ರಾಮೋಜಿ ಫಿಲಂ ಸಿಟಿ(ಹೈದರಾಬಾದ್): ಮಾಧ್ಯಮ ಲೋಕದ ದಿಗ್ಗಜ, 'ಈನಾಡು' ಸಮೂಹದ ಅಧ್ಯಕ್ಷ, ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ರಾಮೋಜಿ ರಾವ್ (87) ಅವರು ಇಂದು ಪಂಚಭೂತಗಳಲ್ಲಿ ಲೀನರಾದರು. ಜಗತ್ಪ್ರಸಿದ್ಧ ಫಿಲಂ ಸಿಟಿಯ ನಿರ್ಮಾತೃ ರಾಮೋಜಿ ಅವರ ಅಂತ್ಯಕ್ರಿಯೆ ಭಾನುವಾರ 11.30ಕ್ಕೆ ಹೈದರಾಬಾದ್ನ ರಾಮೋಜಿ ಫಿಲಂ ಸಿಟಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ, ಕುಟುಂಬ ವರ್ಗ ಹಾಗು ಸಾವಿರಾರು ಜನರ ಸಮ್ಮುಖದಲ್ಲಿ ನೆರವೇರಿತು.
ರಾಮೋಜಿ ಅವರ ಪುತ್ರ ಹಾಗೂ ಪ್ರಸ್ತುತ ಈನಾಡು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾಗಿರುವ (ಎಂಡಿ) ಕಿರಣ್ ಅವರು ಪಾರ್ಥಿವ ಶರೀರಕ್ಕೆ ಅಗ್ನಿಸ್ಪರ್ಶ ಮಾಡುವ ಮೂಲಕ ಅಂತ್ಯಕ್ರಿಯೆ ನೆರವೇರಿತು. ಇದಕ್ಕೂ ಮುನ್ನ ಧಾರ್ಮಿಕ ವಿಧಿ-ವಿಧಾನಗಳು ಜರುಗಿದವು.
![eenadu group chairman ramoji rao funeral](https://etvbharatimages.akamaized.net/etvbharat/prod-images/09-06-2024/21670389_thuwsdd-2.png)
ಅಂತಿಮ ಯಾತ್ರೆ: ಶನಿವಾರ ಮುಂಜಾನೆ ನಿಧನರಾದ ರಾಮೋಜಿ ರಾವ್ ಅವರ ಅಂತಿಮ ಯಾತ್ರೆ ಬೆಳಗ್ಗೆ 9 ಗಂಟೆಯಿಂದ ಫಿಲಂ ಸಿಟಿ ಆವರಣದಲ್ಲಿರುವ ಅವರ ನಿವಾಸದಿಂದ ಆರಂಭವಾಯಿತು. ಮೆರವಣಿಗೆಯುದ್ದಕ್ಕೂ ಸಾವಿರಾರು ಜನರು ಭಾಗವಹಿಸಿದ್ದರು. ರಾಮೋಜಿ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು, ನಮನ ಸಲ್ಲಿಸಿದರು.
ಪಾರ್ಥಿವ ಶರೀರಕ್ಕೆ ಹೆಗಲು ಕೊಟ್ಟ ಚಂದ್ರಬಾಬು ನಾಯ್ಡು: ಆಂಧ್ರಪ್ರದೇಶದ ನಿಯೋಜಿತ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ರಾಮೋಜಿ ರಾವ್ ಅವರ ಅಂತ್ಯಕ್ರಿಯೆ ವೇಳೆ ಭಾಗವಹಿಸಿದ್ದರು. ಅಂತ್ಯಕ್ರಿಯೆ ನಡೆಯುವ ಸ್ಥಳದ ಸಮೀಪ ಅವರು ಪಾರ್ಥಿವ ಶರೀರಕ್ಕೆ ಹೆಗಲು ಕೊಟ್ಟರು. ಈ ಮೂಲಕ ಬಹುಕಾಲದ ಆತ್ಮೀಯ ಬಾಂಧವ್ಯಕ್ಕೆ ಗೌರವ ಸಮರ್ಪಿಸಿದರು. ಈ ಸಂದರ್ಭದಲ್ಲಿ ಹಲವು ಪ್ರಮುಖ ನಾಯಕರು ಭಾಗವಹಿಸಿದ್ದರು.
![eenadu group chairman ramoji rao funeral](https://etvbharatimages.akamaized.net/etvbharat/prod-images/09-06-2024/21670389_thuwsdd-1.png)
ನವೆಂಬರ್ 16, 1936ರಂದು ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಪೆದಪರುಪುಡಿಯಲ್ಲಿ ಜನಿಸಿದ್ದ ರಾಮೋಜಿ ರಾವ್ ಜೂನ್ 8ರ ಶನಿವಾರ ಮುಂಜಾನೆ ಹೈದರಾಬಾದ್ನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದರು. ಸಾರ್ವಜನಿಕರು, ರಾಜಕೀಯ ಹಾಗೂ ಸಿನಿಮಾ ರಂಗದ ಗಣ್ಯರು, ರಾಮೋಜಿ ಸಮೂಹದ ಅಪಾರ ಉದ್ಯೋಗಿಗಳು ಹಾಗು ಅಭಿಮಾನಿಗಳು ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದಿದ್ದರು.
ಇದನ್ನೂ ಓದಿ: LIVE: ಮಾಧ್ಯಮ ಲೋಕದ ದಿಗ್ಗಜ ರಾಮೋಜಿ ರಾವ್ ಅಂತ್ಯಕ್ರಿಯೆ - Ramoji Rao Funeral