ನವದೆಹಲಿ: ಚುನಾವಣಾ ಬಾಂಡ್ಗಳಿಗೆ ಸಂಬಂಧಿಸಿದಂತೆ ಭಾರತೀಯ ಚುನಾವಣಾ ಆಯೋಗವು ಭಾನುವಾರ ಹೊಸ ವಿವರಗಳನ್ನು ಪ್ರಕಟಿಸಿದೆ. ಮುಚ್ಚಿದ ಲಕೋಟೆಯಲ್ಲಿ ರಾಜಕೀಯ ಪಕ್ಷಗಳು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಚುನಾವಣಾ ಬಾಂಡ್ ಮಾಹಿತಿ ಇದಾಗಿದೆ. ಇದರ ಪ್ರಕಾರ, ಕೇಂದ್ರದ ಆಡಳಿತಾರೂಢ ಬಿಜೆಪಿ 6,987 ಕೋಟಿ ರೂಪಾಯಿಗಳ ಚುನಾವಣಾ ಬಾಂಡ್‌ಗಳನ್ನು ಎನ್‌ಕ್ಯಾಶ್ ಮಾಡಿದೆ.
ಸುಪ್ರೀಂ ಕೋರ್ಟ್‌ನ ಮಧ್ಯಂತರ ಆದೇಶದ ನಿರ್ದೇಶನದಂತೆ ರಾಜಕೀಯ ಪಕ್ಷಗಳು ಮುಚ್ಚಿದ ಲಕೋಟೆಯಲ್ಲಿ ಚುನಾವಣಾ ಬಾಂಡ್‌ಗಳ ಮಾಹಿತಿಯನ್ನು ಸಲ್ಲಿಸಿವೆ. ರಾಜಕೀಯ ಪಕ್ಷಗಳಿಂದ ಪಡೆದ ಈ ಮಾಹಿತಿಯನ್ನು ತೆರೆಯದೆ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ.
''ರಾಜಕೀಯ ಪಕ್ಷಗಳಿಂದ ಸ್ವೀಕರಿಸಿದ ಅಂಕಿ-ಅಂಶಗಳನ್ನು ತೆರೆಯದೆ ಮುಚ್ಚಿದ ಲಕೋಟೆಯಲ್ಲಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾಗಿದೆ. 2024ರ ಮಾರ್ಚ್ 15ರಂದ ಸುಪ್ರೀಂ ಕೋರ್ಟ್‌ನ ಆದೇಶದ ಅನುಸಾರವಾಗಿ, ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಾರ್ ಪೆನ್ ಡ್ರೈವ್‌ನಲ್ಲಿ ಡಿಜಿಟೈಸ್ ಮಾಡಿದ ದಾಖಲೆಯೊಂದಿಗೆ ಮುಚ್ಚಿದ ಲಕೋಟೆಯಲ್ಲಿ ಭೌತಿಕ ಪ್ರತಿಗಳನ್ನು ಹಿಂದಿರುಗಿಸಿದ್ದಾರೆ. ಭಾರತೀಯ ಚುನಾವಣಾ ಆಯೋಗವು ಇಂದು ತನ್ನ ವೆಬ್‌ಸೈಟ್‌ನಲ್ಲಿ ಚುನಾವಣಾ ಬಾಂಡ್‌ಗಳ ಕುರಿತು ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಾರ್ನಿಂದ ಡಿಜಿಟೈಸ್ ಮಾಡಿದ ಫಾರ್ಮ್‌ನಲ್ಲಿ ಸ್ವೀಕರಿಸಿದ ಮಾಹಿತಿಯನ್ನು ಅಪ್‌ಲೋಡ್ ಮಾಡಿದೆ'' ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಯಾವ ಪಕ್ಷಕ್ಕೆ ಎಷ್ಟು ಕೋಟಿ?: ಚುನಾವಣಾ ಆಯೋಗದ ಹೊಸ ವಿವರಗಳ ಪ್ರಕಾರ, ಬಿಜೆಪಿ ಒಟ್ಟು 6,987.40 ಕೋಟಿ ರೂಪಾಯಿಗಳ ಚುನಾವಣಾ ಬಾಂಡ್‌ಗಳನ್ನು ಎನ್‌ಕ್ಯಾಶ್ ಮಾಡಿದೆ. 2019-20ರಲ್ಲಿ ಅತ್ಯಧಿಕ 2,555 ಕೋಟಿ ರೂ.ಗಳನ್ನು ಪಡೆದುಕೊಂಡಿದೆ. ಅಲ್ಲದೇ, ಎಲ್ಲ ರಾಜಕೀಯ ಪಕ್ಷಗಳಲ್ಲೂ ಚುನಾವಣಾ ಬಾಂಡ್ ಮೂಲಕ ಬಿಜೆಪಿ ಅತಿ ಹೆಚ್ಚಿನ ದೇಣಿಗೆ ಪಡೆದುಕೊಂಡಿದೆ.
