ರಾಂಚಿ(ಜಾರ್ಖಂಡ್): ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರು ತಮ್ಮ ವಿರುದ್ಧದ ಭೂ ಹಗರಣ ಕುರಿತ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ (ಇಡಿ) ತನಿಖೆಯನ್ನು 'ಪಿತೂರಿ' ಎಂದು ಆರೋಪಿಸಿದ್ದಾರೆ. ಶನಿವಾರ ತಮ್ಮ ನಿವಾಸದೆದುರು ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಅವರು, ಇಡಿ ದಾಳಿಗೆ ಹೆದರುವುದಿಲ್ಲ. ನನ್ನ ವಿರುದ್ಧ ಷಡ್ಯಂತ್ರ ನಡೆದಿದೆ. ಆದರೆ ಸಂಚುಕೋರರ ಶವಪೆಟ್ಟಿಗೆಗೆ ಅಂತಿಮ ಮೊಳೆ ಹೊಡೆಯುತ್ತೇವೆ. ನನಗೆ ಭಯವಿಲ್ಲ. ನಿಮ್ಮ ನಾಯಕ ಮೊದಲು ಗುಂಡುಗಳನ್ನು ಎದುರಿಸುತ್ತಾನೆ. ನಿಮ್ಮ ಮನೋಬಲವನ್ನು ನಾನು ಮತ್ತಷ್ಟು ಹೆಚ್ಚಿಸುತ್ತೇನೆ. ಅಚಲ ಬೆಂಬಲಕ್ಕಾಗಿ ಧನ್ಯವಾದಗಳು ಎಂದು ಹೇಳಿದ್ದಾರೆ.
ಈ ಹಿಂದೆ ಭೂ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಹೇಮಂತ್ ಸೊರೆನ್ ಅವರನ್ನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಪ್ರಶ್ನಿಸಿದ್ದರು. ಭಾನುವಾರ (ಇಂದು) ಮತ್ತೊಮ್ಮೆ ವಿಚಾರಣೆ ನಡೆಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ನಿನ್ನೆ ಮಧ್ಯಾಹ್ನ 1 ಗಂಟೆಗೆ ಅಧಿಕಾರಿಗಳು ಸೊರೆನ್ ಅಧಿಕೃತ ನಿವಾಸಕ್ಕೆ ಆಗಮಿಸಿ 7 ಗಂಟೆಗಳಿಗೂ ಹೆಚ್ಚು ಕಾಲ ವಿಚಾರಣೆ ನಡೆಸಿದ್ದರು. ಅಧಿಕಾರಿಗಳು ಮನೆಯಿಂದ ಹೊರಬಂದ ನಂತರ ಸಿಎಂ ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ್ದಾರೆ.
ಇತ್ತೀಚೆಗಷ್ಟೇ ಬಂಗಾಳದಲ್ಲಿ ದಾಳಿ ನಡೆದ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳಿಗೆ ಈ ಬಾರಿ ಸಿಐಎಸ್‌ಎಫ್ ರಕ್ಷಣೆ ನೀಡಲಾಗಿತ್ತು. ಸಿಐಎಸ್ಎಫ್ ತಂಡಗಳು ಸೊರೆನ್ ನಿವಾಸದ ಸುತ್ತಲಿನ ಚಟುವಟಿಕೆಗಳ ಮೇಲೆ ನಿಗಾ ಇಡಲು ಹೆಚ್ಚಿನ ರೆಸಲ್ಯೂಶನ್ ಬಾಡಿ ಕ್ಯಾಮರಾಗಳನ್ನು ಬಳಸಿದ್ದರು. ಜೆಎಂಎಂ ಪಕ್ಷದ ಪದಾಧಿಕಾರಿಗಳು ಗುಂಪು ಗುಂಪಾಗಿ ಬರುತ್ತಿದ್ದಂತೆ ಸಿಎಂ ನಿವಾಸದಿಂದ ನೂರು ಮೀಟರ್ ದೂರದಲ್ಲಿ ಪೊಲೀಸರು ತಡೆದಿದ್ದಾರೆ. ಆಡಳಿತಾರೂಢ ಜಾರ್ಖಂಡ್ ಮುಕ್ತಿ ಮೋರ್ಚಾ-ಜೆಎಂಎಂನ ಕಾರ್ಯಕಾರಿ ಅಧ್ಯಕ್ಷರಾಗಿರುವ ಹೇಮಂತ್ ಸೊರೆನ್ಗೆ ಈ ಹಿಂದೆ ಇಡಿ ಅಧಿಕಾರಿಗಳು ಏಳು ಬಾರಿ ನೋಟಿಸ್ ಜಾರಿಗೊಳಿಸಿದ್ದರು. ಹೀಗಿದ್ದರೂ ಅವರು ವಿಚಾರಣೆಗೆ ಹಾಜರಾಗಿರಲಿಲ್ಲ. ಎಂಟನೇ ಬಾರಿಗೆ ಸಮನ್ಸ್ ಬಂದ ಬಳಿಕ ವಿಚಾರಣೆ ಎದುರಿಸಲು ಮುಂದಾಗಿದ್ದರು.
ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾಗಿರುವ ಆರೋಪದಡಿ ಕಳೆದ ವರ್ಷ ನವೆಂಬರ್‌ನಲ್ಲಿ ಇಡಿ, ಸೊರೆನ್‌ರನ್ನು 9 ಗಂಟೆಗಳ ಕಾಲ ವಿಚಾರಣೆ ನಡೆಸಿತ್ತು. ನಂತರ ಭೂ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲೂ ಸೊರೆನ್ ಆರೋಪಿಯಾಗಿದ್ದರು. ಈ ಪ್ರಕರಣದಲ್ಲಿ ಐಎಎಸ್ ಅಧಿಕಾರಿ ಛವಿ ರಂಜನ್ ಸೇರಿದಂತೆ 14 ಮಂದಿಯನ್ನು ಬಂಧಿಸಲಾಗಿತ್ತು.
ಇದನ್ನೂ ಓದಿ: ಬಿಜೆಪಿ ಆಡಳಿತದಲ್ಲಿ ಉದ್ಯೋಗಕ್ಕಾಗಿ ಒಂದು ಪೈಸೆಯೂ ನೀಡಬೇಕಾಗಿಲ್ಲ: ಅಮಿತ್ ಶಾ