ಹಲ್ದ್ವಾನಿ (ಉತ್ತರಾಖಂಡ್): ಉತ್ತರಾಖಂಡ್ನಲ್ಲಿ ಸರ್ಕಾರಿ ಭೂಮಿ ಒತ್ತುವರಿ ವಿರುದ್ಧ ಸರ್ಕಾರದ ಕಾರ್ಯಾಚರಣೆ ಮುಂದುವರೆದಿದೆ. ನೈನಿತಾಲ್ ಜಿಲ್ಲೆಯ ಹಲ್ದ್ವಾನಿಯಲ್ಲಿ ಸರ್ಕಾರಿ ಭೂಮಿ ಕಬಳಸಿ ನಿರ್ಮಿಸಿರುವ ಮನೆಗಳ ವಿರುದ್ಧ ಜಿಲ್ಲಾಡಳಿತ ತೆರವು ಕಾರ್ಯ ಆರಂಭಿಸಿದೆ. ಈಗಾಗಲೇ ನಿರ್ಮಾಣ ಹಂತದಲ್ಲಿದ್ದ ಎಂಟು ಮನೆಗಳನ್ನು ನೆಲಸಮಗೊಳಿಸಲಾಗಿದೆ.
ರಾಜ್ಯದ ಪ್ರಮುಖ ವಾಣಿಜ್ಯ ಕೇಂದ್ರವಾದ ಹಲ್ದ್ವಾನಿಯ ಬನ್‌ಭೂಲ್‌ಪುರ ಪ್ರದೇಶದಲ್ಲಿ ಕಳೆದ ತಿಂಗಳು ಅಕ್ರಮ ಮದರಸಾ ತೆರವು ಮಾಡಿದ್ದ ಘಟನೆ ಹಿಂಚಾಸಾರಕ್ಕೆ ತಿರುಗಿತ್ತು. ಅಬ್ದುಲ್ ಮಲಿಕ್ ಎಂಬಾತನ ಕುಟುಂಬವು ಕಾನೂನುಬಾಹಿರವಾಗಿ ನಿರ್ಮಿಸಿದ್ದ ಕಟ್ಟಡವನ್ನು ಫೆಬ್ರವರಿ 8ರಂದು ಅಧಿಕಾರಿಗಳು ಧ್ವಂಸ ಮಾಡಿದ್ದರು. ಇದರ ನಂತರ ಕಲ್ಲು ತೂರಾಟ ಮತ್ತು ಬೆಂಕಿ ಹಚ್ಚುವುದು ಸೇರಿದಂತೆ ವಿವಿಧ ಅಹಿತಕರ ಘಟನೆಗಳು ಉಂಟಾಗಿದ್ದವು. ಇದರಲ್ಲಿ ಆರು ಮಂದಿ ಸಾವನ್ನಪ್ಪಿದ್ದರು. ಅಲ್ಲದೇ, ಪೊಲೀಸ್ ಸಿಬ್ಬಂದಿ ಮತ್ತು ಪತ್ರಕರ್ತರು ಸೇರಿ ನೂರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
ಇದೀಗ ಅರಣ್ಯ ಇಲಾಖೆಯ ಜಮೀನು ಒತ್ತುವರಿ ವಿರುದ್ಧ ಕಾರ್ಯಾಚರಣೆ ಆರಂಭಿಸಲಾಗಿದೆ. ಬುಲ್ಡೋಜರ್ಗಳ ಮೂಲಕ ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆಯ ತಂಡಗಳು ನಿರ್ಮಾಣ ಹಂತದಲ್ಲಿದ್ದ ಎಂಟು ಮನೆಗಳನ್ನು ನೆಲಸಮಗೊಳಿಸಿವೆ. ಅರಣ್ಯ ಇಲಾಖೆಯ ಸಿಬ್ಬಂದಿ ಮಾತ್ರವಲ್ಲದೇ ಪೊಲೀಸರು, ಆಡಳಿತ ಮತ್ತು ಪಿಎಸಿ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಭದ್ರತಾ ದೃಷ್ಟಿಯಿಂದ ಸುತ್ತಮುತ್ತಲಿನ ಪ್ರದೇಶಗಳಿಗೂ ಬ್ಯಾರಿಕೇಡ್ ಹಾಕಲಾಗಿತ್ತು.