ಬಿಜೆಪಿ ನಂತರ ತೃಣಮೂಲ ಕಾಂಗ್ರೆಸ್ ಇದ್ದು, ಚುನಾವಣಾ ಬಾಂಡ್‌ಗಳ ಮೂಲಕ 1,397 ಕೋಟಿ ರೂಪಾಯಿಗಳನ್ನು ಟಿಎಂಸಿ ಸ್ವೀಕರಿಸಿದೆ. ಇದಾದ ನಂತರ ಮೂರನೇ ಸ್ಥಾನದಲ್ಲಿ ಕಾಂಗ್ರೆಸ್ ಇದ್ದು, ಈ ಪಕ್ಷವು ಚುನಾವಣಾ ಬಾಂಡ್‌ಗಳ ಮೂಲಕ ಒಟ್ಟು 1,334.35 ಕೋಟಿ ರೂ. ಪಡೆದುಕೊಂಡಿದೆ. ಇದರ ನಂತರ ನಾಲ್ಕನೇ ಸ್ಥಾನದಲ್ಲಿ ಬಿಆರ್ಎಸ್ 1,322 ಕೋಟಿ ಮೌಲ್ಯದ ಬಾಂಡ್‌ಗಳನ್ನು ಎನ್‌ಕ್ಯಾಶ್ ಮಾಡಿದೆ ಎಂದು ಚುನಾವಣಾ ಆಯೋಗದ ಅಂಕಿ-ಅಂಶಗಳು ತಿಳಿಸಿವೆ.
ನಂತರದಲ್ಲಿ ಬಿಜೆಡಿ - 944.5 ಕೋಟಿ ರೂ., ವೈಎಸ್‌ಆರ್ ಕಾಂಗ್ರೆಸ್-442.8 ಕೋಟಿ ರೂ., ಟಿಡಿಪಿ-181.35 ಕೋಟಿ ರೂ., ಸಮಾಜವಾದಿ ಪಕ್ಷ-14.05 ಕೋಟಿ ರೂ., ಅಕಾಲಿದಳ-7.26 ಕೋಟಿ ರೂ., ಎಐಎಡಿಎಂಕೆ- 6.05 ಕೋಟಿ ರೂ. ಮತ್ತು ನ್ಯಾಷನಲ್ ಕಾನ್ಫರೆನ್ಸ್ ಪಕ್ಷವು 50 ಲಕ್ಷ ರೂ.ಗಳನ್ನು ಚುನಾವಣಾ ಬಾಂಡ್ ಮೂಲಕ ಸಂಗ್ರಹಿಸಿದೆ ಎಂದು ಆಯೋಗ ಮಾಹಿತಿ ನೀಡಿದೆ.
