ತೇಜ್‌ಪುರ: ಚುನಾವಣೆಯನ್ನು ಪ್ರಜಾಪ್ರಭುತ್ವದ ಹಬ್ಬ ಎಂದೇ ಪರಿಗಣಿಸಲಾಗುತ್ತದೆ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ನಮ್ಮ ಭಾರತದಲ್ಲಿ ಈ ಹಬ್ಬ ಅಷ್ಟು ಚಿಕ್ಕದೇನಲ್ಲ. ಹೆಚ್ಚಿನ ಸಂಖ್ಯೆಯ ಚುನಾವಣಾ ಅಧಿಕಾರಿಗಳು ಮತ್ತು ಭದ್ರತಾ ಸಿಬ್ಬಂದಿ ತಮ್ಮ ಅವಿರತ ಪ್ರಯತ್ನದಿಂದ ಈ ಹಬ್ಬವನ್ನು ಯಶಸ್ವಿಗೊಳಿಸುತ್ತಾರೆ. ಪ್ರತಿಕೂಲ ಹವಾಮಾನ ಪರಿಸ್ಥಿತಿಗಳ ನಡುವೆ ದುರ್ಗಮ ಭೂಪ್ರದೇಶ, ಹದಗೆಟ್ಟ ರಸ್ತೆಗಳ ಮೂಲಕ ಎರಡು ದಿನಗಳ ಪ್ರಯಾಣದ ರೂಪದಲ್ಲಿ ಅದನ್ನು ಸಾಕಾರಗೊಳಿಸುವ ಪ್ರಯತ್ನ ನಡೆಯುತ್ತದೆ.
ಲೋಕಸಭೆಯ ಮೊದಲ ಹಂತದ ಚುನಾವಣೆ ಮತ್ತು ಅರುಣಾಚಲ ಪ್ರದೇಶದ ವಿಧಾನಸಭಾ ಚುನಾವಣೆಯೂ ಏಪ್ರಿಲ್ 19ರಂದು ನಡೆಯಲಿದೆ. ಇಂತಹ ಸಂದರ್ಭದಲ್ಲಿ ಭದ್ರತಾ ಪಡೆಗಳು, ಮತಗಟ್ಟೆ ಅಧಿಕಾರಿಗಳನ್ನೊಳಗೊಂಡ ಚುನಾವಣಾ ಆಯೋಗದ ತಂಡವು ಬುಧವಾರ ಭಾರತ-ಚೀನಾ ಇಂಡೋ-ಟಿಬೆಟಿಯನ್ ಗಡಿಯಲ್ಲಿರುವ ಮತದಾನ ಕೇಂದ್ರಕ್ಕೆ ತೆರಳಿದೆ. ಈ ಮತದಾನ ಕೇಂದ್ರವು ಭಾರತ-ಚೀನಾ ಗಡಿಯ ಸಮೀಪದಲ್ಲಿದೆ ಎಂಬುವುದು ಗಮನಾರ್ಹ.
ಪಶ್ಚಿಮ ಅರುಣಾಚಲ ಪ್ರದೇಶದ ತವಾಂಗ್ ಜಿಲ್ಲೆಯ ಮಕ್ಟೋ ವಿಧಾನಸಭಾ ಕ್ಷೇತ್ರದ ಲುಗುಥಾಂಗ್ ಮತಗಟ್ಟೆಯು ದೇಶದ ಅತಿ ಎತ್ತರದ ಮತದಾನ ಕೇಂದ್ರವಾಗಿದೆ. ಈ ಮತದಾನ ಕೇಂದ್ರವು 13,383 ಅಡಿ ಎತ್ತರದಲ್ಲಿದೆ. ಈ ಪ್ರದೇಶದಲ್ಲಿ ಯಾವುದೇ ಸಂಪರ್ಕ ಸಾಧನವಿಲ್ಲ. ವೈರ್‌ಲೆಸ್ ಸಂಪರ್ಕದ ಮೂಲಕ ಮಾತ್ರ ಸಂವಹನ ಸಾಧ್ಯವಾಗುತ್ತದೆ. ಮತಗಟ್ಟೆಗೆ ತಲುಪಲು ಎರಡು ದಿನ ಬೇಕಾಗುವ ಕಾರಣ ಮತಗಟ್ಟೆ ಸ್ಥಾಪಿಸಲು ಅಧಿಕಾರಿಗಳು ಮತ್ತು ಭದ್ರತಾ ಪಡೆಗಳು ಜಿಲ್ಲಾ ಕೇಂದ್ರವಾದ ತವಾಂಗ್‌ನಿಂದ ಬುಧವಾರವೇ ತೆರಳಿದ್ದರು. ಅತ್ಯಂತ ದೂರದ ಪ್ರದೇಶದಲ್ಲಿರುವ ಲಗುಥಾಂಗ್ ಮತದಾನ ಕೇಂದ್ರ ತಲುಪಬೇಕಿದ್ದರೆ, ತವಾಂಗ್‌ನಿಂದ ಜಂಗ್‌ಗೆ ಮತ್ತು ಜಂಗ್‌ನಿಂದ ಖಿರ್ಮುವೊಗೆ 12 ಗಂಟೆಗಳ ಕಾಲ ನಡೆಯಬೇಕು.