ಇದನ್ನೂ ಓದಿ: ಹಲ್ದ್ವಾನಿ ಹಿಂಸಾಚಾರ: ದೆಹಲಿಯಲ್ಲಿ ಮಾಸ್ಟರ್ ಮೈಂಡ್ ಅರೆಸ್ಟ್, ಬಂಧಿತರ ಸಂಖ್ಯೆ 81ಕ್ಕೆ ಏರಿಕೆ
ಬಗ್ಜಾಲಾ ಪ್ರದೇಶದಲ್ಲಿ ಅರಣ್ಯ ಭೂಮಿಯನ್ನು ಅತಿಕ್ರಮಣ ಮಾಡಿ ಕೆಲ ವರ್ಷಗಳಿಂದ ಕೆಲವರು ಮನೆ ಕಟ್ಟಲು ಆರಂಭಿಸಿದ್ದಾರೆ. ಅಕ್ರಮ ಕಟ್ಟಡಗಳ ನಿರ್ಮಾಣ ಮಾಡದಂತೆ ಇಲಾಖೆಯಿಂದ ಹಲವು ಬಾರಿ ನೋಟಿಸ್ ಜಾರಿ ಮಾಡಲಾಗಿತ್ತು. ಆದರೂ, ಅಕ್ರಮವಾಗಿ ಕಟ್ಟಡಗಳ ನಿರ್ಮಾಣವಾಗುತ್ತಿತ್ತು. ಹೀಗಾಗಿಯೇ ಇಂದು ಅತಿಕ್ರಮಣ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಈ ಜಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅತಿಕ್ರಮಣ ನಡೆದಿದೆ. ಮೊದಲ ಹಂತದಲ್ಲಿ ಹೊಸದಾಗಿ ನಿರ್ಮಿಸಿರುವ ಕಟ್ಟಡಗಳ ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಹಲ್ದ್ವಾನಿ ಉಪ ಜಿಲ್ಲಾಧಿಕಾರಿ ಪರಿತೋಷ್ ವರ್ಮಾ ತಿಳಿಸಿದರು.
ಹಲ್ದ್ವಾನಿ, ಬಗ್ಜಾಲಾದಲ್ಲಿ ಅರಣ್ಯ ಇಲಾಖೆಯ 100 ಹೆಕ್ಟೇರ್ ಜಾಗವನ್ನು ಜನರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಹಿಂದೆ 66 ಹೆಕ್ಟೇರ್ ಭೂಮಿಯನ್ನು ಗುತ್ತಿಗೆಗೆ ನೀಡಲಾಗಿತ್ತು. ಆ ಗುತ್ತಿಗೆಯು 2008ರಲ್ಲೇ ಮುಕ್ತಾಯವಾಗಿದೆ. ಹೀಗಿದ್ದರೂ ಕಳೆದ ಕೆಲ ದಿನಗಳಿಂದ ಈ ಭಾಗದಲ್ಲಿ ಹೊಸ ಮನೆಗಳ ನಿರ್ಮಾಣ ಆರಂಭವಾಗಿತ್ತು. ಅರಣ್ಯ ಇಲಾಖೆಯ ಜಾಗದಲ್ಲಿ ಮನೆ ಕಟ್ಟಿಕೊಂಡವರಿಗೂ ನೋಟಿಸ್ ನೀಡಿದ್ದರೂ ಯಾವುದೇ ಪರಿಣಾಮ ಬೀರದಿರುವುದನ್ನು ಕಂಡು ಒತ್ತುವರಿ ತೆರವು ಕಾರ್ಯ ಆರಂಭಿಸಲಾಗಿದೆ.
ಈ ಪ್ರದೇಶದಲ್ಲಿ ಭೂಮಾಫಿಯಾದವರು ಸರ್ಕಾರಿ ಜಮೀನನ್ನು 100 ರೂ. ಹಾಗೂ 50 ರೂ. ಮೌಲ್ಯದ ಸ್ಟಾಂಪ್ ಪೇಪರ್ ನಲ್ಲಿ ಬಹಳ ದಿನಗಳಿಂದ ಮಾರಾಟ ಮಾಡುತ್ತಿದ್ದರು. ಜಮೀನು ಖರೀದಿಸಬೇಡಿ ಎಂದು ಸ್ಥಳೀಯ ಆಡಳಿತವು ಜನರಿಗೆ ಮನವಿ ಮಾಡಿತ್ತು. ಆದರೆ, ಜನರು ಕೇವಲ ಸ್ಟಾಂಪ್ ಪೇಪರ್ನಲ್ಲಿ ಭೂಮಿ ಖರೀದಿಸಿದ್ದರು ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಉತ್ತರಾಖಂಡ: ಅಕ್ರಮ ಧಾರ್ಮಿಕ ಕಟ್ಟಡಗಳ ತೆರವಿಗೆ ಆಕ್ರೋಶ; ಪೊಲೀಸ್ ಗುಂಡಿಗೆ ಓರ್ವ ಬಲಿ, ಮೂವರಿಗೆ ಗಾಯ