ಜೆಡಿಎಸ್ಗೂ 89.75 ಕೋಟಿ ದೇಣಿಗೆ: ಕರ್ನಾಟಕದ ಪ್ರಾದೇಶಿಕ ಪಕ್ಷದ ಜೆಡಿಎಸ್ ಕೂಡ ಚುನಾವಣಾ ಬಾಂಡ್‌ಗಳ ಮೂಲಕ ದೇಣಿಗೆ ಪಡೆದಿದೆ. ಜೆಡಿಎಸ್ ಒಟ್ಟು 89.75 ಕೋಟಿ ರೂ. ಮೌಲ್ಯದ ಬಾಂಡ್‌ಗಳನ್ನು ಸ್ವೀಕರಿಸಿದೆ. ಇದರಲ್ಲಿ ಎಲೆಕ್ಟೋರಲ್ ಬಾಂಡ್‌ಗಳ ಎರಡನೇ ಅತಿದೊಡ್ಡ ಖರೀದಿದಾರ ಮೇಘಾ ಇಂಜಿನಿಯರಿಂಗ್ ಕಂಪನಿಯಿಂದಲೇ 50 ಕೋಟಿ ರೂ. ಸಂದಾಯವಾಗಿದೆ ಎಂದು ಆಯೋಗ ತಿಳಿಸಿದೆ.
ಲಾಟರಿ ದೊರೆ ಸ್ಯಾಂಟಿಯಾಗೊ ಮಾರ್ಟಿನ್ ಫ್ಯೂಚರ್ ಗೇಮಿಂಗ್ ಕಂಪನಿಯು ಅತ್ಯಧಿಕ 1,368 ಕೋಟಿ ರೂಪಾಯಿಗಳ ಚುನಾವಣಾ ಬಾಂಡ್‌ಗಳ ಖರೀದಿಸಿದೆ. ಅದರಲ್ಲಿ ಸುಮಾರು ಶೇ.37ರಷ್ಟು ಡಿಎಂಕೆಗೆ ನೀಡಿದೆ. ಅಲ್ಲದೇ, ಮೇಘಾ ಇಂಜಿನಿಯರಿಂಗ್ ಕಂಪನಿ-105 ಕೋಟಿ ರೂ., ಇಂಡಿಯಾ ಸಿಮೆಂಟ್ಸ್ ಕಂಪನಿ-14 ಕೋಟಿ ರೂ. ಮತ್ತು ಸನ್ ಟಿವಿಯಿಂದ 100 ಕೋಟಿ ರೂ.ಗಳನ್ನು ಡಿಎಂಕೆ ಸ್ವೀಕರಿಸಿದೆ.
ತಮ್ಮ ದಾನಿಗಳ ಗುರುತನ್ನು ಬಹಿರಂಗಪಡಿಸಿದ ಕೆಲವೇ ರಾಜಕೀಯ ಪಕ್ಷಗಳಲ್ಲಿ ಡಿಎಂಕೆ ಸೇರಿದೆ. ಆದರೆ, ಬಿಜೆಪಿ, ಕಾಂಗ್ರೆಸ್, ಟಿಎಂಸಿ ಮತ್ತು ಎಎಪಿಯಂತಹ ಪ್ರಮುಖ ಪಕ್ಷಗಳು ತಮ್ಮ ವಿವರಗಳನ್ನು ಚುನಾವಣಾ ಆಯೋಗಕ್ಕೆ ನೀಡಿಲ್ಲ. ಎಐಎಂಐಎಂ ಮತ್ತು ಬಿಎಸ್‌ಪಿ ಯಾವುದೇ ಚುನಾವಣಾ ಬಾಂಡ್ ದೇಣಿಕೆ ಪಡೆದಿಲ್ಲ ಎಂದು ಹೇಳಿಕೊಂಡಿದೆ. ಸಿಪಿಐ(ಎಂ) ಚುನಾವಣಾ ಬಾಂಡ್‌ಗಳ ಮೂಲಕ ಹಣವನ್ನು ಸ್ವೀಕರಿಸುವುದಿಲ್ಲ ಎಂದು ಘೋಷಿಸಿದೆ.
ಇದನ್ನೂ ಓದಿ: ಚುನಾವಣಾ ಬಾಂಡ್ ಸಂಬಂಧ ಸುಪ್ರೀಂ ನೇತೃತ್ವದಲ್ಲಿ ತನಿಖೆ ನಡೆಸಿ, ಅಲ್ಲಿಯವರೆಗೆ ಬಿಜೆಪಿ ಖಾತೆ ಜಪ್ತಿ ಮಾಡಿ: ಖರ್ಗೆ