಸದ್ಯ ಆಡಳಿತದಲ್ಲಿರುವ ಬಿಜೆಪಿ, ಶಿವಸೇನೆ ಮತ್ತು ಎನ್ಸಿಪಿ ಮೈತ್ರಿ ಮತ್ತು ವಿರೋಧ ಪಕ್ಷದಲ್ಲಿರುವ ಕಾಂಗ್ರೆಸ್, ಶಿವಸೇನಾ (ಯುಬಿಟಿ), ಎನ್ಸಿಪಿ (ಶರದ್ ಪವಾರ)ಯ ಮಹಾವಿಕಾಸ್ ಅಘಾಡಿ ಮೈತ್ರಿ ಮಧ್ಯೆ ತೀವ್ರ ಪೈಪೋಟಿ ಎದುರಾಗಲಿದೆ.
ಜಾರ್ಖಂಡ್ ಚುನಾವಣಾ ದಿನಾಂಕ: ಜಾರ್ಖಂಡ್ನಲ್ಲಿ ಒಟ್ಟು 2.60 ಕೋಟಿ ಮತದಾರರಿದ್ದಾರೆ. ಈ ಪೈಕಿ 1.31 ಕೋಟಿ ಪುರುಷರು, 1.29 ಕೋಟಿ ಮಹಿಳೆಯರು ಮತಹಕ್ಕು ಹೊಂದಿದ್ದಾರೆ. ಇನ್ನು 11.84 ಲಕ್ಷ ಯುವಕರು ಈ ಬಾರಿ ಮೊದಲ ಸಲ ವೋಟಿಂಗ್ ಮಾಡಲಿದ್ದಾರೆ. ಒಟ್ಟು 66.84 ಲಕ್ಷ ಯುವಕರು ಮತದಾನ ಮಾಡಲಿದ್ದಾರೆ.
ಅಕ್ಟೋಬರ್ 18 ಮತ್ತು 22 ರಂದು ಕ್ರಮವಾಗಿ ಎರಡು ಹಂತದ ಚುನಾವಣೆಗೆ ಗೆಜೆಟ್ ನೋಟಿಫಿಕೇಷನ್ ಆಗಲಿದೆ. ಕ್ರಮವಾಗಿ ಅಕ್ಟೋಬರ್ 25 ಮತ್ತು 29 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಲಿದೆ. ಹಾಗೆಯೇ ಅಕ್ಟೋಬರ್ 30 ಮತ್ತು ನ.1 ನಾಮಪತ್ರ ಹಿಂಪಡೆಯುವ ಕೊನೆ ದಿನವಾಗಲಿದೆ.
85 ವರ್ಷ ವಯಸ್ಸು ದಾಟಿದವರಿಗೆ ಮನೆಯಿಂದಲೇ ಮತದಾನಕ್ಕೆ ಅವಕಾಶ ನೀಡಲಾಗಿದೆ. ಮನೆಯಲ್ಲೂ ಕೂಡ ಗೌಪ್ಯ ಮತದಾನಕ್ಕೆ ಅವಕಾಶವಿರಲಿದೆ. ಮತದಾನದ ವೇಳೆ ವಿಡಿಯೋ ಮಾಡಿಸಲಾಗುವುದು ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ತಿಳಿಸಿದರು.
ಇದನ್ನೂ ಓದಿ: ಉಚಿತ ಕೊಡುಗೆ ಪ್ರಶ್ನಿಸಿ ಮತ್ತೊಂದು ಅರ್ಜಿ: ಕೇಂದ್ರ, ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ನೋಟಿಸ್