ಅದಕ್ಕಾಗಿಯೇ ಚುನಾವಣಾ ಅಧಿಕಾರಿಗಳು ಪ್ರತಿಕೂಲ ಹವಾಮಾನದ ನಡುವೆಯೂ ಬುಧವಾರ ಲುಂಗ್‌ಥಾಂಗ್‌ಗೆ ತಲುಪಿದ್ದಾರೆ. ಒಟ್ಟು 41 ಮತದಾರರಿರುವ ಈ ಮತಗಟ್ಟೆಗೆ ಹೋಗಲು ರಸ್ತೆ ಸಂಪರ್ಕವೇ ಇಲ್ಲ. ಹೀಗಾಗಿ ತಂಡ ಕಾಲ್ನಡಿಗೆಯಲ್ಲೇ ಸಾಗಿದೆ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಕಳೆದ ವರ್ಷ ರಾಜ್ಯದ ಹಲವು ಗಡಿ ಪ್ರದೇಶಗಳಲ್ಲಿ ಮೊಬೈಲ್ ಫೋನ್ ಸೇವೆ ಒದಗಿಸಿದೆ. ಆದರೆ, ಈ ಸೇವೆಯು ವಿಶೇಷವಾಗಿ ಸೇನಾ ಸಿಬ್ಬಂದಿಗೆ ಮೀಸಲಾಗಿದೆ. ಜನಸಾಮಾನ್ಯರಲ್ಲಿ ಈ ವ್ಯವಸ್ಥೆ ಮಾಡಿಲ್ಲ.
ಅರುಣಾಚಲ ಪ್ರದೇಶದಲ್ಲಿ ಏಪ್ರಿಲ್ 19ರಂದು ನಡೆಯಲಿರುವ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಹಿಮಾಲಯ ರಾಜ್ಯದಲ್ಲಿ ಒಟ್ಟು 8,86,848 ಜನರು ಮತ ಚಲಾಯಿಸಲಿದ್ದಾರೆ. ಇದರಲ್ಲಿ 4,01,601 ಮಹಿಳಾ ಮತದಾರರಿದ್ದಾರೆ. ರಾಜ್ಯಾದ್ಯಂತ 18-19 ವರ್ಷ ವಯಸ್ಸಿನ 46,144 ಮತದಾರರು, 80 ವರ್ಷಕ್ಕೂ ಮೇಲ್ಪಟ್ಟ 4,257 ಜನ ಮತದಾರರು ಮತ್ತು 232 100 ವರ್ಷ ದಾಟಿದ ಮತದಾರರಿದ್ದಾರೆ.
ಒಟ್ಟು 2,226 ಮತಗಟ್ಟೆಗಳ ಪೈಕಿ ಲಾಂಗ್ಡಿಂಗ್ ಜಿಲ್ಲೆಯ ಪುಮಾವೊ ಮತಗಟ್ಟೆಯಲ್ಲಿ ಅತಿ ಹೆಚ್ಚು ಮತದಾರರು (1,462) ಇದ್ದರೆ, ಅಂಜಾವ್ ಜಿಲ್ಲೆಯ ಹಯುಲಿಯಾಂಗ್ ವಿಧಾನಸಭಾ ಕ್ಷೇತ್ರದ ಮಾಲೆಗಾಂವ್ ಕೇವಲ ಒಬ್ಬ ಮಹಿಳಾ ಮತದಾರರನ್ನು ಹೊಂದಿದೆ. ಈ ಬಾರಿ ಚುನಾವಣಾ ಆಯೋಗವು 204 ನಗರ ಮತಗಟ್ಟೆಗಳು ಮತ್ತು 202 ಗ್ರಾಮೀಣ ಮತಗಟ್ಟೆಗಳಲ್ಲಿ ವೆಬ್‌ಕಾಸ್ಟಿಂಗ್ ಸೌಲಭ್ಯವನ್ನು ಸ್ಥಾಪಿಸಿದೆ. 750 ಮತಗಟ್ಟೆಗಳಲ್ಲಿ ವೆಬ್‌ಕಾಸ್ಟಿಂಗ್ ಕೂಡ ನಡೆಯಲಿದೆ ಮತ್ತು 342 ಮತಗಟ್ಟೆಗಳಲ್ಲಿ ಆಫ್‌ಲೈನ್ ಮತದಾನದ ಸೌಲಭ್ಯವಿದೆ. ದೂರದಲ್ಲಿರುವ ಮತಗಟ್ಟೆಗಳಿಗೆ ತಲುಪಲು ತಾಲಿ, ವಿಜಯನಗರ, ಪಿಪ್ಸೋರಾಂಗ್, ಟಕ್ಸಿಂಗ್, ಅನಿನಿ, ಟೋಟಿಂಗ್, ಮತ್ತಿತರ ಪ್ರದೇಶಗಳಿಗೆ ಹೆಲಿಕಾಪ್ಟರ್ ವ್ಯವಸ್ಥೆ ಮಾಡಲಾಗಿದೆ.