ಗುವಾಹಟಿ: ಲೋಕಸಭಾ ಚುನಾವಣೆಯಿಂದ ತೆರವಾದ ಅಸ್ಸಾಂನ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಸಲು ಭಾರತೀಯ ಚುನಾವಣಾ ಆಯೋಗ (ಇಸಿಐ) ಸಿದ್ಧಗೊಂಡಿದೆ ಎಂದು ಅಸ್ಸಾಂನ ಮುಖ್ಯ ಚುನಾವಣಾ ಅಧಿಕಾರಿ ಅನುರಾಗ್ ಗೋಯಲ್ ಹೇಳಿದರು.
ಶುಕ್ರವಾರ ಗುವಾಹಟಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಈ ಬಗ್ಗೆ ಮಾಹಿತಿ ನೀಡಿದ ಅವರು ಲೋಕಸಭಾ ಚುನಾವಣೆಯಿಂದ ಸಮಗುರಿ, ಬೆಹಾಲಿ, ಧೋಲೈ, ಸಿದ್ಲಿ ಮತ್ತು ಬೊಂಗೈಗಾಂವ್ ವಿಧಾನಸಭೆ ಕ್ಷೇತ್ರಗಳು ಖಾಲಿಯಾಗಿದ್ದು, ಈ ಐದು ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಸಲು ಆಯೋಗ ಸಿದ್ಧಗೊಂಡಿದೆ. ಮುಂದಿನ ಸೆಪ್ಟೆಂಬರ್ ಅಥವಾ ಅಕ್ಟೋಬರ್‌ನಲ್ಲಿ ಈ ಉಪಚುನಾವಣೆ ನಡೆಯಬಹುದು. 2024ರ ಲೋಕಸಭೆ ಚುನಾವಣೆಯಲ್ಲಿ ಅಸ್ಸಾಂನ ಐವರು ಶಾಸಕರು ಸಂಸದರಾಗಿ ಆಯ್ಕೆಯಾಗಿದ್ದಾರೆ. ಈ ಐದು ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತದೆ.
ಸೆಕ್ಷನ್ 10ರ ಅಡಿ ಖಾಲಿ ಇರುವ ಸ್ಥಾನಗಳನ್ನು ಭರ್ತಿ ಮಾಡಲು ಆಯೋಗ (ಇಸಿಐ) ಸಿದ್ಧಗೊಂಡಿದೆ. 2023 ರಿಂದ ಹೊಸದಾಗಿ ನಿರ್ಧರಿಸಲಾದ ವಿಧಾನಸಭಾ ಕ್ಷೇತ್ರಗಳ ಮಿತಿ ಈ ಉಪ ಚುನಾವಣೆಯಲ್ಲಿ ಅನ್ವಯಿಸುವುದಿಲ್ಲ. ಲಭ್ಯವಿರುವ ಮತದಾರರ ಪಟ್ಟಿಗಳನ್ನು ನವೀಕರಿಸಲಾಗುತ್ತದೆ ಎಂದು ಗೋಯಲ್ ಅವರು ತಿಳಿಸಿದ್ದಾರೆ.
ಮತದಾರರ ಪಟ್ಟಿ ಪರಿಷ್ಕರಣೆಗೆ ಚುನಾವಣಾ ಆಯೋಗ ಗಡುವು ನಿಗದಿಪಡಿಸಿದೆ. ಆಯೋಗ ಘೋಷಿಸಿರುವಂತೆ ಜುಲೈ 30 ರಂದು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು. ಆಕ್ಷೇಪಣೆ ಸಲ್ಲಿಸಲು ಜುಲೈ 30 ರಿಂದ ಆಗಸ್ಟ್ 10 ರವರೆಗೆ ಅಂತಿಮ ದಿನಾಂಕ ನಿಗದಿಪಡಿಸಲಾಗಿದೆ ಎಂದು ಅವರು ಹೇಳಿದರು.